ADVERTISEMENT

ಸಮಗ್ರ ಪರಿಶೀಲನೆ ಬಳಿಕ ಕ್ರಮ: ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ್

2024–25ರಲ್ಲಿ ₹ 87.13 ಕೋಟಿ ವರಮಾನ ಕೊರತೆ; ಸರಿದೂಗಿಸಲು ಅವಕಾಶ ಕೋರಿದ ಮೆಸ್ಕಾಂ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:50 IST
Last Updated 19 ಫೆಬ್ರುವರಿ 2026, 2:50 IST
ಮಂಗಳೂರಿನಲ್ಲಿ ಬುಧವಾರ ನಡೆದ ಸಾರ್ವಜನಿಕ ವಿಚಾರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿ ಕುಮಾರ್ ಮಾತನಾಡಿದರು. ಸದಸ್ಯ ಎಚ್.ಕೆ ಜಗದೀಶ್ ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಬುಧವಾರ ನಡೆದ ಸಾರ್ವಜನಿಕ ವಿಚಾರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿ ಕುಮಾರ್ ಮಾತನಾಡಿದರು. ಸದಸ್ಯ ಎಚ್.ಕೆ ಜಗದೀಶ್ ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ   

ಮಂಗಳೂರು: ‘ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) 2024–25ನೇ ಸಾಲಿನಲ್ಲಿ ₹ 83.12 ಕೋಟಿ ವರಮಾನ ಕೊರತೆ ಉಂಟಾಗಿದೆ ಎಂದು ತನ್ನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ ವರದಿಯಲ್ಲಿ (ಎಪಿಆರ್) ತಿಳಿಸಿದ್ದು, ಈ ನಷ್ಟ ಸರಿದೂಗಿಸಲು ಅವಕಾಶ ಕಲ್ಪಿಸುವಂತೆ ಕೋರಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಿದ್ದೇವೆ’ ಎಂದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ(ಕೆಇಆರ್‌ಸಿ)ದ ಅಧ್ಯಕ್ಷ ಪಿ.ರವಿಕುಮಾರ್ ತಿಳಿಸಿದರು.

2024-25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ ಸಂಬಂಧ ಮೆಸ್ಕಾಂ ಸಲ್ಲಿಸಿರುವ  ಅರ್ಜಿ ಕುರಿತು ಇಲ್ಲಿ ಬುಧವಾರ ಏರ್ಪಡಿಸಿದ್ದ ಸಾರ್ವಜನಿಕ ವಿಚಾರಣೆ ವೇಳೆ ಅವರು ಮಾತನಾಡಿದರು.

‘ಆಯೋಗವು  2027–28ನೇ ಸಾಲಿನವರೆಗಿನ ವಿದ್ಯುತ್‌ ದರಗಳನ್ನು ಈಗಾಗಲೇ ನಿಗದಿಪಡಿಸಿದೆ. ವರಮಾನ ಕೊರತೆ ಸರಿದೂಗಿಸಲು ಪ್ರತಿ ಯೂನಿಟ್‌ ವಿದ್ಯುತ್‌ಗೆ ವಾರ್ಷಿಕ 11 ಪೈಸೆಯಷ್ಟು ಹೆಚ್ಚುವರಿ ವಸೂಲಿಗೆ ಅವಕಾಶ ನೀಡುವಂತೆ ಮೆಸ್ಕಾಂ ಕೋರಿದೆ. ಆಳವಾಗಿ ಪರಾಮರ್ಶೆ ನಡೆಸದೇ ಈ ಪ್ರಸ್ತಾವಕ್ಕೆ ಸಮ್ಮತಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಆರ್‌.ಜಯಕುಮಾರ್‌, ‘2024–25ರಲ್ಲಿ  ₹ 5,095.79 ಕೋಟಿ ವಾರ್ಷಿಕ ವರಮಾನ ಅವಶ್ಯಕತೆಯ ಪ್ರಸ್ತಾವವನ್ನು ಆಯೋಗ ಅನುಮೋದಿಸಿತ್ತು.  ಆದರೆ ಆ ಸಾಲಿನಲ್ಲಿ ₹ 5,913.5 ಕೋಟಿ ವರಮಾನ ಮಾತ್ರ ಬಂದಿದೆ. ವಿದ್ಯುತ್ ಶುಲ್ಕದ ವರಮಾನ ₹ 5,830.38 ಕೋಟಿಗೆ ಹೆಚ್ಚಳವಾಗಿರುವುದರ ಹೊರತಾಗಿಯೂ ₹ 83.12 ಕೋಟಿ ಕೊರತೆ ಎದುರಾಗಿದೆ’ ಎಂದು ವಿವರಿಸಿದರು.  

