ADVERTISEMENT

ಮಗುವಿನ ಶ್ವಾಸನಾಳದಲ್ಲಿ ಸಿಲುಕಿದ ಕಡಲೆಬೀಜದ ತುಣುಕು: ವೈದ್ಯರಿಂದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:55 IST
Last Updated 8 ಜನವರಿ 2026, 2:55 IST
   

ಮಂಗಳೂರು: ಶ್ವಾಸನಾಳದಲ್ಲಿ ಕಡಲೆಬೀಜದ ತುಣುಕು ಸಿಲುಕಿ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ 10 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.

ಮನೆಯಲ್ಲಿ ಆಟವಾಡುವಾಗ 10 ತಿಂಗಳ ಮಗು ಕಡಲೆಬೀಜ ಸೇವಿಸಿ, ಕೆಮ್ಮಲು ಆರಂಭಿಸಿ, ಕೆಲ ಸಮಯದಲ್ಲಿ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ದಿನ ಕಳೆಯುತ್ತಿದ್ದಂತೆ ಮಗು ನಿತ್ರಾಣಗೊಂಡು, ಉಸಿರಾಟದ ಸಮಸ್ಯೆ ಎದುರಿಸಲು ಶುರುಮಾಡಿತು. ಪಾಲಕರು ಪುತ್ತೂರಿನ ವೈದ್ಯರೊಬ್ಬರಿಗೆ ತೋರಿಸಿದಾಗ, ಅವರು ಶ್ವಾಸನಾಳದಲ್ಲಿ ಯಾವುದೋ ವಸ್ತು ಸಿಲುಕಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ಮಗುವನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದು, ಮಕ್ಕಳ ತಜ್ಞೆ ಡಾ. ಸ್ವಾತಿ ರಾವ್ ತಪಾಸಣೆ ನಡೆಸಿ, ಮಗುವಿಗೆ ಆಗಿರುವ ತೊಂದರೆ ಗಮನಿಸಿದರು. 

ಶ್ವಾಸನಾಳದಲ್ಲಿ ಕಡಲೆಬೀಜದ ತುಣುಕು ಸಿಲುಕಿದ್ದರಿಂದ ಬಲ ಶ್ವಾಸಕೋಶದಲ್ಲಿ ಉಬ್ಬರ ಮತ್ತು ಎಡ ಶ್ವಾಸಕೋಶ ಮತ್ತು ಹೃದಯದ ಸಂಕೋಚನ ಕಂಡುಬಂದಿತ್ತು. ತಕ್ಷಣ ಮಗುವನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದು ಡಾ. ಗೌತಮ್‌ ಕುಲಮರ್ವ ಅವರು ಕ್ಲಿಷ್ಟಕರವಾದ ಬ್ರೊಂಕೊಸ್ಕೊಪಿಕ್ ವಿಧಾನದ ಮೂಲಕ ಕಡಲೆಬೀಜದ ತುಣುಕನ್ನು ಹೊರತೆಗೆದಿದ್ದಾರೆ. ಅರವಳಿಕೆ ತಜ್ಞ ಡಾ. ಸುನಿಲ್‌ ಮತ್ತು ಡಾ. ಫ್ರೀಡಾ ತಂಡದಲ್ಲಿದ್ದರು ಎಂದು ಕೆಎಂಸಿ ಪ್ರಕಟಣೆ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.