ADVERTISEMENT

ಮಲಯಾಳ ಭಾಷಾ ಮಸೂದೆ ತಡೆ ಹಿಡಿಯಲು ಮನವಿ

ಕೇರಳ ರಾಜ್ಯಪಾಲರ ಭೇಟಿಯಾದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಯೋಗ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:48 IST
Last Updated 8 ಜನವರಿ 2026, 2:48 IST
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿಯೋಗದ ಸದಸ್ಯರು ಕಾಸರಗೋಡಿನಲ್ಲಿಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ ಅವರನ್ನು ಬುಧವಾರ ಭೇಟಿಯಾಗಿ ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚಿಸಿದರು  
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿಯೋಗದ ಸದಸ್ಯರು ಕಾಸರಗೋಡಿನಲ್ಲಿಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ ಅವರನ್ನು ಬುಧವಾರ ಭೇಟಿಯಾಗಿ ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚಿಸಿದರು     

ಮಂಗಳೂರು: ಕೇರಳ ವಿಧಾನಸಭೆಯಲ್ಲಿ ಈಚೆಗೆ ಅಂಗೀಕರಿಸಲಾದ ‘ಮಲಯಾಳ ಭಾಷಾ ಮಸೂದೆ-2025’ ಅಸಂವಿಧಾನಿಕ ಮತ್ತು  ಕಾಸರಗೋಡು ಜಿಲ್ಲೆಯಲ್ಲಿರುವ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆರೋಪಿಸಿದೆ.

ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ ಅವರನ್ನು ಕಾಸರಗೋಡಿನಲ್ಲಿ ಬುಧವಾರ ಭೇಟಿ ಮಾಡಿದ ಪ್ರಾಧಿಕಾರದ ನಿಯೋಗವು, ಈ ಮಸೂದೆಯನ್ನು ತಡೆಹಿಡಿಯುವಂತೆ ಮನವಿ ಸಲ್ಲಿಸಿದೆ. 

‘ಕಾಸರಗೋಡು ಜಿಲ್ಲೆಯಲ್ಲಿ ಮತ್ತು ಕನ್ನಡ ಭಾಷಿಕರು ಹೆಚ್ಚಾಗಿ ಇರುವ ಕಡೆ ವಿದ್ಯಾರ್ಥಿಗಳು ಮೊದಲ ಭಾಷೆಯಾಗಿ ಕನ್ನಡವನ್ನು ಮತ್ತು ಎರಡನೇ ಭಾಷೆಯಾಗಿ ಬೇರೊಂದು ಭಾಷೆಯನ್ನು ಕಲಿಯುತ್ತಿದ್ದಾರೆ. ಹೊಸ ಮಸೂದೆ ಪ್ರಕಾರ ಕಾಸರಗೋಡು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮತ್ತು ಖಾಸಗಿ ಕನ್ನಡ ಶಾಲೆಗಳಲ್ಲಿ1ರಿಂದ 10ನೇ ತರಗತಿವರೆಗೆ ಮೊದಲ ಭಾಷೆಯಾಗಿ ಮಲಯಾಳವನ್ನು ಬೋಧಿಸುವುದು ಕಡ್ಡಾಯವಾಗಲಿದೆ. ಕನ್ನಡ ವಿದ್ಯಾರ್ಥಿಗಳು ಮಲಯಾಳ ಭಾಷೆಯನ್ನು ತಿಳಿಯದಿದ್ದರೂ ಬಲವಂತವಾಗಿ ಕಲಿಯಬೇಕಾಗುತ್ತದೆ’ ಎಂದು ಪ್ರಾಧಿಕಾರವು ಕಳವಳ ವ್ಯಕ್ತಪಡಿಸಿದೆ.

ADVERTISEMENT

‘ಸಂವಿಧಾನದ ಪ್ರಕಾರ ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಕಡ್ಡಾಯ. ಕಾಸರಗೋಡು ಜಿಲ್ಲೆಯ ಪೊಲೀಸ್ ಠಾಣೆಗಳು, ರೈಲು ನಿಲ್ದಾಣಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾಹಿತಿ ಫಲಕಗಳು ಕನ್ನಡದಲ್ಲೂ ಇರಬೇಕು. ಸರ್ಕಾರಿ ಹಾಗೂ ಸಾರ್ವಜನಿಕ ಕಚೇರಿಗಳ ಪತ್ರ ವ್ಯವಹಾರವನ್ನು ಸ್ಥಳೀಯ ಕನ್ನಡ ಭಾಷೆಯಲ್ಲಿ ನಡೆಸಬೇಕು. ಕಾಸರಗೋಡು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಸ್ಥಳೀಯ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗೂ ಜನಸಂಖ್ಯೆ ಆಧಾರದಲ್ಲಿ ಆದ್ಯತೆ ನೀಡಬೇಕು. ಕನ್ನಡಿಗರ ಅಹವಾಲು ಆಲಿಸಲು ಕಾಸರಗೋಡು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಕೇರಳದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಹಿತಗಳ ರಕ್ಷಣೆಗೆ ಕ್ರಮ ವಹಿಸುವಂತೆ  ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ಸಚಿವಾಲಯ ಕೇರಳ ಸರ್ಕಾರಕ್ಕೆ ಹಲವಾರು ಬಾರಿ ಸೂಚಿಸಿದೆ. ಆದರೂ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ’ ಎಂದೂ ನಿಯೋಗವು ಆರೋಪಿಸಿದೆ. 

ನಿಯೋಗದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಸದಸ್ಯ ಸುಬ್ಬಯ್ಯಕಟ್ಟೆ, ತೆಕ್ಕೆಕೆರೆ ಶಂಕರನಾರಾಯಣ ಭಟ್,  ಜಯಪ್ರಕಾಶ ನಾರಾಯಣ ತೊಟ್ಟೆತೊಡು, ಮುರಳೀಧರ ಬಲ್ಲೂಕರಾಯ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.