ADVERTISEMENT

ದಕ್ಷಿಣ ಕನ್ನಡ: ಕನ್ನಡ ಶಾಲೆ ಉಳಿಸಲು ಇಂಗ್ಲಿಷ್‌ ‘ಕಸರತ್ತು’

ಶತಮಾನ ಕಂಡ ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ: ವ್ಯವಸ್ಥಾಪನ ಸಮಿತಿಯಿಂದ ನಾನಾ ಕಾರ್ಯ

ವಿಕ್ರಂ ಕಾಂತಿಕೆರೆ
Published 11 ಸೆಪ್ಟೆಂಬರ್ 2025, 4:58 IST
Last Updated 11 ಸೆಪ್ಟೆಂಬರ್ 2025, 4:58 IST
ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ   

ಮಂಗಳೂರು: ಶತಮಾನ ಕಂಡ ಕನ್ನಡ ಶಾಲೆಯೊಂದನ್ನು ಉಳಿಸಲು ನಾನಾ ಬಗೆಯ ಪ್ರಯತ್ನ ನಡೆಸಿರುವ ಹಳೆಯ ವಿದ್ಯಾರ್ಥಿಗಳು, ಕನ್ನಡ ಶಾಲೆ ಅಭಿಮಾನಿಗಳು ಮತ್ತು ಸಹೃದಯರನ್ನು ಒಳಗೊಂಡ ಆಡಳಿತ ಸಮಿತಿ ಕೊನೆಗೂ ಇಂಗ್ಲಿಷ್‌ ಕಲಿಸುವ ತಂತ್ರಕ್ಕೆ ಮೊರೆಹೋಗಿದ್ದಾರೆ.

ಬಂಟ್ವಾಳ ಮತ್ತು ಪುತ್ತೂರು ತಾಲ್ಲೂಕಿನ ಅಂಚಿನಲ್ಲಿರುವ ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಆಚರಿಸಿ 15 ವರ್ಷಗಳು ಕಳೆದಿದೆ. ಎಲ್‌ಕೆಜಿಯಿಂದ 7ನೇ ತರಗತಿ ವರೆಗೆ ಪಾಠ ನಡೆಯುವ ಇಲ್ಲಿ ಒಟ್ಟು 62 ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಕರ ಸಂಖ್ಯೆ ಕೇವಲ 3. ಮುಖ್ಯ ಶಿಕ್ಷಕರನ್ನು ಹೊರತುಪಡಿಸಿದರೆ ಧರ್ಮಸ್ಥಳದ ‘ಜ್ಞಾನದೀಪ’ ಯೋಜನೆಯಡಿ ನೇಮಕವಾದ ಒಬ್ಬರು ಮತ್ತು ವ್ಯವಸ್ಥಾಪನಾ ಸಮಿತಿ ನೇಮಿಸಿದ ಒಬ್ಬರು ಶಿಕ್ಷಕರು ಇದ್ದಾರೆ.

