ADVERTISEMENT

ಮಳಲಿ ಜುಮ್ಮಾ ಮಸೀದಿ ಗೊಂದಲ: ಇಂದು ತಾಂಬೂಲ ಪ್ರಶ್ನೆ, ಪೊಲೀಸ್ ಬಿಗಿ ಭದ್ರತೆ

ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಮೇ 2022, 4:47 IST
Last Updated 25 ಮೇ 2022, 4:47 IST
ಮಳಲಿ ಮಸೀದಿಯ ಒಳಭಾಗ
ಮಳಲಿ ಮಸೀದಿಯ ಒಳಭಾಗ   

ಮಂಗಳೂರು: ಜಿಲ್ಲೆಯ ತೆಂಕ ಉಳಿಪಾಡಿಯ ಮಳಲಿ ಪೇಟೆಯ ಜುಮ್ಮಾ ಮಸೀದಿ ನವೀಕರಣದ ವೇಳೆ ಎದುರಾದ ಗೊಂದಲಕ್ಕೆ ಸಂಬಂಧಿಸಿ ಮುಂದಿನ ಆದೇಶದವರೆಗೆ ಯಾವುದೇ ಕೆಲಸ ನಿರ್ವಹಿಸದಂತೆ ನ್ಯಾಯಾಲಯ ಈಗಾಗಲೇ ಆದೇಶಿಸಿದೆ. ಹೀಗಾಗಿ ಕಾನೂನಿಗೆ ಬೆಲೆ ಕೊಟ್ಟು ಪ್ರತಿಯೊಬ್ಬರೂ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ವಿನಂತಿಸಿದ್ದಾರೆ.

ಇತ್ತೀಚೆಗೆ ಮಸೀದಿ ನವೀಕರಿಸಲು ಆಡಳಿತ ಮಂಡಳಿಯವರು ಹಳೆ ಕಟ್ಟಡವನ್ನು ಕೆಡಹುವ ಸಂದರ್ಭದಲ್ಲಿ ಅಲ್ಲಿ ದೇವಸ್ಥಾನ ಮಾದರಿಯ ರಚನೆ ಕಂಡು ಬಂದಿದೆ ಎಂಬ ಬಗ್ಗೆ ಕೆಲ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಜೆಎಂಎಫ್‌ಸಿ ನ್ಯಾಯಾಲಯವು ನವೀಕರಣ ಕಾರ್ಯಕ್ಕೆ ಸಂಬಂಧಿಸಿ ತಾತ್ಕಾಲಿಕ ಆದೇಶ ನೀಡಿ, ಮುಂದಿನ ಆದೇಶದವರೆಗೆ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ನಿರ್ದೇಶಿಸಿತ್ತು. ಜಿಲ್ಲಾಡಳಿತಕ್ಕೆ ವಿವಿಧ ಸಂಘಟನೆಗಳು ಮನವಿ ನೀಡಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು,ಪೊಲೀಸ್ ಕಮಿಷನರ್, ಜುಮ್ಮಾ ಮಸೀದಿಯ ಅಧ್ಯಕ್ಷರು, ಪ್ರಮುಖರನ್ನು ಸೇರಿಸಿ ಸಭೆ ನಡೆಸಲಾಗಿದೆ ಎಂದಿದ್ದಾರೆ.

ಸಭೆಯಲ್ಲಿ ಮಸೀದಿ ಆಡಳಿತ ಮಂಡಳಿಯವರು ನ್ಯಾಯಾಲಯದ ಆದೇಶವನ್ನು ಪಾಲಿಸುವ ಜತೆಗೆ ಜಿಲ್ಲಾಡಳಿತದ ನಿರ್ದೇಶನಕ್ಕೆ ಮನ್ನಣೆ ನೀಡುವುದಾಗಿ ಮತ್ತು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ನಡುವೆ ವಿವಿಧ ಸಂಘಟನೆಗಳು ಹಲವಾರು ರೀತಿಯ ಪ್ರಶ್ನೆಗಳನ್ನು ಎತ್ತಿದ್ದು, ಅದು ಅವರ ವೈಯಕ್ತಿಕ ವಿಚಾರವಾಗಿದ್ದು, ಜಿಲ್ಲೆಯ ಜನತೆ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂದು ತಾಂಬೂಲ ಪ್ರಶ್ನೆ:ಮಳಲಿ ಮಸೀದಿಯ ಅನತಿ ದೂರದಲ್ಲಿರುವರಾಮಾಂಜನೇಯ ಭಜನಾ ಮಂದಿರದಲ್ಲಿ ಬುಧವಾರ (ಮೇ 25) ತಾಂಬೂಲ ಪ್ರಶ್ನೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ಕೇರಳದ ಜ್ಯೋತಿಷಿ ಪುದುವಾಳ್ ತಾಂಬೂಲ ಪ್ರಶ್ನೆ ಇಡಲಿದ್ದಾರೆ. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ, ದೈವಿ ಶಕ್ತಿ ಪತ್ತೆ ಕಾರ್ಯ ನಡೆಯುತ್ತದೆ.

ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯದಲ್ಲಿ ಸಂಘಟನೆ ಸದಸ್ಯರು, ಸ್ಥಳೀಯರು, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಸಲಾಗಿದೆ.

ತಾಂಬೂಲ ಪ್ರಶ್ನೆ ಹೇಗೆ?: ತಾಂಬೂಲ ಪ್ರಶ್ನೆ ಇಡುವವರು ವೀಳ್ಯದೆಳೆಗಳನ್ನು ಜ್ಯೋತಿಷಿಗೆ ನೀಡುತ್ತಾರೆ. ಆ ವೀಳ್ಯದೆಳೆಗಳ ಲೆಕ್ಕಾಚಾರದ ಆಧಾರದಲ್ಲಿ ಅವರು ಫಲಗಳನ್ನು ಸ್ಥಳದಲ್ಲೇ ನಿರ್ಧರಿಸುತ್ತಾರೆ. ವೀಳ್ಯದೆಲೆಗಳ ಸಂಖ್ಯೆ ಆಧಾರದಲ್ಲಿ ದೇವರ ಸಾನ್ನಿಧ್ಯ ಗುರುತಿಸಲಾಗುತ್ತದೆ. ಹೆಚ್ಚಿನ ಪ್ರಶ್ನಾ ಚಿಂತನೆ ನಡೆಸಿ ಯಾವ ದಿಕ್ಕಿನಲ್ಲಿ ದೈವ ಸಾನ್ನಿಧ್ಯ ಇದೆ ಎಂಬುದನ್ನು ಜ್ಯೋತಿಷಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.