ಮಂಗಳೂರು: ‘ಕುಸಿಯುವ ಭೀತಿ ಎದುರಿಸುತ್ತಿರುವ ಕೆತ್ತಿಕಲ್ ಗುಡ್ಡದ ಅಧ್ಯಯನಕ್ಕೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ (ಜಿಎಸ್‌ಐ) ಇಲಾಖೆಯ ಇಬ್ಬರು ತಜ್ಞರು ನಗರಕ್ಕೆ ಬಂದಿದ್ದಾರೆ. ಮಂಗಳವಾರ ಮತ್ತು ಬುಧವಾರ ಕೆತ್ತಿಕಲ್ ಪರಿಸರದಲ್ಲಿ ಪರಿವೀಕ್ಷಣೆ ನಡೆಸಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದರು.
ಕೆತ್ತಿಕಲ್ ಪ್ರದೇಶವು ಒಂದೆರಡು ಕಡೆ ಸೂಕ್ಷವಾಗಿದೆ. ಅಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಬೆಳಕನ ವ್ಯವಸ್ಥೆ ಮಾಡಿ, ವಾಹನ ಸಂಚಾರದ ವೇಳೆ ಸಾಕಷ್ಟು ಮುಂಜಾಗ್ರತೆ ವಹಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಜಾವೆದ್ ಆಜ್ಮಿ, ಪಾಲಿಕೆ ಆಯುಕ್ತ ಆನಂದ ಸಿ.ಎಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.
‘ಕೆತ್ತಿಕಲ್ ಗುಡ್ಡದ ಪ್ರದೇಶದಲ್ಲಿ ನೀರು ಮುಕ್ತವಾಗಿ ಹರಿಯುತ್ತಿದೆ. ಅನಾಹುತ ತಪ್ಪಿಸಲು ಇಲ್ಲಿ ನೀರಿನ ಹರಿವು ನಿಯಂತ್ರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಅವರ ಸಲಹೆ ಮೇಲೆ ತಾತ್ಕಾಲಿಕ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ’ ಎಂದು ಮಾಹಿತಿ ನೀಡಿದರು.
‘ಡ್ರೋನ್ ಸರ್ವೆ ಹಾಗೂ ಇತರ ಕೆಲವು ದತ್ತಾಂಶ ಸಂಗ್ರಹ ಮಾಡಲು ದೆಹಲಿಯ ಇನ್ನೊಂದು ತಂಡವನ್ನು ಸಂಪರ್ಕಿಸಿದ್ದೇವೆ. ದತ್ತಾಂಶ ಸಂಗ್ರಹಿಸಿ ಅದರ ಆಧಾರದಲ್ಲಿ ಅಭಿಪ್ರಾಯ ನೀಡುವುದಾಗಿ ಜಿಎಸ್‌ಐ ತಜ್ಞರು ಭರವಸೆ ನೀಡಿದ್ದಾರೆ. ಡ್ರೋನ್ ಸರ್ವೆ ಮತ್ತು ದತ್ತಾಂಶ ಸಂಗ್ರಹ ಶೀಘ್ರವೇ ನಡೆಯಲಿದೆ’ ಎಂದರು.
‘ಕೆತ್ತಿಕಲ್‌ನಲ್ಲಿ ಹಿಂದೆ ಏನೆಲ್ಲ ಆಗಿದೆ ಎಂಬುದರ ಕುರಿತು ಅಧಿಕಾರಿಗಳು ವರದಿ ನೀಡಿದ್ದಾರೆ. ಅದನ್ನು ತಜ್ಞರಿಗೆ ನೀಡಲಿದ್ದೇವೆ. ಅಲ್ಲಿನ ಮನೆಗಳನ್ನು ಸ್ಥಳಾಂತರ ಮಾಡಲು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.