ADVERTISEMENT

ಮಂಗಳೂರು: ಕೊಯಿಲದಲ್ಲಿ ಜಾನುವಾರು ‘ಮೇವು ಬ್ಯಾಂಕ್’

ಹಾಲು ಒಕ್ಕೂಟದ ನೆರವಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ ಯೋಜನೆ ಜಾರಿ

ಸಂಧ್ಯಾ ಹೆಗಡೆ
Published 28 ಅಕ್ಟೋಬರ್ 2023, 7:54 IST
Last Updated 28 ಅಕ್ಟೋಬರ್ 2023, 7:54 IST
ಕೊಯಿಲದ ಗೋಶಾಲೆ ಆವರಣದಲ್ಲಿ ಬೆಳೆಸಿರುವ ಹಸಿರು ಹುಲ್ಲು
ಕೊಯಿಲದ ಗೋಶಾಲೆ ಆವರಣದಲ್ಲಿ ಬೆಳೆಸಿರುವ ಹಸಿರು ಹುಲ್ಲು   

ಮಂಗಳೂರು: ಪುತ್ತೂರು ತಾಲ್ಲೂಕಿನ ಕೊಯಿಲದ ಜಾನುವಾರು ತಳಿ ಸಂವರ್ಧನಾ ಕೇಂದ್ರದ 88 ಎಕರೆ ಖಾಲಿ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಪಶುಸಂಗೋಪನಾ ಇಲಾಖೆಯು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಕಾರದಲ್ಲಿ ಹಸಿರು ಮೇವು ಬೆಳೆಸಲು ಯೋಜನೆ ರೂಪಿಸಿದೆ.

ಜಾನುವಾರು ತಳಿ ಸಂವರ್ಧನಾ ಕೇಂದ್ರಕ್ಕೆ ಸೇರಿದ 98.75 ಎಕರೆ ಜಾಗ ಕೊಯಿಲದಲ್ಲಿ ಇದೆ. ಇದರಲ್ಲಿ 12 ಎಕರೆಗೆ ಕಾಂಪೌಂಡ್ ನಿರ್ಮಿಸಿರುವ ಇಲಾಖೆ, ಆರು ಎಕರೆಯಲ್ಲಿ ಹಸಿರು ಹುಲ್ಲು ಬೆಳೆಸಿ, ಪಕ್ಕದಲ್ಲಿ ಗೋಶಾಲೆಯ ಶೆಡ್ ನಿರ್ಮಿಸಿದೆ. ಇಲ್ಲಿರುವ ಜಾನುವಾರುಗಳಿಗೆ ಇದೇ ಹುಲ್ಲನ್ನು ಆಹಾರವಾಗಿ ನೀಡಲಾಗುತ್ತಿದೆ.

ಪ್ರಾಯೋಗಿಕವಾಗಿ ಇಲ್ಲಿ ಹುಲ್ಲು ಬೆಳೆಸಿ ಯಶಸ್ಸು ಕಂಡಿರುವ ಇಲಾಖೆ, ಸಂಪೂರ್ಣ ಜಾಗವನ್ನು ಇದೇ ಉದ್ದೇಶಕ್ಕೆ ಬಳಸಿಕೊಂಡು, ವಿಶಾಲವಾದ ಪ್ರದೇಶವನ್ನು ಒತ್ತುವರಿಯಿಂದ ರಕ್ಷಿಸಲು ಯೋಚಿಸಿದೆ.

ADVERTISEMENT

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಸಿರು ಮೇವಿನ ಲಭ್ಯತೆ ಕಡಿಮೆ ಇದೆ. ಇಲ್ಲಿನ ರೈತರು ಜಾನುವಾರುಗಳಿಗೆ ನೀಡಲು ಸಿದ್ಧ ಪಶು ಆಹಾರವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಹೀಗಾಗಿ, ಹಾಲು ಉತ್ಪಾದನಾ ವೆಚ್ಚ ಅಧಿಕವಾಗುತ್ತಿದ್ದು, ಹೈನುಗಾರಿಕೆ ಸೊರಗುತ್ತಿದೆ. ಹೈನುಗಾರಿಕೆ ಪ್ರೋತ್ಸಾಹಿಸುವ ಜತೆಗೆ ಜಾಗವನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಇಲ್ಲಿ ಫಾಡರ್ ಬ್ಯಾಂಕ್ ನಿರ್ಮಿಸಲು ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸ್ಥಳ ಪರಿಶೀಲನೆಯೂ ಮುಗಿದಿದೆ’ ಎನ್ನುತ್ತಾರೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಅರುಣ್‌ಕುಮಾರ್. 

