ADVERTISEMENT

ಕಾಸರಗೋಡು: ಭಕ್ತಿಭಾವ ಸುರಿಸಿದ ನಾಯರ್ ಸಹೋದರಿಯರು

​ಪ್ರಜಾವಾಣಿ ವಾರ್ತೆ
Published 10 ಮೇ 2025, 11:19 IST
Last Updated 10 ಮೇ 2025, 11:19 IST
ಕೃಷ್ಣ ವೇಷಧಾರಿ ಬಾಲಕ ಕಾರ್ತಿಕೇಯನ್ ಜೊತೆ ವೀಣಾ ನಾಯರ್ ಮತ್ತು ಧನ್ಯಾ ನಾಯರ್
ಕೃಷ್ಣ ವೇಷಧಾರಿ ಬಾಲಕ ಕಾರ್ತಿಕೇಯನ್ ಜೊತೆ ವೀಣಾ ನಾಯರ್ ಮತ್ತು ಧನ್ಯಾ ನಾಯರ್   

ಕಾಸರಗೋಡು: ಪೆರಿಯದ ಗೋಕುಲಂ ಗೋಶಾಲೆಯಲ್ಲಿ ಸರ್ವ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ವೀಣಾ ನಾಯರ್ ಮತ್ತು ಧನ್ಯಾ ನಾಯರ್ ಅವರು ಭಾಗವತದ ನವವಿಧ ಭಕ್ತಿಯನ್ನು ಆಧರಿಸಿ ನೃತ್ಯದ ಮೂಲಕ ಗುರುವಾರ ಆನಂದಾಮೃತ ಸುರಿಸಿದರು.

ನಾಯರ್ ಸಹೋದರಿಯರೆಂದೇ ಖ್ಯಾತರಾಗಿರುವ ವೀಣಾ ಮತ್ತು ಧನ್ಯಾ ಅವರ ನೃತ್ಯವು ಗೋಶಾಲೆಯಲ್ಲಿ ಭಕ್ತಿಯ ಸಂಚಾರ ಮೂಡಿಸಿತು. ಕೃಷ್ಣನ ಪಾತ್ರದಲ್ಲಿ ವೇದಿಕೆಗೆ ಬಂದ ಐದು ವರ್ಷದ ಕಾರ್ತಿಕೇಯನ್ ನೃತ್ಯಪ್ರಿಯರನ್ನು ರಂಜಿಸುವುದರೊಂದಿಗೆ ಗೋಶಾಲೆಯಲ್ಲಿ ದೈವೀ ಶಕ್ತಿ ಮೂಡುವಂತೆ ಮಾಡಿದನು.

ಒಂಬತ್ತನೇ ದಿನವಾದ ಗುರುವಾರ ತಿರುವನಂತಪುರಂನ ಕಲ್ಯಾಣಿ ವಿ ಪ್ರಶಾಂತ್ ಮತ್ತು ಶ್ರುತಿ, ಕೊಲ್ಲಂನ ಶ್ರೀ ಭದ್ರಾ, ಬೆಂಗಳೂರಿನ ದೀಪಾ ಮತ್ತು ದೇವಿಕಾ ಪರಮೇಶ್ವರ, ಮುಂಬೈಯ ಆನಂದ್ ಸಚ್ಚಿದಾನಂದನ್, ಪ್ರಿಯಾಂಜಲಿ ರಾವ್, ತ್ರಿಶೂರಿನ ಕಾವ್ಯಾ ಮತ್ತು ಸೌಪರ್ಣಿಕಾ, ನೀಲೇಶ್ವರಂನ ಸುರೇಂದ್ರನ್ ಪಟ್ಟೇನಾ, ಪಯ್ಯನೂರಿನ ಪೆರುಂ ಪಟ್ಟೇನಾ, ಚೆನ್ನೈನ ಕೃಷ್ಣವೇಣಿ ಮೊದಲಾದವರು ನಂದಿ ಮಂಟಪದಲ್ಲಿ ನೃತ್ಯ ಪ್ರದರ್ಶಿಸಿದರು. ನೃತ್ಯ ಶಿಕ್ಷಕ ಸುರೇಂದ್ರನ್ ಪಟ್ಟಣ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಹತ್ತನೇ ದಿನವಾದ ಶನಿವಾರ ಅಪರ್ಣಾ ಕೇಕುಣ್ಣಾಯ, ದೇಶಾಕ್ಷಿ, ಗಾಯತ್ರಿ, ಅದಿರಾ ರಾಜು, ನಂದನ, ನೀತು ಕಲಾಕ್ಷೇತ್ರ, ದೀಪಕ್ ಪುತ್ತೂರ್, ಶೀತಲ್ ಸುರೇಂದ್ರನ್, ಬೇಬಿ ಆದ್ಯ ಲಕ್ಷ್ಮೀ, ರೇಶ್ಮಾ ಜಿ, ರಶ್ಮಿ ಅಯ್ಯಂಗಾರ್, ಹಿರಣ್ಮಯಿ ಆನಂದ್, ಮಂಗಳಾ ಶೇಖರ್, ದಿವ್ಯಾ ಭಟ್, ಮೇಘನಾ ಭಾರದ್ವಾಜ್, ದರ್ಶನಾ ಭಾಸ್ಕರ್‌ ಹಾಗೂ ಮಹಿತಿ ಕಣ್ಣನ್ ಪ್ರದರ್ಶನ ನೀಡಲಿದ್ದಾರೆ.