‘2024–25ರಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದ್ದರಿಂದ ಖರೀದಿ ಪ್ರಮಾಣವೂ ಹೆಚ್ಚಾಗಿದೆ. ಗೃಹ ಸಂಪರ್ಕಗಳಿಗೆ 19,505.3 ಲಕ್ಷ ಯೂನಿಟ್‌, ವಾಣಿಜ್ಯ ಸಂಪರ್ಕಗಳಿಗೆ 5,384.6 ಲಕ್ಷ ಯೂನಿಟ್‌, ಕೃಷಿ ಪಂಪ್‌ಸೆಟ್‌ಗಳಿಗೆ  21,321.4 ಲಕ್ಷ ಯೂನಿಟ್‌ ಬಳಕೆಯಾಗಿದೆ. ಹೈಟೆನ್ಷನ್‌ ಮಾರ್ಗಗಳಲ್ಲಿ ವಾಣಿಜ್ಯ ಬಳಕೆ 2390.5 ಲಕ್ಷ ಯೂನಿಟ್‌ಗಳಷ್ಟು ಹೆಚ್ಚಾಗಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಬಳಕೆ 1635.4 ಲಕ್ಷ ಯೂನಿಟ್‌ಗಳಷ್ಟು ಹೆಚ್ಚಾಗಿದೆ. ಎಲ್‌ಟಿ ಮತ್ತು ಎಚ್‌ಟಿ ಮಾರ್ಗಗಳಲ್ಲಿ ದರ ನಿಗದಿ ವೇಳೆ ಅಂದಾಜಿಸಿದ್ದ 59,108.8 ಲಕ್ಷ ಯೂನಿಟ‌್ಗಳ ಬದಲು 66,065.3 ಲಕ್ಷ ಯೂನಿಟ್‌ಗಳಷ್ಟು ಬಳಕೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.  

ಮೆಸ್ಕಾಂ ಸಿಬ್ಬಂದಿಯ ಪಿಂಚಣಿ ನೀಡುವ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತಿದೆ. ಹೊಸ ಸಂಪರ್ಕಗಳಿಗೆ ಹಾಗೂ ಕೃಷಿ ಪಂಪ್‌ಸೆಟ್‌ ಸಂಪರ್ಕಗಳಿಗೆ  ದುಬಾರಿ ದರ ವಸೂಲಿ ಮಾಡಲಾಗುತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ದೂರಿದರು. 

‘ಮಲ್ಲಂದೂರು ಗ್ರಾಮಕ್ಕೆ ಉಪಕೇಂದ್ರ ಬೇಕು ಎಂದು ಗ್ರಾಮಸ್ಥರು ಅರ್ಜಿಯನ್ನೇ ಸಲ್ಲಿಸಿಲ್ಲ ಆದರೂ ಕಾಫಿತೋಟದ ಮಾಲೀಕರೊಬ್ಬರಿಗೆ ಅನುಕೂಲ ಕಲ್ಪಿಸಲು ಅಲ್ಲಿ ಉಪಕೇಂದ್ರ ಸ್ಥಾಪಿಸಿದ್ದು ಸರಿಯೇ’ ಎಂದು ಪ್ರಶ್ನಿಸಿದರು.

‘ಆ ಉಪಕೇಂದ್ರದಿಂದ 67 ಗ್ರಾಮಗಳಿಗೆ ಅನುಕೂಲ ಆಗಲಿದೆ’ ಎಂದು ಆರ್‌.ಜಯಕುಮಾರ್‌ ಸ್ಪಷ್ಟಪಡಿಸಿದರು. 

ಆಡಳಿತ ವೆಚ್ಚವನ್ನು ಮೆಸ್ಕಾಂ ಕಡಿತಗೊಳಿಸಬೇಕು. ಅಗತ್ಯ ಇಲ್ಲದಾಗ ತಾನೆ ವಿದ್ಯುತ್‌ ಸಂಪರ್ಕ ಸ್ವಯಂಕಡಿತವಾಗುವ ಆಧುನಿಕ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ವಿದ್ಯುತ್‌ ಕಳ್ಳತನ ತಡೆಯಲು ವಿಚಕ್ಷಣಾ ದಳದವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿ.ಕೆ.ಭಟ್‌ ಸಲಹೆ ನೀಡಿದರು.  

