ADVERTISEMENT

ಮಂಜೇಶ್ವರದಲ್ಲಿ ನಿಷೇಧಾಜ್ಞೆ; ಹಿಂಸಾಚಾರ ಹಲವರಿಗೆ ಗಾಯ

ಶಬರಿಮಲೆ ಯುವತಿ ಪ್ರವೇಶ: ಹಿಂಸೆಯ ಬಣ್ಣ ಬದಲಿಸಿದ ಹರತಾಳ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 13:18 IST
Last Updated 4 ಜನವರಿ 2019, 13:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಸರಗೋಡು: ಮಂಜೇಶ್ವರ ತಾಲ್ಲೂಕಿನಲ್ಲಿ ನಡೆದ ವ್ಯಾಪಕ ಹಿಂಸಾಚಾರ ನಿಯಂತ್ರಿಸಲು ಕಾಸರಗೋಡು ಜಿಲ್ಲಾಧಿಕಾರಿ ಶುಕ್ರವಾರ ರಾತ್ರಿ 11 ಗಂಟೆಯವರೆಗೆ 144 ಸೆಕ್ಷನ್‌ನಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಗುರುವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿದ್ದು, ಹಲವರನ್ನು ಬಂಧಿಸಲಾಗಿದೆ.

ಮಂಜೇಶ್ವರ ಸಹಿತ ಕಾಸರಗೋಡು ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಿಂಸಾಚಾರ ಮುಂದುವರಿಯುತ್ತಿರುವುದರಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಶಬರಿಮಲೆಯಲ್ಲಿ ಯುವತಿಯರು ಪ್ರವೇಶಿಸಿರುವುದನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಅಯ್ಯಪ್ಪ ಕ್ರಿಯಾ ಸಮಿತಿ ಗುರುವಾರ ನಡೆಸಿದ ಹರತಾಳದ ಸಂದರ್ಭದಲ್ಲಿ ಮಂಜೇಶ್ವರ ತಾಲೂಕಿನಲ್ಲಿ ವ್ಯಾಪಾಕ ಹಿಂಸಾಚಾರ ನಡೆದಿದ್ದುವು. ಸಮಸ್ಯೆ ಕೋಮು ಬಣ್ಣಕ್ಕೆ ತಿರುಗುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಹಿಂಸಾಚಾರದಲ್ಲಿ ಅಯ್ಯಪ್ಪ ಭಕ್ತರ ಸಹಿತ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ADVERTISEMENT

ಸೂಕ್ಷ್ಮ ಸಂವೇದಿ ಪ್ರದೇಶಗಳಲ್ಲಿ ಪೊಲೀಸರು ಬಿಗು ಬಂದೋಬಸ್ತು ಏರ್ಪಡಿಸಿದ್ದಾರೆ. ಶಬರಿಮಲೆಗೆ ಸಾಗುವ
ವಾಹನಗಳಿಗೆ ಗರಿಷ್ಠ ಭದ್ರತೆ ಒದಗಿಸಲಾಗಿದೆ.

ಹರತಾಳಧ ಸಂದರ್ಭದಲ್ಲಿ ಮಂಜೇಶ್ವರ ಕಾಲೇಜಿನ ಬಳಿಯ ಅಂಬೇಡ್ಕರ್ ನಗರ ನಿವಾಸಿ ಅಯ್ಯಪ್ಪ ವ್ರತಧಾರಿ ಮನೀಶ್ (32), ಕಡಂಬಾರು ಒಳಗುಡ್ದೆಯ ಕಿರಣ್ ಕುಮಾರ್ (27), ಕಡಂಬಾರು ವಿಷ್ಣು ಮೂರ್ತಿ ದೇವಸ್ಥಾನದ ಬಳಿಯ ಗುರುಪ್ರಸಾದ್ (22), ಕುಂಜತ್ತೂರು ಸನ್ನಡ್ಕದ ದಾಮೋದರ ಶೆಟ್ಟಿ (51), ಮೊರತ್ತಣೆ ಅರಿಂಗುಳದ ಕಿಶನ್ (21) ಕೊಡ್ಲಮೊಗರು ತುಪ್ಪೆ ನಿವಾಸಿ ಧನುಶ್ (20)ಎಂಬುವವರು ಹಲ್ಲೆಗೊಳಗಾಗಿ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂರು ಬೈಕ್‌ಗಳಲ್ಲಿ ಬಂದ ಆರು ಮಂದಿಯ ತಂಡ ಇವರ ಮೇಲೆ ಹಲ್ಲೆ ನಡೆಸಿತ್ತು. ದಾಮೋದರ ಶೆಟ್ಟಿಯವರನ್ನು ಕುಂಜತ್ತೂರು ಜಂಕ್ಷನ್ ನಲ್ಲಿ ಕಬ್ಬಿಣದ ಸರಳಿನಿಂದ ಹೊಡೆಯಲಾಗಿತ್ತು.