‘ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆಗೆ ಅವಕಾಶ ಇದೆ. ಖಾಸಗಿ ಶಾಲೆಗಳಲ್ಲಂತೂ ಇಂಗ್ಲಿಷ್ ಪಾಠ ಇದ್ದೇ ಇದೆ. ಅನುದಾನಿತ ಶಾಲೆಗಳು ಇಕ್ಕಟ್ಟಿನಲ್ಲಿವೆ. ಇಂಗ್ಲಿಷ್‌ ಕಲಿಸುತ್ತಿಲ್ಲ ಎಂಬ ಕಾರಣಕ್ಕೆ ಪಾಲಕರು ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿಲ್ಲ. ಅದಕ್ಕೆ ಪರಿಹಾರ ಕಾಣುವುದಕ್ಕೆಂದೇ ಇಂಗ್ಲಿಷ್ ಕೋಚಿಂಗ್ ಆರಂಭಿಸುವ ಯೋಜನೆ ಹಾಕಿಕೊಂಡಿದ್ದೇವೆ. 3 ವರ್ಷಗಳ ಹಿಂದೆ ಎಲ್‌ಕೆಜಿಯಿಂದ ಆರಂಭಗೊಂಡ ಇಂಗ್ಲಿಷ್ ಕಲಿಕೆ ಈಗ 4ನೇ ತರಗತಿ ವರೆಗೆ ಇದೆ. ಇದಕ್ಕಾಗಿ ನಾಲ್ವರು ಶಿಕ್ಷಕರನ್ನು ವ್ಯವಸ್ಥಾಪನಾ ಸಮಿತಿಯೇ ನೇಮಕ ಮಾಡಿದೆ’ ಎಂದು ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಭಟ್ ಬೀಡಿಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈ ಶಾಲೆ ಇರುವ ಜಾಗಕ್ಕೆ ಸಂಬಂಧಿಸಿ ವಿವಾದ ಇತ್ತು. ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ರೂರಲ್ ಎಜುಕೇಷನ್ ಟ್ರಸ್ಟ್‌ ಸ್ಥಾಪಿಸಿ ಹಣ ಸಂಗ್ರಹಿಸಿ 37 ಸೆಂಟ್ ಜಾಗವನ್ನು ಖರೀದಿಸಲಾಗಿತ್ತು. ನಂತರ 17 ಸದಸ್ಯರನ್ನು ಒಳಗೊಂಡ ಆಡಳಿತ ಸಮಿತಿ ಸ್ಥಾಪಿಸಿ ಶಾಲೆಯ ಪುನಶ್ಚೇತನಕ್ಕೆ ಪ್ರಯತ್ನ ನಡೆಯಿತು. ಸುಮಾರು ₹ 7 ಲಕ್ಷದಷ್ಟು ಮೊತ್ತವನ್ನು ಸ್ಥಿರ ಠೇವಣಿ ಇರಿಸಿದ್ದು ಅದರ ಬಡ್ಡಿಯಿಂದ ಶಿಕ್ಷಕರಿಗೆ ವೇತನ ಪಾವತಿಸಲಾಗುತ್ತದೆ. ಇಂಗ್ಲಿಷ್ ಕೋಚಿಂಗ್‌ ಆರಂಭಗೊಂಡ ನಂತರ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗಿದೆ. ಸ್ಪೋಕನ್ ಇಂಗ್ಲಿಷ್‌ ಮತ್ತು ಪಠ್ಯಕ್ಕೆ ಸಂಬಂಧಿಸಿ ಇಂಗ್ಲಿಷ್‌ನಲ್ಲಿ ವಿವರಣೆ ನೀಡುವುದು ಇಂಗ್ಲಿಷ್ ಕೋಚಿಂಗ್‌ನ ಪ್ರಮುಖ ಭಾಗ. ಇಂಗ್ಲಿಷ್‌ ತರಗತಿಗಳನ್ನು ಆರಂಭಿಸಲು ಅನುಮತಿ ಪಡೆಯುವ ಪ್ರಯತ್ನ ಈಗ ನಡೆಯುತ್ತಿದೆ ಎಂದರು ಸುಬ್ರಹ್ಮಣ್ಯ ಭಟ್.

90ರ ಹರಯದಲ್ಲಿ ಉಚಿತ ‘ಪಾಠ’

