ADVERTISEMENT

ಜಾತಿ ಧರ್ಮದ ಮೇರೆ ಮೀರಿದ ಭಾಷೆ ಕೊಂಕಣಿ

ಕರ್ನಾಟಕದ ಕೊಂಕಣಿ ಭಾಷಾ ಮಂಡಳ್‌ ಭಾಂಗಾರೋತ್ಸವ ಸಮಾರೋಪದಲ್ಲಿ ರೊನಾಲ್ಡ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 8:29 IST
Last Updated 10 ಜನವರಿ 2024, 8:29 IST
<div class="paragraphs"><p>ಮಂಗಳೂರಿನಲ್ಲಿ ನಡೆದ ಕರ್ನಾಟಕ ಕೊಂಕಣಿ ಭಾಷಾ ಮಂಡಳದ ಸುವರ್ಣ ಮಹೋತ್ಸವದಲ್ಲಿ (ಕುಳಿತವರು ಎಡದಿಂದ)&nbsp; ಕಲ್ಯಾಣಿಬಾಯಿ ನೀರ್ಕೆರೆ, ಕೃತಿಕಾ ಕಾಮತ್‌, ಅಪ್ಪುರಯ ಪೈ, ರಾಮದಾಸ್‌ ಗುಲ್ವಾಡಿ, ಕ್ಲಾನ್‌ವಿನ್‌ ಫರ್ನಾಂಡಿಸ್‌ ಅವರಿಗೆ ಪುರಸ್ಕಾರ ‌ಪ್ರದಾನ ಮಾಡಲಾಯಿತು.&nbsp;</p></div>

ಮಂಗಳೂರಿನಲ್ಲಿ ನಡೆದ ಕರ್ನಾಟಕ ಕೊಂಕಣಿ ಭಾಷಾ ಮಂಡಳದ ಸುವರ್ಣ ಮಹೋತ್ಸವದಲ್ಲಿ (ಕುಳಿತವರು ಎಡದಿಂದ)  ಕಲ್ಯಾಣಿಬಾಯಿ ನೀರ್ಕೆರೆ, ಕೃತಿಕಾ ಕಾಮತ್‌, ಅಪ್ಪುರಯ ಪೈ, ರಾಮದಾಸ್‌ ಗುಲ್ವಾಡಿ, ಕ್ಲಾನ್‌ವಿನ್‌ ಫರ್ನಾಂಡಿಸ್‌ ಅವರಿಗೆ ಪುರಸ್ಕಾರ ‌ಪ್ರದಾನ ಮಾಡಲಾಯಿತು. 

   

ಮಂಗಳೂರು: ‘ಕೊಂಕಣಿ ಭಾಷೆಗೆ ಯಾವುದೇ ಜಾತಿ, ಧರ್ಮಗಳ ಮೇರೆಗಳಿಲ್ಲ.  ಹಿಮಾಲಯದಷ್ಟು ಉತ್ತುಂಗಕ್ಕೆ ಬೆಳೆದಿರುವ ಈ ಭಾಷೆ ಮುಂಬೈನಿಂದ ಕೊಚ್ಚಿವರೆಗೆ ಪಶ್ಚಿಮಘಟ್ಟದಿಂದ ಅರಬ್ಬೀ ಸಮುದ್ರದ ನಡುವಿನ ತೀರದುದ್ದಕ್ಕೂ ವ್ಯಾಪಿಸುವ ಮೂಲಕ ವಿಸ್ತಾರದಲ್ಲೂ ಛಾಪು ಮೂಡಿಸಿದೆ’ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರೊನಾಲ್ಡ್ ಫರ್ನಾಂಡಿಸ್ ಹೇಳಿದರು.

ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕದ ಕೊಂಕಣಿ ಭಾಷಾ ಮಂಡಳ್‌ ಭಾಂಗಾರೋತ್ಸವದ (ಸುವರ್ಣ ಮಹೋತ್ಸವ) ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. 

