ADVERTISEMENT

ಕಾಸರಗೋಡಿನಲ್ಲಿ ಕಾರ್ಮಿಕರ ಹರತಾಳ ಪೂರ್ಣ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:21 IST
Last Updated 10 ಜುಲೈ 2025, 4:21 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ನಡೆದ ಕಾರ್ಮಿಕರ ಹರತಾಳ ನಡೆಯಿತು.

ಕೇಂದ್ರ ಸರ್ಕಾರ ತಪ್ಪು ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ನಡೆಸಿದ ಪ್ರತಿಭಟನೆಯ ‌ಖಾಸಗಿ ಮತ್ತು ಸರ್ಕಾರಿ ಬಸ್‌ಗಳು ಸಂಚಾರ ನಡೆಸಿರಲಿಲ್ಲ.

ADVERTISEMENT

ಬಹುತೇಕ ಬಸ್ ನಿಲ್ದಾಣಗಳು ಬಿಕೋ ಅನ್ನುವಂತಿದ್ದವು. ಜಿಲ್ಲೆಯ ಕೆಲವೆಡೆ ಸಂಚಾರ ನಡೆಸಿದ ಖಾಸಗಿ ವಾಹನಗಳನ್ನು ಮುಷ್ಕರ ನಿರತರು ತಡೆದಾಗ ವಾಗ್ವಾದ ನಡೆಯಿತು. ಈ ಸಂಬಂಧ ಮುಷ್ಕರ ನಿರತರ ಮತ್ತು ಪೊಲೀಸರ ನಡುವೆಯೂ ಕೊಂಚ ಹೊತ್ತು ಚರ್ಚೆ ನಡೆಯಿತು.

ನಗರದಲ್ಲಿ ಮುಷ್ಕರ ನಿರತ ಕಾರ್ಮಿಕ ಸಂಘಟನೆಗಳ ಮೆರವಣಿಗೆ ನಡೆಯಿತು. ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ಶಾಸಕ ಸಿ.ಎಚ್.ಕುಂಞಂಬು ಎಡರಂಗ ಬೆಂಬಲಿತ ಕಾರ್ಮಿಕರ ಮೆರವಣಿಗೆಯನ್ನು ಉದ್ಘಾಟಿಸಿದರು.

ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಟಿ.ಕೆ.ರಾಜನ್, ಸಿ.ಎಂ.ಎ.ಜಲೀಲ್, ರಾಘವನ್ ಮಾಸ್ಟರ್ ಭಾಗವಹಿಸಿದ್ದರು.

ಎಂ.ಜಿ.ರಸ್ತೆಯಲ್ಲಿ ಐಕ್ಯರಂಗ ಬೆಂಬಲಿತ ಕಾರ್ಮಿಕರ ಮೆರವಣಿಗೆಯನ್ನು ಎಸ್.ಟಿ.ಯು.ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮುಹಮ್ಮದ್ ಅಶ್ರಫ್ ಉದ್ಘಾಟಿಸಿದರು. ಐ.ಎನ್.ಟಿ.ಯು.ಸಿ. ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ವಿ.ಕುಂಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಎಡನೀರು, ಎ.ಅಹಮ್ಮದ್, ಅರ್ಜುನನ್ ತಾಯಲಂಗಾಡಿ, ಟಿ.ಜಿ.ಟೋನಿ ಭಾಗವಹಿಸಿದ್ದರು.

ಕಾಣೆಯಾಗಿದ್ದ ಯುವಕನ ಶವ ನದಿಯಲ್ಲಿ ಪತ್ತೆ

ಕಾಸರಗೋಡು: ಕಾಣೆಯಾಗಿದ್ದ ಯುವಕ, ಕಸಬ ನಿವಾಸಿ ಆದಿತ್ಯ (22) ಅವರ ಶವ ಕಸಬ ಕರಾವಳಿಯ ಹಾರ್ಬರ್ ಗೇಟ್‌ ಬಳಿಯ ನದಿಯಲ್ಲಿ ಬುಧವಾರ ಪತ್ತೆಯಾಗಿದೆ. ಶವದಲ್ಲಿ ಗಾಯಗಳು ಪತ್ತೆಯಾಗಿದ್ದು, ಊಹಾಪೋಹಕ್ಕೆ ಕಾರಣವಾಗಿದೆ. 2 ದಿನಗಳಿಂದ ಅವರು ಕಾಣೆಯಾಗಿದ್ದರು. ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೂರು ನಕಲಿ ಬಂದೂಕು ಸಹಿತ ಬಂಧನ