‘ಹೈಬ್ರೀಡ್ ನೇಪಿಯರ್ಸ್ ಹಾಗೂ ಜೋಳದ ಹುಲ್ಲನ್ನು ಇಲ್ಲಿ ಬೆಳೆಸಬಹುದು. ಇಲ್ಲಿನ ಹವಾಮಾನಕ್ಕೆ ಚೆನ್ನಾಗಿ ಬೆಳೆಯುವ ಹುಲ್ಲು, ಕಟಾವಿನ ನಂತರ ಮತ್ತೆ ಚಿಗುರುತ್ತದೆ. ಲಾಭದ ಉದ್ದೇಶಕ್ಕಿಂತ ಹೆಚ್ಚಾಗಿ ರೈತರ ಜಾನುವಾರುಗಳಿಗೆ ಸ್ಥಳೀಯವಾಗಿ ಹುಲ್ಲು ಲಭ್ಯವಾಗಲೆಂಬ ಆಶಯದಿಂದ ಫಾಡರ್ ಬ್ಯಾಂಕ್ ರೂಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹಸಿರು ಹುಲ್ಲು ಯಥೇಚ್ಛವಾಗಿ ಸಿಗುತ್ತದೆ. ಆದರೆ, ಫೆಬ್ರುವರಿ ನಂತರ ಇಲ್ಲಿ ಹಸಿರು ಹುಲ್ಲಿನ ಲಭ್ಯತೆ ಕಡಿಮೆಯಾಗುತ್ತದೆ. ಆ ವೇಳೆ ರಸಮೇವಿನ ರೂಪದಲ್ಲಿ ಸಂಗ್ರಹಿಸುವ ಫಾಡರ್ ಬ್ಯಾಂಕ್‌ನ ಹುಲ್ಲನ್ನು ಬಳಸಿಕೊಳ್ಳಬಹುದು. ಇದು ಜಾನುವಾರುಗಳಿಗೂ ಪೌಷ್ಟಿಕ ಆಹಾರ’ ಎಂದು ಅವರು ವಿವರಿಸಿದರು.

‘ಪಶುಸಂಗೋಪನಾ ಇಲಾಖೆ ನೀಡಿರುವ ಪ್ರಸ್ತಾವದ ಹಿನ್ನೆಲೆಯಲ್ಲಿ ನಮ್ಮ ಒಕ್ಕೂಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಾಯೋಗಿಕವಾಗಿ 30 ಎಕರೆಯಲ್ಲಿ ಹುಲ್ಲು ಬೆಳೆಸಿ, ಹೈನುಗಾರರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಯೋಚಿಸಲಾಗಿದೆ. ಬೇಡಿಕೆಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ  ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೊಯಿಲದಲ್ಲಿರುವ ಕುಮಾರಧಾರ ಗೋಶಾಲೆ
ಜಿಲ್ಲೆಯಲ್ಲಿ 2.52 ಲಕ್ಷ ಜಾನುವಾರು ಹೆಚ್ಚುತ್ತಿರುವ ಹಾಲು ಉತ್ಪಾದನಾ ವೆಚ್ಚ ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿರುವ ರೈತರು
ಗೋಮಾಳದಲ್ಲೂ ಹಸಿರು ಹುಲ್ಲು
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿರುವ ಗೋಮಾಳ ಜಾಗದಲ್ಲೂ ಫಾಡರ್ ಬ್ಯಾಂಕ್ ಮಾಡುವ ಯೋಜನೆಯಿದೆ. ಮೂಲ್ಕಿ ಮುನ್ನಬೆಟ್ಟು 15 ಎಕರೆ ಸುಳ್ಯದಲ್ಲಿ 7.7 ಎಕರೆ ಮೂಡುಬಿದಿರೆಯಲ್ಲಿ 7 ಎಕರೆ ಧರ್ಮಸ್ಥಳ ಮಚ್ಚಿನದಲ್ಲಿ 7 ಎಕರೆ ಗೋಮಾಳ ಜಾಗ ಇದೆ. ಸ್ಥಳೀಯ ಹಾಲು ಉತ್ಪಾದಕ ಸಂಘಗಳ ಯೋಜನೆ ಜಾರಿಗೊಳಿಸಲು ಯೋಚಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿರುವ ಗೋಮಾಳ ಜಾಗಗಳನ್ನು ಪಶುಸಂಗೋಪನಾ ಇಲಾಖೆ ಸುಪರ್ದಿಗೆ ನೀಡಿದರೆ ಫಾಡರ್ ಬ್ಯಾಂಕ್ ಮಾಡಲು ಅನುಕೂಲವಾಗುತ್ತದೆ ಎಂದು ಡಾ. ಅರುಣ್‌ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.