ವಿವಿಧ ರಾಜ್ಯಗಳ ನಾಟ್ಯಸಂಗಮ

ನಾಲ್ಕನೇ ದಿನ ವಿವಿಧ ರಾಜ್ಯಗಳ ಕಲಾವಿದರ ನೃತ್ಯವೈಭವ ಸಹೃದಯರ ಮನಸೂರೆಗೊಂಡಿತು.

ಗೋಕುಲಂ ಗೋಶಾಲೆಯಲ್ಲಿ ನೃತ್ಯವೈಭವ ಪ್ರದರ್ಶಿಸಿದ ಕಲಾವಿದೆಯರು

ಬೆಂಗಳೂರಿನ ರಮಾ ವೇಣುಗೋಪಾಲ್ ಮತ್ತು ಶಿಷ್ಯವೃಂದದ 'ಕಲಾ ಕಲ್ಪಕ್ಷೇತ್ರ' ತಂಡ ಮತ್ತು ಬೆಂಗಳೂರಿನ ವೈಷ್ಣವಿ ನೃತ್ಯಶಾಲೆ ತಂಡದ ಭರತನಾಟ್ಯ ಆಮೋದ ನೀಡಿದ ವೇದಿಕೆಯಲ್ಲಿ ಮುಂಬೈಯ ಆದಿತಿ ಅಖಿಲ್ ಮತ್ತು ವೈಷ್ಣವಿ ಸೂರ್ಯನಾರಾಯಣನ್ ನೃತ್ಯ ಸೇವೆಯೂ ನಡೆಯಿತು. ಚೆನ್ನೈನ ಮಹಿತಾ ಸುರೇಶ್, ಕೊಚ್ಚಿಯ ರಮಾ ನೃತ್ಯವಿಹಾರ, ಉಡುಪಿಯ ಪನ್ನಗ ರಾವ್ ಮತ್ತು ಅನಘಶ್ರೀ ಅವರ ನೃತ್ಯ ಪ್ರದರ್ಶನವೂ ರಂಗೇರಿತು.

ಹೆಸರಾಂತ ಕಲಾವಿದೆ ಉಷಾರಾಣಿ ಅವರಿಂದ ಮೋಹಿನಿಯಾಟಂ ರೋಮಾಂಚಕ ಅನುಭವ ನೀಡಿತು. ವಿಶಾಖಪಟ್ಟಣಂ ತಂಡದವರು ಸೌಂದರ್ಯ ಮದ್ದಾಳಿ ಮತ್ತು ಕುಚಿಪುಡಿ ನೃತ್ಯ ಪ್ರದರ್ಶನ ನೀಡಿದರು. ಮುಂಬೈಯ ಸುಜಾತಾ ನಾಯರ್ ಹಾಗೂ ಪುತ್ರಿ ಶರಣ್ಯಾ ಕೂಡ ಮೋಹಿನಾಟಂನಲ್ಲಿ ಜೊತೆಯಾದರು. ನೃತ್ಯಗುರು ನಿಲೇಶ್ವರಂನ ಕಲಾಮಂಡಲಂ ಅಜಿತ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಸಿ.ಎಚ್ ಕುಂಞಂಬು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.