ಕೆದಿಲ ಶಾಲೆಯಲ್ಲಿ ನಿತ್ಯವೂ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ, ಮುರದಲ್ಲಿ ವಾಸವಾಗಿರುವ 90 ವರ್ಷದ ಸುಬ್ರಾಯ ಭಟ್‌. 5ನೇ ತರಗತಿ ವರೆಗೆ ಈ ಶಾಲೆಯಲ್ಲಿ ಕಲಿತ ಸುಬ್ರಾಯ ಭಟ್ ವಿಟ್ಲದಲ್ಲಿ ಹೈಸ್ಕೂಲ್ ಓದಿನ ನಂತರ ಇದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮಕ್ಕಳ ಜೊತೆ ಕೆಲಕಾಲ ಬೆಂಗಳೂರಿನಲ್ಲಿದ್ದ ಅವರು ಪತ್ನಿಯ ವಿಯೋಗದ ನಂತರ ಊರಿಗೆ ಮರಳಿ ಪುತ್ತೂರು ತಾಲ್ಲೂಕು ಪಡ್ನೂರು ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿದ್ದರು. ಈಗ ವಾಸಕ್ಕೆ ಸ್ವಂತ ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಕೃಷಿ ಕಾರ್ಯದಲ್ಲಿ ಭಾಗಿಯಾಗಿ ರೂಢಿ ಇರಲಿಲ್ಲ. ಅಂಥ ಕೆಲಸ ಮಾಡಲು ಮೈಯಲ್ಲಿ ಕಸುವು ಕೂಡ ಇರಲಿಲ್ಲ. ಮನೆಯಲ್ಲಿ ಕುಳಿತು ಕಾಲ ಕಳೆಯುವುದೇ ದೊಡ್ಡ ಸವಾಲಾಗಿತ್ತು. ಆಗ, ಕಲಿತ ಶಾಲೆಯಲ್ಲಿ ಸೇವೆ ಸಲ್ಲಿಸುವ ಯೋಚನೆ ಬಂತು. 3 ವರ್ಷಗಳಿಂದ ಶಾಲೆಗೆ ಬರುತ್ತಿದ್ದೇನೆ. ಇತರ ಶಿಕ್ಷಕರು ಮಾಡಿದ ಪಾಠದ ಡಿಕ್ಟೇಷನ್ ಕೊಡುವುದು, ಮಗ್ಗಿ ಹೇಳಿಕೊಡುವುದು, ಗಣಿತದಲ್ಲಿ ಸಹಾಯ ಮಾಡುವುದು ನನ್ನ ಹವ್ಯಾಸ’ ಎಂದು ಸುಬ್ರಾಯ ಭಟ್ ತಿಳಿಸಿದರು.

ಸುಬ್ರಾಯ ಭಟ್

ದಾನ ಏಕಾಂಗಿಯಾಗಿ ಧನ ಸಂಗ್ರಹ

ಸುಬ್ರಾಯ ಭಟ್ ಸ್ವಂತ ಗಳಿಕೆಯಿಂದ ₹ 15 ಲಕ್ಷವನ್ನು ಶಾಲೆಯ ಅಭಿವೃದ್ಧಿಗಾಗಿ ಕೊಡುಗೆ ನೀಡಿದ್ದಾರೆ. ಶಾಲೆಗಾಗಿ ದಾನಿಗಳಿಂದ ಹಣ ಸಂಗ್ರಹ ಕಾರ್ಯ ನಡೆದಾಗ ಏಕಾಂಗಿಯಾಗಿ ಮನೆಮನೆಗೆ ತೆರಳಿ ₹ 3 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿದ್ದಾರೆ ಎಂದು ಸುಬ್ರಹ್ಮಣ್ಯ ಭಟ್ ತಿಳಿಸಿದರು. ‘ಮನೆಮನೆಯಲ್ಲಿ ಕೇಳಿದಾಗ ಹಳೆಯ ವಿದ್ಯಾರ್ಥಿ ಮತ್ತು ಶಾಲೆಯಲ್ಲಿ ಕಲಿಸಿದ ಗುರು ಎಂದು ಅವರಿಗೆ ಅನೇಕರು ಹಣ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಶಾಲೆಗೆ ಏನೇ ಅಗತ್ಯವಿದ್ದರೂ ಮುಂದೆ ನಿಂತು ಮಾಡುತ್ತಾರೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರಿಗೆ ಉಡುಗೊರೆ ನೀಡಿದ್ದಾರೆ’ ಎಂದು ಸುಬ್ರಹ್ಮಣ್ಯ ಭಟ್ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.