ADVERTISEMENT

ಮಂಗಳೂರು: ಕೊರಗ ಸಮುದಾಯದ ಸಂಕಷ್ಟ ಬಿಡಿಸಿಟ್ಟ ಸುಂದರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 5:22 IST
Last Updated 4 ಸೆಪ್ಟೆಂಬರ್ 2025, 5:22 IST
ಮಂಗಳೂರು ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಕೊರಗರ ಅಭಿವೃದ್ಧಿ ಸಭೆಯಲ್ಲಿ ಸುಂದರ ಬೆಳುವಾಯಿ ಮಾತನಾಡಿದರು
ಮಂಗಳೂರು ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಕೊರಗರ ಅಭಿವೃದ್ಧಿ ಸಭೆಯಲ್ಲಿ ಸುಂದರ ಬೆಳುವಾಯಿ ಮಾತನಾಡಿದರು   

ಮಂಗಳೂರು: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೊರಗರ ಅಭಿವೃದ್ಧಿ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ ಬೆಳುವಾಯಿ ಅವರು ಕೊರಗರ ಸಂಕಷ್ಟಗಳನ್ನು ವಿವರಿಸಿ ಅಧಿಕಾರಿಗಳನ್ನು ದಂಗುಬಡಿಸಿದರು.

ಕಂದಾಯ ವಿಷಯಗಳಿಗೆ ಸಂಬಂಧಿಸಿ ಚರ್ಚೆ ಮಾಡುವಂತೆ ಕೊರಗ ಸಮುದಾಯದ ಮುಖಂಡರು ಕೋರಿದಾಗ ತಹಶೀಲ್ದಾರ್‌ ತುರ್ತಾಗಿ ಬೆಂಗಳೂರಿನ ನ್ಯಾಯಾಲಯಕ್ಕೆ ಹೋಗಿದ್ದಾರೆ, ಸದ್ಯ ಸಮುದಾಯದ ಸಮಸ್ಯೆಗಳೇನಾದರೂ ಇದ್ದರೆ ತಿಳಿಸಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಂದರ ಬೆಳುವಾಯಿ ‘ಕೊರಗರಿಗಾಗಿ ಕೋಟ್ಯಂತರ ಮೊತ್ತ ವ್ಯಯಿಸುತ್ತಿದ್ದರೂ ಅದರ ಫಲ ಸಮರ್ಪಕವಾಗಿ ಸಿಗುವುದಿಲ್ಲ. ಉಳ್ಳವರಿಗೆ ಎಲ್ಲವೂ ಸಿಗುತ್ತದೆ, ಇಲ್ಲದವರು ಹಾಗೆಯೇ ಉಳಿಯುತ್ತಾರೆ’ ಎಂದರು.

ADVERTISEMENT

‘ಹಿಂದೆ ಮಲ ಹೊರುವ ಪದ್ಧತಿ ಜಾರಿಯಲ್ಲಿತ್ತು. ಈಗ ಅಂಥ ಅಮಾನವೀಯತೆ ಇಲ್ಲದಿದ್ದರೂ ಅಸ್ಪೃಶ್ಯತೆ ಜೀವಂತವಾಗಿದೆ. ದೇಶದ ಯಾವ ಕಡೆಯಲ್ಲೂ ಬುಡಕಟ್ಟು ಜನರು ಅಸ್ಪೃಶ್ಯರಲ್ಲ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಮಾತ್ರ ಇಂಥ ಧೋರಣೆ ಇದೆ. ಅಜಿಲು ಪದ್ಧತಿ ಕೂಡ ಸಂಪೂರ್ಣ ಇಲ್ಲದಾಗಲಿಲ್ಲ’ ಎಂದ ಅವರು ’ಕೊರಗರಿಗೆ ಸಂಬಂಧಿಸಿ ಸರ್ಕಾರ ಹೊರಡಿಸಿದ ಸುತ್ತೋಲೆಗಳು ಕೂಡ ಅಸ್ಪೃಶ್ಯವಾಗಿಯೇ ಉಳಿದಿವೆ. ಅದನ್ನು ಜಾರಿಗೆ ತರಲು ಯಾರೂ ಮುಂದಾಗುತ್ತಿಲ್ಲ’ ಎಂದರು.

‘ಪ್ರಧಾನಮಂತ್ರಿ ಜನ್‌ಮನ್ ಯೋಜನೆಯ ಫಲ ಹೆಚ್ಚಿನವರಿಗೆ ಸಿಗಲಿಲ್ಲ. ಆಧಾರ್‌, ಮತದಾರರ ಚೀಟಿ ಇತ್ಯಾದಿ ಇಲ್ಲದಿರುವವರು ಇನ್ನೂ ಇದ್ದಾರೆ. ಆಧಾರ್ ಹೊರತುಪಡಿಸಿ ಉಳಿದೆಲ್ಲವನ್ನೂ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಮಾಡಬಹುದು. ಆದರೆ ಅದಕ್ಕೆ ಯಾರೂ ಮುತುವರ್ಜಿ ವಹಿಸುತ್ತಿಲ್ಲ’ ಎಂದು ಅವರು ದೂರಿದರು.

‘ಕೊರಗಜ್ಜನನ್ನು ಪೂಜಿಸುವ ಜಿಲ್ಲೆಯಲ್ಲಿ ಕೊರಗರನ್ನು ದೂರ ಮಾಡಲಾಗುತ್ತಿದೆ. ನಮಗೆ ಬದುಕು ಹಕ್ಕು ಇದೆ ಎಂಬುದನ್ನು ಕೂಡ ಆಡಳಿತ ಮರೆತಿದೆ. ಸರ್ಕಾರಿ ಯೋಜನೆಗಳನ್ನು ಜಾರಿಗೆ ತರಲು ಇನ್ನಾದರೂ ಮುಂದಾಗಬೇಕು, ಇಲ್ಲವಾದರೆ ಆಗುವುದಿಲ್ಲ ಎಂದು ನಿರ್ಣಯಿಸಬೇಕು. ಜಿಲ್ಲೆಯಲ್ಲಿ ಕೇವಲ 3700 ಕೊರಗರು ಇದ್ದಾರೆ. ಈಗಿನ ಪರಿಸ್ಥಿತಿ ಮುಂದುವರಿದರೆ ಮೂರೂವರೆ ದಶಕಗಳಲ್ಲಿ ಕೊರಗರು ಉಳಿಯುವುದಿಲ್ಲ. ಜಿಲ್ಲೆಯ ಮೂಲ ಆದಿವಾಸಿಗಳಾದ ನಾವೇ ಈಗ ಬೀದಿಬಿಕಾರಿಗಳಾಗಿರುವುದು ದುರದೃಷ್ಟಕರ’ ಎಂದರು. ಸಂಜೀವ, ಕೊಗ್ಗ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಾಣಿ–ಪಕ್ಷಿಗಳು ವಿನಾಶದ ಅಂಚಿನಲ್ಲಿವೆ ಎಂದು ಗೊತ್ತಾದ ಕೂಡಲೇ ಅವುಗಳನ್ನು ಉಳಿಸಲು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಅಳಿಯುತ್ತಿರುವ ಕೊರಗರನ್ನು ಉಳಿಸಲು ಯಾರೂ ಇಲ್ಲ.
ಸುಂದರ ಬೆಳುವಾಯಿ ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.