ADVERTISEMENT

ಸಂಪರ್ಕ ಕಲ್ಪಿಸಲು ಕೇರಳ ಒತ್ತಡ!

ಸಾರಡ್ಕ ಸೇರಿದಂತೆ ಸಂಪರ್ಕ ರಸ್ತೆಗಳು ಬಂದ್

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:45 IST
Last Updated 28 ಮಾರ್ಚ್ 2020, 14:45 IST
ಕನ್ಯಾನ-ಬಾಯಾರು ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿರುವುದು
ಕನ್ಯಾನ-ಬಾಯಾರು ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿರುವುದು   

ವಿಟ್ಲ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯಾಗಿ ಇಲ್ಲಿಗೆ ಸಮೀಪದ ಸಾರಡ್ಕ ಚೆಕ್‌ಪೋಸ್ಟ್ ಸೇರಿದಂತೆ ಕೇರಳದಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ರಾಜ್ಯ ಪೊಲೀಸರು ಬಂದ್ ಮಾಡಿಸಿದ್ದು, ತೆರೆಸುವ ನಿಟ್ಟಿನಲ್ಲಿ ಕೇರಳ ಸರ್ಕಾರವು ಒತ್ತಡ ಹೇರುತ್ತಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ಕೇರಳದ ಪೊಲೀಸ್, ಸಾರಿಗೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿನ ರಾಜ್ಯ ಗಡಿಭಾಗದಲ್ಲಿ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದ್ದು, ಕೇರಳದ ಹಲವು ಮಂದಿ ಒಳರಸ್ತೆ ಮೂಲಕ ಪ್ರವೇಶಿಸಲು ಮುಂದಾಗುತ್ತಿದ್ದಾರೆ. ಸಾರಡ್ಕ ಚೆಕ್‌ಪೋಸ್ಟ್ ಅನ್ನು ತೆರೆಯಬೇಕು ಎಂಬ ಒತ್ತಡವು ತೀವ್ರವಾಗಿ ಕೇಳಿ ಬರುತ್ತಿದೆ.

ADVERTISEMENT

ವಾರದ ಹಿಂದೆ ವಿಟ್ಲ ಪೊಲೀಸರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಂಪರ್ಕ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿತ್ತು. ತಲೆಕ್ಕಿ, ಮಲಾರು, ಶಾಂತಿಮೂಲೆ ಒಳ ರಸ್ತೆಗಳನ್ನೂ ಬಂದ್‌ ಮಾಡಲಾಗಿತ್ತು.ಗುಡ್ಡದ ಮೂಲಕ ಸಂಚರಿಸುವವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಟ್ಟಿದೆ.

‘ಸಾರಡ್ಕ ಚೆಕ್ ಪೋಸ್ಟ್‌ಗೆ ಬಂದು ಪೊಟೋಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಿದ್ದು, ಯಾವುದೇ ಕಾರಣಕ್ಕೂ ಸಾರಡ್ಕ ಗೇಟ್ ತೆರೆಯಬಾರದು’ ಎಂದು ಸ್ಥಳೀಯರಾದ ಹರೀಶ್ ಪ್ರಸಾದ್ ಯಾದವ್ ಒತ್ತಾಯಿಸಿದ್ದಾರೆ.

ಆದರೆ, ಅಡ್ಯನಡ್ಕ ಪ್ರದೇಶದಲ್ಲಿ ಎಣ್ಮಕಜೆ ಗ್ರಾಮದ ಒಂದಷ್ಟು ಭೂ ಪ್ರದೇಶವಿದ್ದು, ಇಲ್ಲಿನ ನಿವಾಸಿಗಳ ಸಂಪರ್ಕವು ಕರ್ನಾಟಕದ ಜೊತೆ ಇದೆ. ರಸ್ತೆ ಸಂಪರ್ಕ ಕಡಿತದಿಂದ ಅವರಿಗೂ ಸಮಸ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.