ADVERTISEMENT

ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿಯ ಅಪಹರಣ ಯತ್ನ– ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 8:30 IST
Last Updated 9 ಫೆಬ್ರುವರಿ 2026, 8:30 IST
<div class="paragraphs"><p>ದೂರು ದಾಖಲು</p></div>

ದೂರು ದಾಖಲು

   

ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲ್ಲೂಕಿನ ಸುದೆಮುಗೇರು ಎಂಬಲ್ಲಿ ಸೋಮವಾರ ಪಿ.ಯು. ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಅಪಹರಣ ಯತ್ನ ನಡೆದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸೋಮವಾರ ಬೆಳಿಗ್ಗೆ ಸುಮಾರು 8.30 ಗಂಟೆಗೆ, 16 ವರ್ಷದ ವಿದ್ಯಾರ್ಥಿನಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ, ಮಾರುತಿ ಆಮ್ನಿ ವಾಹನದಲ್ಲಿ ಬಂದ ಮೂವರು ಆಕೆಯ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿ, ಅಡ್ಡಗಟ್ಟಿದ್ದಾರೆ. ಮುಖ ಮುಚ್ಚಿಕೊಂಡಿದ್ದ ಅವರು ಸ್ಕೂಟರ್‌ ಅನ್ನು ತಡೆದು ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಆಕೆ ಪ್ರತಿರೋಧ ಒಡ್ಡಿದಾಗ ದುಷ್ಕರ್ಮಿಗಳು ಚಾಕುವಿನಿಂದ ಆಕೆಯ ಎಡ ಕೈಗೆ ನಾಲ್ಕು ಕಡೆ ಇರಿದಿದ್ದಾರೆ. ಆಕೆಯ ಕೈಯಲ್ಲಿ ಗಾಯಗಳ ಗುರುತುಗಳಿವೆ. ಈ ಬಗ್ಗೆ ವಿದ್ಯಾರ್ಥಿನಿಯು ಪೋಷಕರೊಂದಿಗೆ ಠಾಣೆಗೆ ಹಾಜರಾಗಿ ದೂರು ನೀಡಿದ್ದಾಳೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿನಿಯು ಸಂತೆಕಟ್ಟೆವರೆಗೆ ಸ್ಕೂಟರ್‌ನಲ್ಲಿ ತೆರಳಿ, ಅಲ್ಲಿಂದ ಬಸ್‌ನಲ್ಲಿ ಸಾಗುತ್ತಿದ್ದಳು. ಇವತ್ತು ಬಸ್ ಹತ್ತಲು ಸ್ಕೂಟರ್‌ನಲ್ಲಿ ಸಾಗುವಾಗ ಅಪಹರಣ ಯತ್ನ ನಡೆದಿದೆ. ಈ ವೇಳೆ ಹಿಂದಿನಿಂದ ವಾಹನ ಬಂದಿದ್ದರಿಂದ ದುಷ್ಕರ್ಮಿಗಳು ಆಕೆಯನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿ ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.