ಕಾಸರಗೋಡು: ಕಳ್ಳಾರಿನ ಕೋಟೆಕುನ್ನು ಕೈಕಳಂ ಎಂಬಲ್ಲಿನ ಮನೆಯೊಂದಕ್ಕೆ ಬುಧವಾರ ದಾಳಿ ನಡೆಸಿದ ಪೊಲೀಸರು ಮೂರು ನಕಲಿ ಬಂದೂಕುಗಳ ಸಹಿತ ಕಣ್ಣೂರು ಆಲಕ್ಕೋಡು ಕಾರ್ತಿಕಪುರಂ ಎರುದಮಾಡ ಮೇಲರುಗಿಲ್ ನಿವಾಸಿ ಎಂ.ಕೆ.ಅಜಿತ್ ಕುಮಾರ್ (55) ಎಂಬಾತನನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ರಾಜಪುರಂ ಪೂಂಜಕ್ಕರ ನಿವಾಸಿ ಸಂತೋಷ್, ಪರಪ್ಪ ನಿವಾಸಿ ಷಾಜಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾಞಂಗಾಡು, ಬೇಕಲ ಡಿವೈಎಸ್‌ಪಿ ನೇತೃತ್ವದಲ್ಲಿ ರಾಜಪುರಂ ಪೊಲೀಸರು ದಾಳಿ ನಡೆಸಿದ್ದರು. ಬಂಧಿತನ ಹೆಚ್ಚುವರಿ ವಿಚಾರಣೆ ನಡೆಸಲಾಗುತ್ತಿದೆ.

ಮಸೀದಿಗೆ ಕನ್ನ: ಆರೋಪಿ ಬಂಧನ

ಕಾಸರಗೋಡು: ಸೂರ್ಲು ಸಲಫಿ ಮಸೀದಿಯಲ್ಲಿ ಜೂನ್‌ 24ರಂದು ₹ 3.10 ಲಕ್ಷ, 2 ಪವನ್ ಚಿನ್ನದ ಆಭರಣ ಕಳವು ನಡೆಸಿದ ಆರೋಪಿ ಆಂಧ್ರಪ್ರದೇಶದ ವೆಸ್ಟ್ ಗೋದಾವರಿ ಆಕ್ಕಿವಿಡು ನಿವಾಸಿ ಸಲ್ಮಾನ್ ಅಹಮ್ಮದ್ (34) ಎಂಬಾತನನ್ನು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದ ದೃಶ್ಯದ ಆಧಾರದಲ್ಲಿ ಆರೋಪಿಯ ಪತ್ತೆ ನಡೆದಿತ್ತು.

ಮದ್ಯ, ಮಾದಕ ವಸ್ತು ಸಹಿತ ಬಂಧನ

ಕಾಸರಗೋಡು: ಮೇಲ್ಪರಂಬ ಕೊಪ್ಪಲ್ ಎಂಬಲ್ಲಿ ಬುಧವಾರ ಕಾರಿನಲ್ಲಿ ಸಾಗಿಸುತ್ತಿದ್ದ 181.44 ಲೀ. ಮದ್ಯ ಸಹಿತ ಚಾವಕಡ ಎಡಕ್ಕರ ನಿವಾಸಿಗಳಾದ ಅನ್ಸೀಫ್ ಎ.ಎಚ್. (38) ಮತ್ತು ಚಂದ್ರಶೇಖರನ್ (39) ಎಂಬುವರನ್ನು ಅಬಕಾರಿ ದಳ ಬಂಧಿಸಿದೆ.

ಇನ್ನೊಂದು ಪ್ರಕರಣದಲ್ಲಿ ಪೆರಿಯ ಮುತ್ತಡ್ಕ ಪುಳಿಕ್ಕಾಲು ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 256 ಗ್ರಾಂ ಎಂಡಿಎಂಎ ಸಹಿತ ಪೊವ್ವಲ್ ನಿವಾಸಿ ಅಹಮ್ಮದ್ ಡ್ಯಾನಿಷ್ (30) ಮತ್ತು ಆಲಂಪಾಡಿಯ ಅಬ್ದುಲ್ ಖಾದರ್ (40) ಎಂಬುವರನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.