ಕುಂಜತ್ತೂರು ಕೊಳಕೆ ಬಯಲುಗುರುಸ್ವಾಮಿ ಗುಣಪಾಲ್ ಭಂಡಾರಿ (43), ವ್ರತಧಾರಿಗಳಾದ ಕುಚ್ಚಿಕ್ಕಾಡಿನ ನಿತೇಶ್ (23), ಪಾವೂರು ಕುಂಡಿಲದ ಶರತ್ ಕುಮಾರ್ (34), ಕುಂಜತ್ತೂರು ಮಜಲ್ ನಿವಾಸಿ ರಾಜೇಶ್ ಕುಮಾರ್ (22),ಬಂಟ್ವಾಳದ ಸಂತೋಷ್ (23) ಎಂಬವರನ್ನು ಕಂಕನಾಡಿ ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳೀಯ ಬಾಲಾಂಜನೆಯ ವ್ಯಾಯಾಮ ಶಾಲೆಯಲ್ಲಿ ನಡೆದ ಭಜನಾ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ವೇಳೆ ಕುಂಜತ್ತೂರು ಜಂಕ್ಷನ್ ನಲ್ಲಿ ಇವರನ್ನು 30 ಮಂದಿಯ ತಂಡ ಹಲ್ಲೆ ಮಾಡಿತ್ತು. ಬಾಯಾರು ಚಿಪ್ಪಾರು ಪದವಿನಲ್ಲಿ ಬೋಳುಕಟ್ಟೆಯ ಸಂದೀಪ್( 26), ನಿಶಾಂತ್ (25),ಕ್ಯಾಂಪ್ಕೊ ಸಂಸ್ಥೆಯ ಕಾವಲುಗಾರ ಹರೀಶ್ (30) ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ.

ಕುಂಬಳೆ ಬಳಿಯ ಶಿರಿಯಾದಲ್ಲಿ ಗುರುವಾರ ನಡೆದ ಹಿಂಸಾಚಾರಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂಬ ಆರೋಪ ಹೊರಿಸಿ ಶಿರಿಯಾ ಕುನ್ನಿಲ್ ಅಬ್ದುಲ್ ರಹಿಮಾನ್ (46), ಜಕೀರುದ್ದೀನ್ (250, ಆಫಿರ್ ಮುಹಮ್ಮದ್ (17) ಎಂಬುವವರ ಮೇಲೆ ಒಂದು ತಂಡ ಹಲ್ಲೆ ನಡೆಸಿದೆ. ಇವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಪೆರ್ವಾಡಿ ಕಲ್ಲಕಟ್ಟೆ ನಿವಾಸಿ ಅಬ್ದುಲ್ ಕರೀಂ ಮುಸ್ಲಿಯಾರ್ (44) ಬೈಕೊಂದರಲ್ಲಿ ಬರುತ್ತಿದ್ದ ವೇಳೆ ಗುರುವಾರ ಮಧ್ಯಾಹ್ನ ಬಾಯಾರು ಬದಿಯಾರು ಜಾರ ಮಸೀದಿಯ ಬಳಿಯಿಂದ ಹಲ್ಲೆ ನಡೆಸಲಾಗಿತ್ತು. ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 40 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ .ಮೊರತ್ತಣೆಯಲ್ಲಿ ಟಯರ್ ಉರಿಸಿ ರಸ್ತೆ ತಡೆಯೊಡ್ಡಿ ಪೋಲೀಸರ ಮೇಲೆ ಕಲ್ಲು ತೂರಿ, ಹಿಂಸಾಚಾರಕ್ಕೆ ಇಳಿದ 50 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದರು.

