ADVERTISEMENT

ಮಂಗಳೂರು–ಮೂಡುಬಿದಿರೆ ಮಾರ್ಗದ KSRTC: ಶೇ 70ರಷ್ಟು ‘ಶಕ್ತಿ’ ಪ್ರಯಾಣಿಕರು

ಮಂಗಳೂರು–ಮೂಡುಬಿದಿರೆ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್

ಸಂಧ್ಯಾ ಹೆಗಡೆ
Published 2 ಜನವರಿ 2025, 5:45 IST
Last Updated 2 ಜನವರಿ 2025, 5:45 IST
ಕಾರ್ಕಳ– ಮೂಡುಬಿದಿರೆ– ಮಂಗಳೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್
ಕಾರ್ಕಳ– ಮೂಡುಬಿದಿರೆ– ಮಂಗಳೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್   

ಮಂಗಳೂರು: ಮಂಗಳೂರು– ಮೂಡುಬಿದಿರೆ–ಕಾರ್ಕಳ ನಡುವೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಪ್ರಾರಂಭವಾದ 18 ದಿನಗಳಲ್ಲಿ 21ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅದರಲ್ಲಿ ಶೇ 70ರಷ್ಟು ಮಹಿಳಾ ಪ್ರಯಾಣಿಕರು.

ಮಂಗಳೂರು– ಮೂಡುಬಿದಿರೆ– ಕಾರ್ಕಳ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಮಾತ್ರ ಸಂಚರಿಸುತ್ತಿದ್ದವು. ಈ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ಸೇವೆ ಪ್ರಾರಂಭಿಸಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿತ್ತು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ನಾಲ್ಕು ಬಸ್‌ಗಳ ಸಂಚಾರಕ್ಕೆ ತಾತ್ಕಾಲಿಕ ಪರ್ಮಿಟ್‌ಗೆ ಅನುಮತಿ ನೀಡಿದ್ದರು. ಅದರಂತೆ ಕೆಎಸ್‌ಆರ್‌ಟಿಸಿ ಡಿಸೆಂಬರ್ 13ರಿಂದ ಈ ಮಾರ್ಗದಲ್ಲಿ ಬಸ್ ಸೇವೆ ಪ್ರಾರಂಭಿಸಿದೆ.

ಎರಡು ಬಸ್‌ಗಳು ಕಾರ್ಕಳ– ಮೂಡುಬಿದಿರೆಯಿಂದ ಮಂಗಳೂರಿಗೆ ಹಾಗೂ ಎರಡು ಬಸ್‌ಗಳು ಮಂಗಳೂರಿನಿಂದ ಮೂಡುಬಿದಿರೆ–ಕಾರ್ಕಳ ಮಾರ್ಗದಲ್ಲಿ ಸಂಚರಿಸುತ್ತಿವೆ. ಮೊದಲ ದಿನವೇ 845ಕ್ಕೂ ಹೆಚ್ಚು ಪ್ರಯಾಣಿಕರು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸಿದ್ದರು. ಎರಡನೇ ದಿನದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪ್ರಸ್ತುತ ದಿನಕ್ಕೆ ಸರಾಸರಿ 1,200ಕ್ಕೂ ಪ್ರಯಾಣಿಕರು ಈ ಬಸ್‌ಗಳನ್ನು ಅವಲಂಬಿಸಿದ್ದಾರೆ. ಅವರಲ್ಲಿ ಶಾಲಾ– ಕಾಲೇಜು ವಿದ್ಯಾರ್ಥಿನಿಯರು, ಮಹಿಳಾ ಪ್ರಯಾಣಿಕರು ಹೆಚ್ಚಿನವರು.

ADVERTISEMENT

‘ಸರ್ಕಾರಿ ಬಸ್ ಪ್ರಾರಂಭಿಸಿದ ಮೇಲೆ ನಮಗೆ ತುಂಬಾ ಅನುಕೂಲವಾಗಿದೆ. ಖಾಸಗಿ ಬಸ್‌ಗಳಲ್ಲಿ ನೂಕುನುಗ್ಗಲಿನಿಂದ ಪ್ರಯಾಣಿಸುವುದು ತಪ್ಪಿದೆ’ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಪ್ರೇರಣಾ ತಿಳಿಸಿದರು.

‘ತಿರುವುಗಳು ಹೆಚ್ಚಿರುವ ಕಾರಣ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಮಂಗಳೂರು– ಮೂಡುಬಿದಿರೆ ನಡುವೆ ನಿಗದಿತ ಸಮಯದಂತೆ ಒಂದೂವರೆ ತಾಸಿನಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಐದರಿಂದ ಆರು ಟ್ರಿಪ್ ಮಾತ್ರ ನಡೆಯುತ್ತಿದೆ. ಇದು ನಮಗೆ ಮಾತ್ರವಲ್ಲ, ಖಾಸಗಿ ಬಸ್‌ಗಳ ಸಮಸ್ಯೆಯೂ ಹೌದು’ ಎಂದು ಚಾಲಕರೊಬ್ಬರು ತಿಳಿಸಿದರು.

‘ಕಿ.ಮೀ.ಗೆ ₹40ಕ್ಕಿಂತ ಹೆಚ್ಚು ಆದಾಯ’

‘ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಿಗೆ ಪ್ರತಿದಿನ ಕಿ.ಮೀ.ಗೆ ₹40ಕ್ಕಿಂತ ಹೆಚ್ಚು ಆದಾಯ ಇದೆ. ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ಶೇ 70ರಷ್ಟು ಮಹಿಳಾ ಪ್ರಯಾಣಿಕರು ಈ ಬಸ್ ಅವಲಂಬಿಸಿದ್ದಾರೆ. ರಸ್ತೆ ದುರಸ್ತಿ ಕಾರ್ಯ ಮತ್ತಿತರ ಕಾರಣಗಳಿಂದ ಪ್ರತಿದಿನ ಏಳು ಸಿಂಗಲ್ ಟ್ರಿಪ್ ಪೂರ್ಣಗೊಳಿಸುವುದು ಚಾಲಕರಿಗೆ ಸವಾಲಾಗಿದೆ. ಸಮಯ ಪಾಲನೆಯಲ್ಲಿ ಕೊಂಚ ವ್ಯತ್ಯಯವಾಗುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ (ಡಿ.13ರಿಂದ ಡಿ.30ರವರೆಗೆ)

ಮಹಿಳಾ ಪ್ರಯಾಣಿಕರು; 14800

ಉಳಿದ ಪ್ರಯಾಣಿಕರು; 6400

ಒಟ್ಟು; 21200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.