ಚಂದ್ರಶೇಖರ ಶೆಟ್ಟಿ, ’3 ಕಿಲೊ ವಾಟ್ ಸಂಪರ್ಕಕ್ಕೆ 59.6 ಕಿ.ವಾಟ್‌  ಹೆಚ್ಚುವರಿ ಬಳಕೆಯಾಗಿದೆ ಎಂದು ಬಿಲ್‌ ನೀಡಿದ್ದಾರೆ. ಅನೇಕರು ಈ  ಸಮಸ್ಯೆ ಎದುರಿಸಿದ್ದಾರೆ’ ಎಂದು ದೂರಿದರು. ಈ ಸಮಸ್ಯೆ ನೀಗಿಸಲು ಕ್ರಮವಹಿಸುವುದಾಗಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದರು.

ಕಳೆದ ವರ್ಷ ಎಂಟು ತಿಂಗಳು ಮಳೆಯಾಗಿದ್ದು, ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಬಳಕೆ ಖಂಡಿತಾ ಕಡಿಮೆ ಆಗಿರುತ್ತದೆ. ಅಂದಾಜು ಲೆಕ್ಕಾಚಾರದ ಬದಲು ಮೀಟರ್‌ ಅಳವಡಿಸಿ ಕೃಷಿ ಪಂಪ್‌ಸೆಟ್‌ಗಳಿಗೆ ಎಷ್ಟು ವಿದ್ಯುತ್‌ ಬಳಕೆಯಾಗಿದೆ ಎಂಬುದನ್ನು ನಿಖರವಾಗಿ ಲೆಕ್ಕ ಹಾಕಬೇಕು. ಸಿಬ್ಬಂದಿ ಕೊರತೆ ನೀಗಲು ಕ್ರಮವಹಿಸಬೇಕು ಎಂದು  ಸತ್ಯನಾರಾಯಣ ಉಡುಪ  ಒತ್ತಾಯಿಸಿದರು.

ಎಲ್‌ಟಿ ಸಂಪರ್ಕದಲ್ಲಿ 150 ಕಿಲೋ ವಾಟ್‌ ಸಾಮರ್ಥ್ಯದ ಇವಿ ಚಾರ್ಜಿಂಗ್ ಸ್ಟೇಷನ್‌ ಅಳವಡಿಸಬಹುದು. ಆದರೆ ಎರಡು ವಿದ್ಯುತ್  ಮೀಟರ್‌ಗಳಿರುವ ಎಲ್‌ಟಿ ಸಂಪರ್ಕಕ್ಕೆ ಪ್ರತಿ ಇವಿ ಚಾರ್ಜಿಂಗ್ ಸ್ಟೇಷನ್‌ಗೆ 200 ಕಿಲೋ ವಾಟ್‌ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಕಾರ್ತಿಕ್‌ ಯಡಿಯಾಳ್‌ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ರವಿಕುಮಾರ್ ಭರವಸೆ ನೀಡಿದರು.  

ಆಯೋಗದ ಸದಸ್ಯ ಎಚ್‌.ಜೆ.ಜಗದೀಶನ್‌ ಹಾಗೂ ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್‌, ಆರ್ಥಿಕ ಸಲಹೆಗಾರ ದೇವರಾಜ ಎಂ.,  ಮುಖ್ಯ ಲೆಕ್ಕಾಧಿಕಾರಿ ಮುರಳೀಧರ ನಾಯಕ್‌, ತಾಂತ್ರಿಕ ನಿರ್ದೇಶಕ ಹರೀಶ್ ಕುಮಾರ್ ವಿ. ಮೊದಲಾದವರು ಭಾಗವಹಿಸಿದ್ದರು. 

- ‘ಸಿಒಎಸ್‌ ಕರಡು ತಿಂಗಳೊಳಗೆ ಪ್ರಕಟ’

‘ವಿದ್ಯುತ್‌ ವಿತರಣೆ ಪರವಾನಗಿದಾರರಿಗೆ ಸಂಬಂಧಿಸಿದ ಪೂರೈಕೆ ಷರತ್ತುಗಳ (ಸಿಒಎಸ್‌) ತಿದ್ದುಪಡಿ ಕರಡು ಸಿದ್ಧವಾಗಿದ್ದು ತಿಂಗಳ ಒಳಗೆ ಅದನ್ನು ಪ್ರಕಟಿಸಲಾಗುತ್ತದೆ.