ಬದಿಯಡ್ಕ ಅರ್ಲಡ್ಕದಲ್ಲಿ ಸಿಪಿಐಎಂ- ಬಿಜೆಪಿ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತರಾದ ಕೃಷ್ಣ (35),ಸುನಿಲ್ (32)ಎಂಬವರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ ಸಿಪಿಐಎಂ ಕಾರ್ಯಕರ್ತರಾದ ಮಾಳಂಗೈ ಅಚ್ಯುತ (48), ಅರ್ಲಡ್ಕ ಶರತ್ (23), ಬಾಲಡ್ಕ ಹರ್ಶಿತ್ (28) ಎಂಬವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಯಾರಿನಲ್ಲಿ ಗುರುವಾರ ನಡೆದ ಘರ್ಷಣೆಗೆ ಸಂಬಂಧಿಸಿ ಭುವನೇಶ್, ಲೋಕೇಶ್, ಪಾಚು ಸಹಿತ 37 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬೋವಿಕ್ಕಾನದಲ್ಲಿ ಘರ್ಷಣೆಗೆ ಇಳಿದ 30 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಲಪಾಡಿಯಲ್ಲಿ ಪೊಲೀಸರತ್ತ ಕಲ್ಲು ಎಸೆದ 100 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ವಸಂತ ಶೆಣೈ, ಕೀರ್ತಿ ಶೆಟ್ಟಿ, ಪ್ರಮೋದ್ ಕುಮಾರ್, ವಿಕ್ರಂ ಎಂಬವರು ಬಂಧಿತರಾದವರು.

ಕಲ್ಲುತೂರಾಟ:ಶುಕ್ರವಾರ ತಲಪಾಡಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್‌ಗೆ ಕಲ್ಲು ಎಸೆಯಸಲಾಗಿದೆ. ಬೈಕಿನಲ್ಲಿ ಬಂದ ಯುವಕರ ತಂಡ ಕೃತ್ಯ ನಡೆಸಿ ಪರಾರಿಯಾಗಿದೆ .ಹರತಾಳದ ಹಿಂದಿನ ದಿನ ರಾತ್ರಿ ಸಹಿತ ಜಿಲ್ಲೆಯಲ್ಲಿ 8 ಕೆಎಸ್ಆರ್ಟಿಸಿ ಬಸ್‌ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಗಾಜು ಪುಡಿಯಾಗಿವೆ.

ಶಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಎರಡು ಲಾರಿ ಹಾಗೂ ಒಂದು ಟೂರಿಸ್ಟ್ ಬಸ್‌ಗೆ ಕಲ್ಲು ತೂರಾಟ ನಡೆಸಲಾಗಿದೆ. ಲಾರಿಯೊಂದರ ಚಾಲಕ ಬೆಳಗಾವಿಯ ರಾಜೇಂದ್ರ (47) ಎಂಬುವವರ ತಲೆಗೆ ಗಂಭೀರ ಗಾಯಗಳಾಗಿದ್ದು , ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದ ವಾಹನಗಳ ಗಾಜು ಪುಡಿಯಾಗಿದೆ.

ಉಪ್ಪಳ ನಯಾ ಬಜಾರ್ನಲ್ಲಿ ಮುಜಾಹಿರ್ ಹುಸೈನ್ ಎಂಬವರ ಟ್ಯೂಷನ್ ಸೆಂಟರಿಗೆ ಗುರುವಾರ ರಾತ್ರಿ ಬೆಂಕಿ ಹಚ್ಚಿದ್ದು, ಪೀಠೋಪಕರಣಗಳು ಸುಟ್ಟಿವೆ. ಸಿಪಿಐಎಂ ನ ಪಳ್ಳಿಕೆರೆ ಬಳಿಯ ಕೂಟಕನಿ ಶಾಖಾ ಕಚೇರಿಯನ್ನು ಹಾನಿಗೊಳಿಸಲಾಗಿದೆ. ಗುರುವಾರ ರಾತ್ರಿ ಮೆರವಣಿಗೆ ಬಳಿಕ ಬಂದ ಬಿಜೆಪಿ ಕಾರ್ಯಕರ್ತರು ಕಚೇರಿಗೆ ಕಲ್ಲು ತೂರಾಟ ನಡೆಸಿದರು ಎಂದು ಆರೋಪಿಸಲಾಗಿದೆ. ಪಕ್ಷದ ವಾಚನಾಲಯವನ್ನೂ ಧ್ವಂಸ ಮಾಡಲಾಗಿದೆ. ಪೆರುಂಬಳ ಬಸ್‌ ತಂಗುದಾಣ , ಕಂಡಡ್ಕ ಎಕೆಜಿ ವಾಚನಾಲಯಗಳಿಗೆ ಕರಿ ಆಯಿಲ್ ಚೆಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.