ADVERTISEMENT

ಹಲವು ಭಾಷೆಗಳ ಸಂಗಮಕ್ಕೆ ಸಾಕ್ಷಿಯಾದ ಮೇಳ

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:08 IST
Last Updated 9 ಮೇ 2022, 16:08 IST
ನನ್ನ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಅಂಗವಾಗಿ ಆಯೋಜಿಸಿದ್ದ ಬಹುಭಾಷಾ ಸಾಹಿತ್ಯ ಸಮ್ಮೇಳನದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯ ಇ.ಪಿ.ರಾಜಗೋಪಾಲನ್ ಮಾತನಾಡಿದರು.
ನನ್ನ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಅಂಗವಾಗಿ ಆಯೋಜಿಸಿದ್ದ ಬಹುಭಾಷಾ ಸಾಹಿತ್ಯ ಸಮ್ಮೇಳನದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯ ಇ.ಪಿ.ರಾಜಗೋಪಾಲನ್ ಮಾತನಾಡಿದರು.   

ಕಾಸರಗೋಡು: ಅಲಾಮಿಪಳ್ಳಿಯಲ್ಲಿ ರಾಜ್ಯ ಸರ್ಕಾರದ ಒಂದನೇ ವರ್ಷಾಚರಣೆಯ ಭಾಗವಾಗಿ ನಡೆಯುತ್ತಿರುವ ‘ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ’ ಮೇಳದ ಅಂಗವಾಗಿ ಬಹುಭಾಷಾ ಸಾಹಿತ್ಯ ಸಭೆ ನಡೆಯಿತು. ವಿವಿಧ ಭಾಷೆಗಳ ಸಮ್ಮಿಲನಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು.

ಕಾಸರಗೋಡಿನ ಬಹುಭಾಷಾ ಪರಂಪರೆ, ಮಾತೃಭಾಷೆಯ ಮಹತ್ವ ಹಾಗೂ ಅವುಗಳ ಸಂರಕ್ಷಣೆಯ ಅಗತ್ಯಗಳು ಚರ್ಚೆಯಾದವು. ಗೋಷ್ಠಿಯಲ್ಲಿ ಕನ್ನಡ, ಮಲಯಾಳ, ಕೊಂಕಣಿ, ತುಳು, ಮರಾಠಿ ಮತ್ತು ಕರಾಡ ಭಾಷೆಗಳ ಸಂವಾದ, ಕವಿತೆಗಳು ಒಂದೇ ವೇದಿಕೆಯಲ್ಲಿ ಪ್ರಸ್ತುತಗೊಂಡವು.

ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯ ಇ.ಪಿ.ರಾಜಗೋಪಾಲನ್ ಉದ್ಘಾಟಿಸಿದರು. ಶಾಲೆಗಳಲ್ಲಿ ಮಲಯಾಳ ಮತ್ತು ಕನ್ನಡ ಮಾತನಾಡುವವರಿಗೆ ಮಾತೃಭಾಷೆಯಲ್ಲಿ ಕಲಿಯಲು ಅವಕಾಶವಿದೆ. ಆದರೆ ತುಳು ಭಾಷಿಕರಿಗೆ ಮಾತೃಭಾಷೆಯಲ್ಲಿ ಕಲಿಯಲು ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವ ಪ್ರಯತ್ನ ಆಗಬೇಕಿದೆ ಎಂದರು.

ADVERTISEMENT

ಕಾಸರಗೋಡು ಶ್ರೇಷ್ಠ ಭಾಷೆಗಳಿಂದ ಸಮೃದ್ಧವಾಗಿದೆ. ಇಲ್ಲಿಯ ಸಂಸ್ಕೃತಿ ಒಂದು ಭಾಷೆಯಲ್ಲಿ ಬೆರೆತಿರಬಹುದು. ವಿವಿಧ ಭೌಗೋಳಿಕತೆ, ಇತಿಹಾಸಗಳಲ್ಲಿ ಬದುಕುತ್ತಿರುವಾಗ ಅಲ್ಲಿ ಭಾಷೆ ಹುಟ್ಟಿ ಹೊಸ ಪದದಿಂದ ಹೊಸ ಪ್ರಪಂಚ ಮೂಡುತ್ತದೆ ಎಂದರು.

ಗ್ರಂಥಲೋಕ ಪತ್ರಿಕೆಯ ಸಂಪಾದಕ ಪಿವಿಕೆ ಪನಾಯಾಲ್ ಅಧ್ಯಕ್ಷತೆ ವಹಿಸಿದ್ದರು. ಭಾಷೆಯ ಕುರಿತು ಪಯ್ಯನ್ನೂರು ಕುಞ್ಞಿರಾಮನ್ ಮತ್ತು ಕೆ.ವಿ.ಕುಮಾರನ್ ಮಾತನಾಡಿದರು. ದಿವಾಕರನ್ ವಿಷ್ಣುಮಂಗಲಂ, ಬಿಜು ಕಾಞಂಗಾಡ್, ಸಿ.ಪಿ.ಸುಭಾ, ರವೀಂದ್ರನ್ ಪಾಡಿ ಮತ್ತು ಟಿ.ಕೆ. ಪ್ರಭಾಕರ ಕುಮಾರ್ ಅವರು ಮಲಯಾಳ ಭಾಷೆಯನ್ನು ಪ್ರತಿನಿಧಿಸಿದರೆ, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತು ಸುಂದರ ಬಾರಡ್ಕ ಅವರು ಕನ್ನಡ ಭಾಷೆಯನ್ನು ಪ್ರತಿನಿಧಿಸಿ ಕವನಗಳನ್ನು ಪ್ರಸ್ತುತಪಡಿಸಿದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಸ್ವಾಗತಿಸಿದರು. ಸಹಾಯಕ ಮಾಹಿತಿ ಅಧಿಕಾರಿ ನಿಧೀಶ ಬಾಲನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.