ಮಂಗಳೂರು: ಕೂಳೂರು ಹಳೆ ಸೇತುವೆ ದುರಸ್ತಿ ಕಾಮಗಾರಿಗೆ ಅನುಕೂಲ ಕಲ್ಪಿಸಲು ಘನ ವಾಹನಗಳು ಕೆಲ ದಿನ ನಿಗದಿತ ಸಮಯದಲ್ಲಿ ಮಾತ್ರ ಸಂಚರಿಸುವಂತೆ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ.
ಇದೇ 19, 20, 21ರಂದು ಮೂರು ದಿನ ಘನ ವಾಹನಗಳು (ಪ್ರಯಾಣಿಕರ ಬಸ್ಸು ಹೊರತುಪಡಿಸಿ) ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಹಾಗೂ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ವರೆಗಿನ ಅವಧಿಯಲ್ಲಿ ಮಾತ್ರ ಈ ಸೇತುವೆಯಲ್ಲಿ ಸಂಚರಿಸಲು ಅನುಮತಿಸಲಾಗುವುದು.
ಈ ದಿನಗಳಂದು ಬೆಳಿಗ್ಗೆ 6ರಿಂದ 11ರ ವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 10ರ ಅವಧಿಯಲ್ಲಿ ಉಡುಪಿ ಕಡೆಯಿಂದ ಕೇರಳಕ್ಕೆ ಸಂಚರಿಸುವ ಘನ ವಾಹನಗಳು ಮೂಲ್ಕಿ–ಸುರತ್ಕಲ್–ಎಂಆರ್‌ಪಿಎಲ್–ಬಜಪೆ–ಕೆಪಿಟಿ–ನಂತೂರು ಮಾರ್ಗವಾಗಿ ಹಾಗೂ ಉಡುಪಿ ಕಡೆಯಿಂದ ಬೆಂಗಳೂರು ಸಂಚರಿಸುವ ವಾಹನಗಳು ಉಡುಪಿ–ಮೂಲ್ಕಿ–ಮೂಡುಬಿದಿರೆ–ಬಂಟ್ವಾಳ ಮಾರ್ಗವಾಗಿ ಸಂಚರಿಸಬೇಕು.
ಈ ಮಾರ್ಪಾಡು ಅಗತ್ಯವಿದ್ದರೆ ಆಗಸ್ಟ್ 25ರಿಂದ ಸೆಪ್ಟೆಂಬರ್ 25ರ ವರೆಗೆ ವಿಸ್ತರಿಸಲಾಗುವುದು. ಸೆಪ್ಟೆಂಬರ್ 25ರ ಒಳಗಾಗಿ ಸೇತುವೆಯ ಕೆಲಸವನ್ನು ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಕೂಳೂರು ಸೇತುವೆಯ ಸಾಮರ್ಥ್ಯ ಹಾಗೂ ಸ್ಥಿರತೆಯ ಬಗ್ಗೆ ಇದೇ 20ರ ಒಳಗಾಗಿ ವರದಿ ನೀಡುವಂತೆ ಹಾಗೂ ಇಲ್ಲಿಯ ಹೊಸ ಸೇತುವೆ ಕಾಮಗಾರಿಯನ್ನು ತ್ವರಿತಗೊಳಿಸಿ, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.