ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಕಡಬ ಬಳಿ ಹಾನಿಗೆ ಒಳಗಾದ ಬಲ್ಯ ಸರ್ಕಾರಿ ಶಾಲೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ (ಬಲತುದಿ) ಭೇಟಿ ನೀಡಿದರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದ ಬಿರುಸಿನ ಗಾಳಿಯೊಂದಿಗೆ ಬಿಟ್ಟುಬಿಟ್ಟು ಧಾರಾಕಾರ ಮಳೆಯಾಗುತ್ತಿದ್ದು ಶೀತಗಾಳಿಯ ಪ್ರಭಾವ ಹೆಚ್ಚಾಗಿದೆ.
ಉಪ್ಪಿನಂಗಡಿ ಕಡಬ ಬಳಿಯ ಬಲ್ಯ ಸರ್ಕಾರಿ ಶಾಲೆಯ ಹೆಂಚುಗಳು ಹಾರಿಹೊಗಿದ್ದು ಅಪಾರ ಹಾನಿಯಾಗಿದೆ.
ಸೋಮವಾರ ಮುಂಜಾನೆ 6 ಗಂಟೆಯ ವೇಳೆ ಭಾರಿ ಗಾಳಿಯೊಂದಿಗೆ ಮುಸಲಧಾರೆಯಾಗಿದೆ. ಜಿಲ್ಲೆಯ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಬೆಳಿಗ್ಗೆ ರಜೆ ಘೋಷಿಸಿದ್ದಾರೆ. ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಬೆಳ್ತಂಗಡಿ ತಾಲ್ಲೂಕು ಪಟ್ರಮೆಯಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 121 ಮಿಲಿಮೀಟರ್ ಮಳೆಯಾಗಿದೆ. ಸುಳ್ಯದ ಕೆಮ್ರಾಜೆ, ದೇವಚಳ್ಳ ಮತ್ತು ಬಂಟ್ವಾಳ ತಾಲ್ಲೂಕಿನ ಬಾಳೆಪುಣಿಯಲ್ಲಿ ತಲಾ 99.5 ಮಿಮೀ, ಪುತ್ತೂರಿನ ಕೊಳ್ತಿಗೆ ಮತ್ತು ಮಂಗಳೂರು ತಾಲ್ಲೂಕಿನ ನೆಲ್ಲಿಕಾರುವಿನಲ್ಲಿ ತಲಾ 94 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಾಲೆ ಕಟ್ಟಡದ ಛಾವಣಿಗೆ ಹಾನಿ; ತರಗತಿ ಕೊಠಡಿಯಲ್ಲಿ ನೀರು
ಉಪ್ಪಿನಂಗಡಿ: ಕಳೆದ 4 ದಿನಗಳಿಂದ ಕಡಬ ತಾಲ್ಲೂಕು ಪರಿಸರದಲ್ಲಿ ವ್ಯಾಪಕವಾಗಿ ಮಳೆ ಸುರಿದಿದ್ದು, ಭಾನುವಾರ ಹಲವೆಡೆ ಸುಂಟರ ಗಾಳಿ ಬೀಸಿ ಹಾನಿ ಉಂಟು ಮಾಡಿದೆ. ಇದರಿಂದ ಕಡಬ ತಾಲ್ಲೂಕಿನ ಬಲ್ಯ ಸರ್ಕಾರಿ ಶಾಲೆಯ ಛಾವಣಿ ಹಾರಿಹೋಗಿದೆ. ಹೆಂಚುಗಳು ಕೆಳಗೆ ಬಿದ್ದಿದ್ದು ತರಗತಿ ಕೊಠಡಿಗಳಲ್ಲಿ ಮಳೆನೀರು ತುಂಬಿದೆ.
‘ಇನ್ನು ಮುಂದೆ ತರಗತಿ ನಡೆಸಬೇಕಾದರೆ ಕಟ್ಟಡವನ್ನು ತಕ್ಷಣ ದುರಸ್ತಿ ಮಾಡಬೇಕು’ ವಿದ್ಯಾರ್ಥಿಗಳ ಪೋಷಕರು ಹೇಳಿದ್ದಾರೆ. ಸ್ಥಳಕ್ಕೆ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಗೌಡ, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಕೆ, ಕುಟ್ರುಪ್ಪಾಡಿ ಗ್ರಾಮ ಪಚಾಯಿತಿ ಸದಸ್ಯೆ
ಮೀನಾಕ್ಷಿ ನೆಲ್ಲ, ಎಸ್‌ಡಿಎಂಸಿ ಅಧ್ಯಕ್ಷ ವಿಲ್ಸನ್ ವಿ.ಟಿ, ಸದಸ್ಯ ಗಣೇಶ್ ಭಟ್ ದೇವರಡ್ಕ, ಮಾಜಿ ಅಧ್ಯಕ್ಷ ಪಿ.ಟಿ. ಜೋಸೆಫ್, ಪೂರ್ವ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಪೂರ್ಣೇಶ್ ಗೌಡ ಬಿ. ಎಂ, ಸಾಮಾಜಿಕ ಕಾರ್ಯಕರ್ತ ನಾರಾಯಣ ಎನ್ ಕೊಲ್ಲಿಮಾರು ಭೇಟಿ ನೀಡಿದರು. ಭಾನುವಾರದಿಂದ ಮಳೆಯ ಅಬ್ಬರ ಜೋರಾಗಿದ್ದು ಅಡಿಕೆ, ರಬ್ಬರ್, ಬಾಳೆ ಗಿಡಗಳು ನೆಲಕ್ಕೆ ಉರುಳಿವೆ.
ಶಾಸಕಿ ಭಾಗೀರಥಿ ಭೇಟಿ, ಪರಿಶೀಲನೆ: ಹಾನಿಗೊಳಗಾದ ಬಲ್ಯ ಸರ್ಕಾರಿ ಶಾಲೆಗೆ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿಗೆ ಕರೆ ಮಾಡಿ ಮಳೆ ಹಾನಿ ಯೋಜನೆಯಲ್ಲಿ ಶಾಲೆಯ ದುರಸ್ಥಿಗೆ ತಕ್ಷಣ ಹಣ ಬಿಡುಗಡೆ ಮಾಡುವಂತೆ ಸೂಚಿಸಿದರು. ಅದಕ್ಕೂ ಮೊದಲು ತರಗತಿಗಳನ್ನು ನಡೆಸಲು ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ತಹಶೀಲ್ದಾರ್ ಹಾಗೂ ಶಿಕ್ಷಣಾಧಿಕಾರಿಗೆ ನಿರ್ದೇಶನ ನೀಡುವಂತೆ ತಿಳಿಸಿದರು. ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ,
ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ, ಮಾಜಿ ಅಧ್ಯಕ್ಷ ಜನಾರ್ದನ ಗೌಡ ಇದ್ದರು.
ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಕಡಬ ಬಳಿಯ ಬಲ್ಯ ಸರ್ಕಾರಿ ಶಾಲೆಯ ಹೆಂಚುಗಳು ಹಾರಿಹೊಗಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.