ADVERTISEMENT

‘ಅನೇಕ ಹಿರಿಯರ ಪರಿಶ್ರಮದಿಂದ ಕೊಂಕಣಿ ಭಾಷೆಗೆ ಸಂಘಟನಾತ್ಮಕವಾಗಿ ಗಟ್ಟಿ ನೆಲೆ ಸಿಕ್ಕಿದೆ. ಸರ್ಕಾರದ ಆಶ್ರಯವೂ ಸಿಕ್ಕಿದೆ. ಕೊಂಕಣಿ ಭಾಷಾ ಅಕಾಡೆಮಿ, ವಿಶ್ವವಿದ್ಯಾಲಯದಲ್ಲಿ ಕೊಂಕಣಿ ಅಧ್ಯಯನ ಪೀಠ, ಎಂ.ಎ ಕೋರ್ಸ್‌ಗಳೆಲ್ಲವೂ ಇದರ ಫಲಶ್ರುತಿಗಳು. ಸಂಘಟನೆ, ಚಳುವಳಿ, ಸರ್ಕಾರದ ಪ್ರೋತ್ಸಾಹ ಹಾಗೂ ಶಾಸ್ತ್ರೀಯ ಶಿಕ್ಷಣ ಭಾಷೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರಮುಖವಾದವು.  ಕೊಂಕಣಿಗೆ ಇವೆಲ್ಲವೂ ಲಭಿಸಿವೆ. ಆದರೆ  ಇವುಗಳ ನಡುವೆ ಸಮನ್ವಯವಿಲ್ಲದ ಕಾರಣ ಭಾಷೆ ಸಮಸ್ಯೆಗೆ ಸಿಲುಕಿದೆ. ಕೊಂಕಣಿ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಈ ಭಾಷೆಯನ್ನು ಮತ್ತಷ್ಟು ಶಕ್ತಿಯುತಗೊಳಿಸಬೇಕಿದೆ. ಈ ಭಾಷೆಗೆ ಇನ್ನಷ್ಟು ಒಳ್ಳೆಯ ದಿನಗಳು ಬರಲಿ’ ಎಂದು ಹಾರೈಸಿದರು.

ರಂಗಕರ್ಮಿ ರಾಮದಾಸ್ ಗುಲ್ವಾಡಿ ಅವರಿಗೆ ಜೀವಮಾನದ ಸಾಧನೆ ಪುರಸ್ಕಾರ, ಕುಡುಬಿ ಜಾನಪದ ಕಲಾವಿದೆ ಹಾಗೂ ನಾಟಿ ವೈದ್ಯೆ ಕಲ್ಯಾಣಿಬಾಯಿ ನೀರ್ಕೆರೆ ಅವರಿಗೆ ಜಾನಪದ ಪುರಸ್ಕಾರ, ಪತ್ರಿಕಾ ವಿತರಕ ಉಪ್ಪುಂದ ಅಪ್ಪುರಾಯ ಪೈ ಅವರಿಗೆ ಕಾರ್ಯಕರ್ತ ಪುರಸ್ಕಾರ, ನಟ ಕ್ಲಾನ್‍ವಿನ್ ಫರ್ನಾಂಡಿಸ್ ಅವರಿಗೆ ಯುವ ಪುರಸ್ಕಾರ ಹಾಗೂ ‘ದಿವೋಚೋ ಉಜ್ವಾಡು’ ಕೃತಿಯ ಲೇಖಕಿ ಕೃತಿಕಾ ಕಾಮತ್ ಅವರಿಗೆ ಪುಸ್ತಕ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಕೊಂಕಣಿ ಭಾಷಾ ಮಂಡಳ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸಲಾಯಿತು. 50 ಮಂದಿ  ಕೊಂಕಣಿ ಭಾಷಿಕ ಸಾಧಕರನ್ನು ಗೌರವಿಸಲಾಯಿತು.

ಕೊಂಕಣಿ ಭಾಷಾ ಮಂಡಳದ ಸ್ಥಾಪಕ ಖಜಾಂಚಿ  ಮಾರ್ಕ್ ವಾಲ್ಡರ್,  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕುಲಸಚಿವ ಆರ್‌. ಮನೋಹರ್ ಕಾಮತ್, ವಜ್ರಾಭರಣ ಮಳಿಗೆಯ ಮಾಲೀಕ ಪ್ರಶಾಂತ್ ಶೇಟ್, ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷ ಕೆ.ವಸಂತ್ ರಾವ್, ಖಜಾಂಚಿ ಸುರೇಶ್ ಶೆಣೈ, ಕಾರ್ಯದರ್ಶಿ ರೇಮಂಡ್ ಡಿಕುನ್ಹಾ  ಭಾಗವಹಿಸಿದ್ದರು. ಜೂಲಿಯೆಟ್ ಫರ್ನಾಂಡಿಸ್ ಹಾಗೂ ಫೆಲ್ಸಿ ಲೋಬೊ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.  ಸಮಾರೋಪ ಸಮಾರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಭವ್ಯ ಮೆರವಣಿಗೆ ನಡೆಯಿತು. ವಿನ್ಸೆಂಟ್ ಫರ್ನಾಂಡಿಸ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ‌‘ಮುಂಗೈತಲೆ’ ನಾಟಕ ಪ್ರದರ್ಶನ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.