ಈ ಕುರಿತ ಪ್ರಕ್ರಿಯೆಗಳನ್ನು ಸರಳೀಕರಿಸಲಾಗುತ್ತಿದೆ. ಕರಡು ಪ್ರಕಟವಾದ ಬಳಿಕ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆ ಆಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ತಿಳಿಸಿದರು. ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ 200 ಯೂಟನಿಟ್‌ವರೆಗೆ ವಿದ್ಯುತ್ ಉಚಿತವಾಗಿ ಸಿಗುತ್ತಿದೆ. ಹಾಗಾಗಿ  ಕೇಂದ್ರ ಸರ್ಕಾರದ ‘ಸೂರ್ಯ ಘರ್‌’ ಕಾರ್ಯಕ್ರಮಕ್ಕೆ ರಾಜ್ಯದ ಗ್ರಾಹಕರು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ ಎಂದರು. 

‘ತೆರವಾಗದ ಕೊಂಬೆಗಳಿಂದಾಗಿ ಪ್ರವಾಹ’

ಮೆಸ್ಕಾಂ ವಿದ್ಯುತ್ ಮಾರ್ಗಕ್ಕೆ ಅಡ್ಡಿಯಾಗಿರುವ ಮರಗಳ ಕೊಂಬೆಗಳನ್ನು ಕಡಿದು ಸ್ಥಳದಲ್ಲೇ ಬಿಟ್ಟುಹೋಗುತ್ತಾರೆ. ಜೋರು ಮಳೆಯಾದಾಗ ಈ ಕೊಂಬೆಗಳು ಮೋರಿಗಳಲ್ಲಿ ಸಿಲುಕಿ ಪ್ರವಾಹಕ್ಕೆ ಕಾರಣವಾಗುತ್ತಿವೆ.

ಕಡಿದ ಕೊಂಬೆಗಳನ್ನು ತಕ್ಷಣವೇ ತೆರವುಗೊಳಿಸಲು ಸೂಚಿಸಬೇಕು ಎಂದು ಕೊಟ್ಟಾರ ಚೌಕಿಯ ನಿವಾಸಿಯೊಬ್ಬರು ಒತ್ತಾಯಿಸಿದರು. ಪಾಲಿಕೆಯ ವೆಟ್‌ವೆಲ್‌ಗಳಿಗೆ ಎಕ್ಸ್‌ಪ್ರೆಸ್ ಫೀಡರ್ ಲೈನ್ ಕೊಟ್ಟಿಲ್ಲ ಎಂದೂ ಅವರು ಆರೋಪಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಎಂ.ಡಿ ಭರವಸೆ ನೀಡಿದರು.

ಕಂಬ ಖರೀದಿಯಲ್ಲಿ ಅವ್ಯವಹಾರ– ಆರೋಪ

‘ವಿದ್ಯುತ್‌ ಮಾರ್ಗದ ಕಾಂಕ್ರೀಟ್‌ ಕಂಬಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. 2021ರಲ್ಲಿ ಅತ್ಯಂತ ಕಡಿಮೆ ದರ ನಮೂದಿಸಿದ್ದ ಗುತ್ತಿಗೆದಾರರು 8 ಮೀ ಉದ್ದದ ಕಾಂಕ್ರೀಟ್‌ ಕಂಬವನ್ನು ₹ 4750 ದರದಲ್ಲಿ ಪೂರೈಸುವುದಾಗಿ ತಿಳಿಸಿದ್ದರು.

ಅಚ್ಚರಿ ಎಂದರೆ ದರ ಚೌಕಾಸಿ ಬಳಿಕ ಮೆಸ್ಕಾಂ ಆ ಗುತ್ತಿಗೆದಾರನಿಗೆ ಪ್ರತಿ ಕಂಬಕ್ಕೆ ₹ 5186  ದರ ನೀಡಿದೆ. ಅದೇ ವೇಳೆ ಜೆಸ್ಕಾಂ  ₹4282 ದರದಲ್ಲಿ ಕಂಬ ಖರೀದಿಸಿದೆ. ಆಗ ಮಾರುಕಟ್ಟೆಯಲ್ಲಿ ಪ್ರತಿ ಕಂಬಕ್ಕೆ ₹ 3855ಕ್ಕೆ ದರವಿತ್ತು’ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.