ADVERTISEMENT

ಕೊಯಿಲ | ಕೊರತೆ ನಿವಾರಿಸಿ ಸವಲತ್ತು ಒದಗಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:10 IST
Last Updated 4 ಮಾರ್ಚ್ 2026, 6:10 IST
<div class="paragraphs"><p>ಉಪ್ಪಿನಂಗಡಿ ಸಮೀಪದ ಕೊಯಿಲ ಪಶು ವೈದ್ಯಕೀಯ ಕಾಲೇಜಿಗೆ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು</p></div>

ಉಪ್ಪಿನಂಗಡಿ ಸಮೀಪದ ಕೊಯಿಲ ಪಶು ವೈದ್ಯಕೀಯ ಕಾಲೇಜಿಗೆ ಸಚಿವ ಕೆ.ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು

   

ಕೊಯಿಲ (ಉಪ್ಪಿನಂಗಡಿ): ‘ಮುಂದಿನ ಶೈಕ್ಷಣಿಕ ವರ್ಷದಿಂದ ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭ ಮಾಡಬೇಕು ಎಂದು ತೀರ್ಮಾನಿಸಿದ್ದು, ಎಲ್ಲ ಸಿದ್ಧತೆ ನಡೆಯುತ್ತಿದೆ’ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.

ಕಡಬ ತಾಲ್ಲೂಕಿನ ಕೊಯಿಲದಲ್ಲಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ, ಕಾಮಗಾರಿ ಮತ್ತು ವ್ಯವಸ್ಥೆಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ADVERTISEMENT

ಕಾಲೇಜು ಆರಂಭಕ್ಕೆ ಮೊದಲು ಭಾರತೀಯ ಪಶು ವೈದ್ಯಕೀಯ ಕೌನ್ಸಿಲ್‌ನಿಂದ ಅನುಮತಿ ಸಿಗಬೇಕಿದೆ. ಅದಕ್ಕೂ ಮೊದಲು ಇಲ್ಲಿನ ಕೊರತೆಗಳನ್ನು ಸರಿಪಡಿಸಬೇಕಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ಮೊದಲನೇ ವರ್ಷ ಮತ್ತು 2ನೇ ವರ್ಷಕ್ಕೆ ತರಗತಿ ಪ್ರಾರಂಭಿಸಲು ಬೇಕಾದ ಸವಲತ್ತು ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜು ಆರಂಭ ಮಾಡಲು ಪೂರಕ ವ್ಯವಸ್ಥೆ ಆಗಿದೆ ಎಂದರು.

ಕಟ್ಟಡ ಕಾಮಗಾರಿ ಕಳಪೆ: ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ಮಳೆಗಾಲದಲ್ಲಿ ಕಟ್ಟಡದ ಮೇಲಿನ ಸ್ಲ್ಯಾಬ್‌ನಿಂದ ನೀರು ಸೋರಿಕೆಯಾಗುತ್ತಿದೆ. ಅದಕ್ಕಾಗಿ ಅದರ ಮೇಲೆ ತಗಡು ಶೀಟು ಹಾಕಲಾಗಿದೆ, ಹೀಗಿದ್ದೂ ಮಳೆಗೆ ಕೆಲವು ಕಡೆಯಲ್ಲಿ ಇನ್ನೂ ಸೋರಿಕೆ ಆಗುತ್ತಿದೆ ಎಂದು ಗ್ರಾಮಸ್ಥರು ಸಚಿವರ ಗಮನಕ್ಕೆ ತಂದರು. ಅಧಿಕಾರಗಳನ್ನು ಪ್ರಶ್ನಿಸಿದ ಸಚಿವ ಕೂಡಲೇ ಸರಿಪಡಿಸುವಂತೆ ಸೂಚಿಸಿದರು.

