ಮಂಗಳೂರು: ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ರಾಜ್ಯದ ಐದು ಕಡೆಗಳಲ್ಲಿ ನಡೆಸಿದ ಮೇಳದಿಂದ ₹10 ಕೋಟಿಗೂ ಅಧಿಕ ವಹಿವಾಟು ನಡೆದಿದ್ದು, ಜನರು ಖಾದಿ ಬಟ್ಟೆಗಳನ್ನು ಧರಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಮಂಡಳಿಯ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಶ್ರಯದಲ್ಲಿ ನಗರದ ಲಾಲ್‌ಬಾಗ್‌ನಲ್ಲಿರುವ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಬುಧವಾರ ಆರಂಭವಾದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಿಯಾಯಿತಿ ದರದಲ್ಲಿ ಲಭ್ಯವಾಗುವ ಖಾದಿ ಬಟ್ಟೆಗಳನ್ನು ಜನರು ಖರೀದಿಸಿ, ಉತ್ಪಾದಕರನ್ನು ಪ್ರೋತ್ಸಾಹಿಸಬೇಕು ಎಂದರು.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಬಿ. ನಟೇಶ್ ಮಾತನಾಡಿ, ‘ಸ್ವಾಲಂಬನೆಯ ಸಂಕೇತವಾಗಿರುವ ಖಾದಿ ಉತ್ಪನ್ನಗಳಿಗೆ ಮಾರಾಟ ಬೆಲೆಯಲ್ಲಿ ಶೇ 35, ಖಾದಿ ರೇಷ್ಮೆ ಉತ್ಪನ್ನಗಳಿಗೆ ಶೇ 15–20ರಷ್ಟು ರಿಯಾಯಿತಿಯನ್ನು ಮೇಳದಲ್ಲಿ ನೀಡಲಾಗುತ್ತದೆ. ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಸುಬುದಾರರನ್ನು ಪ್ರೋತ್ಸಾಹಿಸಬೇಕು ಎಂದರು.
‘ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಖಾದಿ ಉತ್ಪಾದನಾ ಕೇಂದ್ರಗಳು ಇವೆ. ಉತ್ಪಾದನಾ ಕೇಂದ್ರ ಪ್ರಾರಂಭಿಸಲು ಆಸಕ್ತಿ ತೋರುವ ಸಂಘ–ಸಂಸ್ಥೆಗಳು ಐದು ನೂಲುವ ಯಂತ್ರಗಳನ್ನು ಖರೀದಿಸಿದರೆ, ಅಷ್ಟೇ ಪ್ರಮಾಣದ ಯಂತ್ರಗಳನ್ನು ಮಂಡಳಿ ಉಚಿತವಾಗಿ ನೀಡುತ್ತದೆ. ಪ್ರತಿ ಹಳ್ಳಿಯಲ್ಲಿ 4–5 ಚರಕಗಳಾದರೂ ಸದ್ದು ಮಾಡಬೇಕು ಎಂಬುದು ಮಂಡಳಿಯ ಆಶಯ’ ಎಂದರು. ಮಂಡಳಿಯ ಬಸವರಾಜ, ಆರ್. ಯೋಗೇಶ್, ರಂಜಿತ್ ಇದ್ದರು.
ಭಾರತ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ಅ.24ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಖಾದಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ.ಡಿ.ಬಿ. ನಟೇಶ್ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಾರ್ಯ ನಿರ್ವಾಹಕ ಅಧಿಕಾರಿ
ಎರಡು ಘಟಕ ಪ್ರಾರಂಭಿಸುವ ಭರವಸೆ
ಮಂಗಳೂರಿನಲ್ಲಿ ಮಹಿಳಾ ಸಂಘಟನೆಗಳ ಮೂಲಕ ಕನಿಷ್ಠ ಎರಡು ಉತ್ಪಾದನಾ ಕೇಂದ್ರ ಪ್ರಾರಂಭಿಸಲು ಪ್ರಯತ್ನಿಸಲಾಗುವುದು ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಖಾದಿ ಉತ್ಪಾದಕ ಸಂಸ್ಥೆಗಳಿಗೆ ಆಗಾಗ ತರಬೇತಿ ಹಮ್ಮಿಕೊಳ್ಳಬೇಕು. ಆ ಮೂಲಕ ಉತ್ಪಾದಕರು ಬದಲಾಗುವ ಫ್ಯಾಷನ್ ಉಡುಗೆಗಳಿಗೆ ತಕ್ಕಂತೆ ವಿನ್ಯಾಸ ಬದಲಿಸಲು ಮಾರ್ಗದರ್ಶನ ನೀಡಬೇಕು ಎಂದರು.
ಸೀರೆ ಜುಬ್ಬಾ ಶರ್ಟ್ ಕುರ್ತಾ...
ಮಹಾರಾಷ್ಟ್ರ ಬಿಹಾರ ಕಾಶ್ಮೀರ ಕರ್ನಾಟಕದ ಚಿಕ್ಕಬಳ್ಳಾಪುರ ಕೋಲಾರ ದಾವಣಗೆರೆ ಮೊದಲಾದ ಕಡೆಗಳಿಂದ ಖಾದಿ ಉತ್ಪಾದಕರು ತಾವು ಸಿದ್ಧಪಡಿಸಿದ ಉತ್ಪನ್ನಗಳನ್ನು ಮಾರಾಟಕ್ಕೆ ತಂದಿದ್ದಾರೆ. ಖಾದಿ ಸೀರೆ ರೇಷ್ಮೆ ಸೀರೆ ಕುರ್ತಾ ಶರ್ಟ್ ಜುಬ್ಬಾ ಟವೆಲ್ ಬೆಡ್‌ಶೀಟ್ ಕೈಮಗ್ಗ ಉತ್ಪನ್ನಗಳು ಕರಕುಶಲ ವಸ್ತುಗಳು ಮೇಳದಲ್ಲಿವೆ. ಆಲೂರು ನೆಲಮಂಗಲದ ವಿಜಯಲಕ್ಷ್ಮಿ ಅವರು ಚರ್ಮದ ಚಪ್ಪಲಿ ಶೂಗಳನ್ನು ಮಾರಾಟಕ್ಕೆ ತಂದಿದ್ದಾರೆ. ‘ಖರೀದಿಗೆ ಬರುವ ಗ್ರಾಹಕರು ತುಂಬ ಚೌಕಾಸಿ ಮಾಡುತ್ತಾರೆ. ನಾವು ಬೆವರುಹರಿಸಿ ತಯಾರಿಸುವ ಉತ್ಪನ್ನಗಳು ಇವು’ ಎಂದು ಬೇಸರಿಸಿದರು ಕಾಟನ್ ಖಾದಿ ಪಾಲಿಸ್ಟರ್ ಖಾದಿ ಸಿಲ್ಕ್ ಖಾದಿ ಉತ್ಪನ್ನಗಳನ್ನು ತಂದಿರುವ ಕೋಲಾರದ ರಾಮಕೃಷ್ಣ ಮತ್ತು ಚಿರಂಜೀವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.