ADVERTISEMENT

ಮಂಗಳೂರಿನಲ್ಲಿ ಖಾದಿ ಉತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:46 IST
Last Updated 26 ನವೆಂಬರ್ 2022, 4:46 IST
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ನಾಗರಾಜು ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ನಾಗರಾಜು ಮಾತನಾಡಿದರು   

ಮಂಗಳೂರು: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ–ಖಾದಿ ಉತ್ಸವ ಇದೇ 26ರಿಂದ ಡಿಸೆಂಬರ್ 10ರ ವರೆಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ.

ಪರಂಪರಾಗತ ಶೈಲಿಯ ಪರಿಸರ ಸಹ್ಯ ಸರಳ ಖಾದಿ ಉಡುಪುಗಳೊಂದಿಗೆ ಆಧುನಿಕತೆ ಮೆರುಗು ನಿರುವ ಅರಳೆ ಖಾದಿ, ಪಾಲಿ ವಸ್ತ್ರ ಖಾದಿ, ಉಣ್ಣೆ ಖಾದಿ ಮತ್ತು ರೇಷ್ಮೆ ಖಾದಿ ಉಡುಪು, ಉತ್ತರ ಭಾರತದ ಖಾದಿ ರೇಷ್ಮೆ ಉತ್ಪನ್ನಗಳು ಉತ್ಸವದ ಪ್ರಮುಖ ಆಕರ್ಷಣೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ವಿ.ನಾಗರಾಜ ತಿಳಿಸಿದರು.

ಮಂಡಳಿಯ ಅಧ್ಯಕ್ಷ ಕೆ.ವಿ.ನಾಗರಾಜು ಮಾತನಾಡಿ ಖಾದಿಗೆ ಆಧುನಿಕ ಸ್ಪರ್ಶ ನೀಡಿ ಯುವ ಜನತೆಯ ಬಳಿಗೂ ತಲುಪುವಂತೆ ಮಾಡಲಾಗಿದೆ. ಕೋವಿಡ್‌ನಿಂದಾಗಿ 2 ವರ್ಷ ಖಾದಿ ಮೇಳಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಈ ವರ್ಷ ಮೊದಲ ಮೇಳ ವಿಜಯಪುರದಲ್ಲಿ ನಡೆದಿದ್ದು 15 ದಿನಗಳಲ್ಲಿ ₹ 4.38ಕೋಟಿ ಮೊತ್ತದ ಉತ್ಪನ್ನಗಳ ಮಾರಾಟ ಆಗಿದೆ. ರಾಯಚೂರಿನಲ್ಲಿ ನಡೆದ 15 ದಿನಗಳ ಮೇಳದಲ್ಲಿ ₹ 1.60 ಕೋಟಿ ಮೊತ್ತದ ಉತ್ಪನ್ನ ಮಾರಾಟ ಆಗಿದೆ ಎಂದರು ತಿಳಿಸಿದರು.

ADVERTISEMENT

ಪಿಎಂಇಜಿಪಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆ ಆಗಿದ್ದು ಈ ವರ್ಷ ಇಲ್ಲಿಯ ವರೆಗೆ 91 ಘಟಕಗಳಿಗೆ ₹ 3.36 ಕೋಟಿ ಮೊತ್ತ ಬಿಡುಗಡೆ ಮಾಡಲಾಗಿದೆ. 1062 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ವಿವರಿಸಿದರು.

ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ನಾಗಜ್ಯೋತಿ ವಿ.ನಾಯ್ಕ್‌, ನಿರ್ದೇಶಕ ಮಾಧವ ಶೆಟ್ಟಿಗಾರ್‌, ಮಲ್ಲಿಕಾರ್ಜುನ, ರಾಘವೇಂದ್ರ, ಅಣ್ಣಪ್ಪ ಹಾಗೂ ವಿದ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.