ADVERTISEMENT

ಬಂಟ್ವಾಳ: ಕಾಲಿನಲ್ಲೇ ಪಿಯು ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ಗಳಿಸಿದ ಕೌಶಿಕ್

ಕಾಲಿನಲ್ಲಿ ಪರೀಕ್ಷೆ ಬರೆದು ಡಿಸ್ಟಿಂಕ್ಷನ್‌ ಗಳಿಸಿದ ಬಂಟ್ವಾಳದ ವಿದ್ಯಾರ್ಥಿಗೆ ಎಂಜಿನಿಯರ್ ಆಗುವಾಸೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 5:11 IST
Last Updated 20 ಜೂನ್ 2022, 5:11 IST
ಕಾಲಲ್ಲೇ ಪರೀಕ್ಷೆ ಬರೆದ ಕೌಶಿಕ್
ಕಾಲಲ್ಲೇ ಪರೀಕ್ಷೆ ಬರೆದ ಕೌಶಿಕ್   

ಮಂಗಳೂರು: ಸಾಧನೆಯ ಹಾದಿಯಲ್ಲಿ ಕೌಶಿಕ್ ಮತ್ತೊಮ್ಮೆ ಮಿನುಗಿದ್ದಾರೆ. ಅಂಗವೈಕಲ್ಯ ಮೀರಿನಿಂತ ಅವರು ಎಸ್ಸೆಸ್ಸೆಲ್ಸಿಯಂತೆ ಪಿಯುಸಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 524 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಬಂಟ್ವಾಳದ ಕಂಚಿಕಾರ ಪೇಟೆ ನಿವಾಸಿ ಕೌಶಿಕ್ ಕಾಲಿನಲ್ಲಿ ಪರೀಕ್ಷೆ ಬರೆದು ಎಸ್ಸೆಸ್ಸೆಲ್ಸಿಯಲ್ಲಿ 424 ಅಂಕ ಗಳಿಸಿದ್ದರು. ಅಂದು ಊರಜನರು ಮತ್ತು ಜನಪ್ರತಿನಿಧಿಗಳು ತೋರಿದ ಪ್ರೀತಿಗೆ ಮನಸೋತಿದ್ದ ಅವರಿಗೆ ಜೀವನ ಪರೀಕ್ಷೆಯನ್ನು ದಿಟ್ಟವಾಗಿ ಎದುರಿಸಲು ಮತ್ತಷ್ಟು ಹುಮ್ಮಸ್ಸು ಬಂದಿತ್ತು. ಅದಕ್ಕೆ ಬೆಂಬಲವಾಗಿ ನಿಂತದ್ದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ. ಉಚಿತ ಶಿಕ್ಷಣ ಯೋಜನೆಯಲ್ಲಿ ಪುಸ್ತಕ, ಕಲಿಕಾ ಸಾಮಗ್ರಿ ಮತ್ತು ಸಮವಸ್ತ್ರ ಒದಗಿಸಿದ ಸಂಸ್ಥೆಗೆ ಕೌಶಿಕ್ ಗೌರವ ತಂದುಕೊಟ್ಟಿದ್ದಾರೆ.

ಜನಿಸುವಾಗಲೇ ಕೌಶಿಕ್‌ಗೆ ಕೈಗಳು ಇರಲಿಲ್ಲ. ಬಲಭಾಗದಲ್ಲಿ ಹೆಗಲಿನಿಂದ ಈಚೆ ಕೈಯ ಲಕ್ಷಣವೇ ಇಲ್ಲ, ಎಡಭಾಗದಲ್ಲಿ ಮೊಣಕೈ ವರೆಗೆ ಕೈಯನ್ನು ಹೋಲುವ ರೀತಿಯ ಮಾಂಸ ಜೋತಾಡುತ್ತಿದೆ. ಬೀಡಿ ಕಾರ್ಮಿಕೆ, ಅಮ್ಮ ಜಲಜಾಕ್ಷಿ ಕಾಲುಬೆರಗಳುಗಳ ನಡುವೆ ಬಳಪದ ಕಡ್ಡಿ ಸಿಕ್ಕಿಸಿ ಅಕ್ಷರ ಬರೆಯಲು ಕಲಿಸಿದ್ದರು. ಅದೇ ಅವರ ಮೊದಲ ಪಾಠವಾಗಿತ್ತು. ಬಂಟ್ವಾಳದ ಎಸ್‌ವಿಎಸ್ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ಓದಿದ್ದರು.

