ADVERTISEMENT

ದರ ಪರಿಷ್ಕರಣೆ: 62 ಪೈಸೆ ಹೆಚ್ಚಳಕ್ಕೆ ಮೆಸ್ಕಾಂ ಮನವಿ

ವಿದ್ಯುತ್‌ ನಿಯಂತ್ರಣ ಆಯೋಗದಿಂದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:08 IST
Last Updated 14 ಫೆಬ್ರುವರಿ 2020, 9:08 IST
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ವಿಚಾರಣೆ ಸಭೆಯಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್‌.ಸ್ನೇಹಲ್‌ ಮಾತನಾಡಿದರು. ಪ್ರಜಾವಾಣಿ ಚಿತ್ರ
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ವಿಚಾರಣೆ ಸಭೆಯಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್‌.ಸ್ನೇಹಲ್‌ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ನಿರ್ವಹಣೆ ಮತ್ತು ವಿತರಣಾ ವೆಚ್ಚಗಳು ಹೆಚ್ಚಾಗಿದ್ದು, ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 62 ಪೈಸೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್.ಸ್ನೇಹಲ್‌ ಹೇಳಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ವತಿಯಿಂದ ವಿದ್ಯುತ್‌ ದರ ಪರಿಷ್ಕರಣೆ ಕುರಿತು ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಅವರು ಮಾತನಾಡಿದರು.

ಭಾರಿ ಮಳೆಯಿಂದಾಗಿ ಮಳೆಗಾಲದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿದ್ಯುತ್‌ ಪರಿವರ್ತಕಗಳು, ವಿದ್ಯುತ್ ಕಂಬಗಳು ಹಾಗೂ ವಿದ್ಯುತ್‌ ಮಾರ್ಗ ಸೇರಿದಂತೆ ಮೆಸ್ಕಾಂಗೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದರು.

ADVERTISEMENT

ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಪ್ರತಿನಿಧಿಗಳು ಮಾತನಾಡಿ, ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ₹1 ರಷ್ಟು ಕಡಿಮೆ ಮಾಡಬೇಕು. ಎಲ್‌ಟಿ ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳ ಹೊರೆಯಾಗುತ್ತಿದೆ. ಸಣ್ಣ ಕೈಗಾರಿಕೆಗಳಿಗೆ ಎಲ್‌ಟಿ 5 ದರವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಇದರ ಜತೆಗೆ ಕೈಗಾರಿಕೆಗಳಿಗೆ ವಿದ್ಯುತ್‌ ಸರಬರಾಜನ್ನು 150 ಎಚ್‌ಪಿಗೆ ಹೆಚ್ಚಿಸಬೇಕು. ಅಸ್ತಿತ್ವದಲ್ಲಿರುವ ಘಟಕಗಳಿಗೆ 100 ಎಚ್‌ಪಿ ವರೆಗೆ ವಿದ್ಯುತ್ ಪಡೆಯುವುದಕ್ಕೆ ದಂಡ ವಿಧಿಸಬಾರದು ಎಂದರು.

ಭಾರತೀಯ ಕಿಸಾನ್‌ ಸಂಘದ ಉಡುಪಿ ಘಟಕದ ಸತ್ಯನಾರಾಯಣ ಉಡುಪ ಮಾತನಾಡಿ, ವಿದ್ಯುತ್‌ ದರ ಏರಿಕೆ ಪರಿಷ್ಕರಣೆ ಕುರಿತು ಆಯೋಗದ ಹಿಂದಿನ ಯಾವುದೇ ಆದೇಶಗಳನ್ನು ಪರಿಗಣಿಸಲಾಗುತ್ತಿಲ್ಲ. ಮೇಲ್ಮನವಿ ಪ್ರಾಧಿಕಾರದ ಆದೇಶಗಳ ಅನುಷ್ಠಾನದಲ್ಲಿ ತ್ವರಿತ ಕ್ರಮ ಅಗತ್ಯವಾಗಿದೆ ಎಂದು ತಿಳಿಸಿದರು.

ಭಾರತೀಯ ಕಿಸಾನ್‌ ಸಂಘದ ಚಿಕ್ಕಮಗಳೂರು ಪ್ರತಿನಿಧಿ ಸೂರ್ಯನಾರಾಯಣ ಮಾತನಾಡಿ, ಹಗಲಿನಲ್ಲಿ ರೈತರಿಗೆ ತ್ರೀಫೇಸ್ ವಿದ್ಯುತ್‌ ಪೂರೈಕೆ ಮಾಡಬೇಕು. ನಿರಂತರ ಜ್ಯೋತಿ ಯೋಜನೆ ಗ್ರಾಮಗಳಿಗೆ ತಲುಪುತ್ತಿಲ್ಲ. ರೈತರಿಗೆ ಗುತ್ತಿಗೆದಾರರಿಂದ ಶೋಷಣೆ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಮೆಸ್ಕಾಂ ಸುಂಕದಲ್ಲಿ ರಿಯಾಯಿತಿ ಪಡೆಯಲು ವಾಣಿಜ್ಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ದತ್ತಿ ಸಂಸ್ಥೆಗಳಾಗಿ ನೋಂದಾಯಿಸಿಕೊಳ್ಳುತ್ತಿವೆ ಎಂಬ ದೂರುಗಳು ಕೇಳಿ ಬಂದವು. ಕೋಲ್ಡ್‌ ಸ್ಟೋರೇಜ್‌ ಘಟಕದ ಪ್ರತಿನಿಧಿಗಳು ತಮಗೆ ಆಗುತ್ತಿರುವ ಹಲವು ತೊಂದರೆಗಳ ಕುರಿತು ಗಮನ ಸೆಳೆದರು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೀನಾ ಅಧ್ಯಕ್ಷತೆ ವಹಿಸಿದ್ದರು. ಎಚ್‌. ಮಂಜುನಾಥ, ಎಂ.ಡಿ. ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.