ಗೋ ಶಾಲೆಗೂ ಭೇಟಿ: ಪಶು ಸಂಗೋಪನಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗೋಶಾಲೆಗೆ ಭೇಟಿ ನೀಡಿದ ಸಚಿವ ಅಲ್ಲಿನ ವ್ಯವಸ್ಥೆಗಳ ಬಗ್ಗೆಯೂ ಪರಿಶೀಲನೆ ನಡೆಸಿದರು.

ಶಾಸಕಿ ಭಾಗೀರಥಿ ಮುರುಳ್ಯ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ವಿನೋತ್ ಪ್ರಿಯ ಆರ್., ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ವೀರಣ್ಣ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತೆ ಶಿಲ್ಪಾನಾಗ್ ಸಿ.ಟಿ., ಜಂಟಿ ನಿರ್ದೇಶಕರಾದ ಡಾ.ನಾಗರಾಜು, ಭಾರತೀಯ ಪಶು ವೈದ್ಯಕೀಯ ಪರಿಷತ್ ಮಂಡಳಿ ಸದಸ್ಯ ಡಾ.ಸುಶಾಂತ್ ರೈ ಬೆಳ್ಳಿಪ್ಪಾಡಿ, ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ಚಿದಾನಂದ ಕೆ.ಬಿ., ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರಿನ  ಉಪ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಶಿವಕುಮಾರ್, ಕೆಪಿಸಿಸಿ ಸಂಯೋಜಕ ಜಿ.ಕೃಷ್ಣಪ್ಪ ರಾಮಕುಂಜ, ಜಿ.ಪಂ. ಮಾಜಿ ಸದಸ್ಯ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್‌, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್.ಆದಂ, ಮುಖಂಡರಾದ ಯತೀಶ್ ಗೌಡ, ನಝೀರ್ ಪೂರಿಂಗ, ಲಕ್ಷ್ಮೀನಾರಾಯಣ ರಾವ್, ಬಾಲಕೃಷ್ಣ ಗೌಡ, ಎ.ಕೆ.ಬಶೀರ್, ಅಬ್ಬಾಸ್ ಕೊಂತೂರು, ಪುರುಷೋತ್ತಮ ಕೊಯಿಲ, ಎನ್.ಸಿದ್ದಿಕ್, ಎಸ್.ಪಿ. ಖಲಂದರ್, ಪಿ.ಲತೀಫ್ ಜತೆಗಿದ್ದರು.

  • ಕಟ್ಟಡ ನಿರ್ಮಾಣ ಕಾಮಗಾರಿಗೆ ಒಟ್ಟು ₹136 ಕೋಟಿ ವ್ಯಯ

  • ಮಳೆಗಾಲದಲ್ಲಿ ಸೀರು ಸೋರಿಕೆ: ಕ್ರಮ ವಹಿಸಲು ಸಚಿವ ಸೂಚನ

₹136 ಕೋಟಿಯ ಯೋಜನೆ

ಕಟ್ಟಡ ನಿರ್ಮಾಣ ಕಾಮಗಾರಿಗೆ ಒಟ್ಟು ₹136 ಕೋಟಿ ವ್ಯಯ ಆಗಿದ್ದು, ಉಳಿದಂತೆ ವ್ಯವಸ್ಥೆಗಳಿಗೆ ಇನ್ನೂ ₹18 ಕೋಟಿ ಬಿಡುಗಡೆ ಆಗಿದೆ. ಕಾಲೇಜು, ಹಾಸ್ಟೆಲ್ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳು ಈಗಾಗಲೇ ಪೂರ್ಣಗೊಂಡಿದೆ. 13 ಉಪನ್ಯಾಸಕರ ಹುದ್ದೆ, 32 ಇತರ ಸಿಬ್ಬಂದಿ ಹುದ್ದೆಗಳು ಮಂಜೂರುಗೊಳಿಸಲಾಗಿದೆ. ಸರ್ಕಾರವು ಹಂತ ಹಂತವಾಗಿ ಇಲ್ಲಿನ ಅಗತ್ಯ ಪೂರೈಸಲಿದೆ ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.