ADVERTISEMENT

‘ಥಿಯರಿಯನ್ನು ತರಗತಿಯಲ್ಲಿ ಗಮನವಿಟ್ಟು ಕೇಳುತ್ತಿದ್ದೆ. ಮನೆಗೆ ಬಂದು ಪುನರ್ಮನನ ಮಾಡುತ್ತಿದ್ದೆ. ಗಣಿತ ವಿಷಯದಲ್ಲಿ ಸಮಸ್ಯೆಗಳಿದ್ದರೆ ಕಾಲೇಜಿನಲ್ಲೇ ಪರಿಹಾರ ಕಂಡುಕೊಳ್ಳುತ್ತಿದ್ದೆ. ನಿತ್ಯ ಬಸ್‌ನಲ್ಲಿ ಒಂದೂವರೆ ತಾಸು ‍ಪಯಣಿಸುವ ತೊಂದರೆಯೊಂದನ್ನು ಬಿಟ್ಟರೆ ಉಳಿದಂತೆ ಯಾವ ಸಮಸ್ಯೆಗಳೂ ಇರಲಿಲ್ಲ. ಹೀಗಾಗಿ ಓದು ಸುಸೂತ್ರವಾಗಿ ಸಾಗಿತು’ ಎಂದು ಕೌಶಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ್ದಕ್ಕೆ ಎಲ್ಲರೂ ಅಭಿನಂದಿಸಿದ್ದರು. ನನ್ನ ಬಗ್ಗೆ ತಿಳಿದ ಮೋಹನ ಆಳ್ವ ಅವರು ಉಚಿತ ಶಿಕ್ಷಣ ನೀಡಲು ಮುಂದಾಗಿದ್ದರು. ಆಳ್ವಾಸ್ ಕಾಲೇಜಿನಲ್ಲಿ ಓದಬೇಕೆಂಬ ಆಸೆ ಆ ಮೂಲಕ ಈಡೇರಿತ್ತು’ ಎಂದು ಅವರು ಹೇಳಿದರು.

ಈಗ ತಂದೆ ಇದ್ದಿದ್ದರೆ...

ಕೌಶಿಕ್ ತಂದೆ ರಾಜೇಶ್ ಬಡಗಿ ಕೆಲಸ ಮಾಡುತ್ತಿದ್ದರು. ಕೌಶಿಕ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಅವರು ಅನಾರೋಗ್ಯದಿಂದ ತೀರಿಕೊಂಡಿದ್ದರು. ‘ತಂದೆಗೆ ನನ್ನ ಮೇಲೆ ತುಂಬ ಪ್ರೀತಿ ಇತ್ತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾಗ ಸಂಭ್ರಮಿಸಿದ್ದರು. ಪಿಯುಸಿ ಸಾಧನೆಗೆ ಸಾಕ್ಷಿಯಾಗಲು ಅವರಿಲ್ಲ. ಅವರು ಈಗ ಇದ್ದಿದ್ದರೆ....’ ಎಂದು ಹೇಳಿ ಕೌಶಿಕ್ ಗದ್ಗದಿತರಾದರು.

ಕಲಿಕೆಯಲ್ಲಿ ಮಾತ್ರವಲ್ಲ, ಕಲಾಸಾಂಸ್ಕೃತಿಕ ಚಟುವಟಿಕೆಯಲ್ಲೂ ಕೌಶಿಕ್ ಪ್ರತಿಭೆ ಮೆರೆದಿದ್ದಾರೆ. ಚಿತ್ರಕಲೆ, ನೃತ್ಯ ಇತ್ಯಾದಿ ಅವರಿಗೆ ಒಲಿದಿದೆ. ಪರೀಕ್ಷೆಗೆ ಅವರನ್ನು ಸಿದ್ಧ ಮಾಡಲು ಹೆಚ್ಚಿನ ಪ್ರಯತ್ನದ ಅಗತ್ಯ ಬೀಳಲಿಲ್ಲ.

ಪ್ರಶಾಂತ್‌ ಎಂ.ಡಿ, ವಾಣಿಜ್ಯ ವಿಭಾಗದ ಡೀನ್‌, ಆಳ್ವಾಸ್ ಕಾಲೇಜು

***

ಪತಿ, ಕೌಶಿಕ್‌ಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದರು. ಈಗ ಅವರಿಲ್ಲ. ದೊಡ್ಡ ಮಗ ಮಂಗಳೂರಿನ ಸರ್ವಿಸ್‌ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈಗ ಮನೆಗೆ ಅವನೇ ಆಸರೆ. ಕೌಶಿಕ್‌ಗೆ ಇನ್ನೂ ಕಲಿಯಬೇಕೆಂಬ ಆಸೆ ಇದೆ. ಎಷ್ಟೇ ಕಷ್ಟವಾದರೂ ಅವನ ಕೈ ಹಿಡಿಯುತ್ತೇವೆ.

ಜಲಜಾಕ್ಷಿ,ಕೌಶಿಕ್‌ನ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.