ADVERTISEMENT

ಉಪ್ಪಿನಂಗಡಿ: ನೆಕ್ಕಿಲಾಡಿಯಲ್ಲಿ 110 ಕೆ.ವಿ. ಸಬ್ ಸ್ಟೇಷನ್‌ಗೆ ಜಮೀನು ಮಂಜೂರು

ಕೆಪಿಟಿಸಿಎಲ್‌ನಿಂದ ಕಂದಾಯ ಇಲಾಖೆಗೆ ಹಣ ಪಾವತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 14:18 IST
Last Updated 28 ಜುಲೈ 2023, 14:18 IST
ಉಪ್ಪಿನಂಗಡಿ ಸಮೀಪ 34ನೇ ನೆಕ್ಕಿಲಾಡಿ ಗ್ರಾಮದ ಕರುವೇಲುವಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ಸ್ಥಾಪನೆಗೆ ಮಂಜೂರು ಆಗಿರುವ ಜಾಗ
ಉಪ್ಪಿನಂಗಡಿ ಸಮೀಪ 34ನೇ ನೆಕ್ಕಿಲಾಡಿ ಗ್ರಾಮದ ಕರುವೇಲುವಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ಸ್ಥಾಪನೆಗೆ ಮಂಜೂರು ಆಗಿರುವ ಜಾಗ   

ಉಪ್ಪಿನಂಗಡಿ: ಈ ಭಾಗದ ವಿದ್ಯುತ್ ಸುಧಾರಣೆಗೆ 34ನೇ ನೆಕ್ಕಿಲಾಡಿ ಗ್ರಾಮದ ಕರುವೇಲುವಿನಲ್ಲಿ 110 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಸ್ಥಾಪನೆಗೆ ಯೋಜನೆ ರೂಪಿಸಿದ್ದು, ಇದರ ಡಿಪಿಆರ್‌ಗೆ ಅನುಮೋದನೆ ನೀಡುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸಲ್ಲಿಸಿದ ಮನವಿಗೆ ಸ್ಪಂದನೆ ಸಿಕ್ಕಿದೆ. ಸಬ್ ಸ್ಟೇಷನ್ ನಿರ್ಮಾಣಕ್ಕೆ ಸಂಬಂಧಿಸಿ ಜಾಗಕ್ಕೆ ಜಿಲ್ಲಾಧಿಕಾರಿಯಿಂದ ಮಂಜೂರಾತಿ ದೊರಕಿದೆ.

40 ವರ್ಷಗಳ ಬಳಿಕ ಪುತ್ತೂರು ತಾಲ್ಲೂಕಿಗೆ 2ನೇ 110 ಕೆವಿ ಉಪಕೇಂದ್ರ ಮಂಜೂರಾಗಿದೆ. 34 ನೆಕ್ಕಿಲಾಡಿ ಗ್ರಾಮದ ಕರುವೇಲ್‌ನಲ್ಲಿ ವಿದ್ಯುತ್ ಉಪಕೇಂದ್ರಕ್ಕೆ ಹಲವು ವರ್ಷಗಳಿಂದ ಪ್ರಯತ್ನಗಳು ನಡೆದಿದ್ದವು. ಸಂಜೀವ ಮಠಂದೂರು ಅವರ ಶಾಸಕರಾಗಿದ್ದಾಗ 3.26 ಎಕರೆ ಕುಮ್ಕಿ ಜಮೀನು ವಿರಹಿತಗೊಳಿಸಿ ಮಂಜೂರಾಗಿತ್ತು.

ಆದರೆ, ಚುನಾವಣೆಗೆ ಮುನ್ನ ಈ ಜಮೀನಿಗೆ ₹1.4 ಕೋಟಿ ಪಾವತಿಸಲು ಕೆಪಿಟಿಸಿಎಲ್‌ಗೆ ಕಂದಾಯ ಇಲಾಖೆ ಸೂಚಿಸಿತ್ತು. ಆದರೆ, ಪಾವತಿಸಲು ವಿಳಂಬವಾಗಿತ್ತು. ಈ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅವರ ಗಮನ ಸೆಳೆದಾಗ ಇಂಧನ ಸಚಿವರನ್ನು ಭೇಟಿ ಮಾಡಿ 15 ದಿನಗಳಲ್ಲಿ ನಿಗದಿತ ಮೊತ್ತ ಪಾವತಿಸಲು ಕ್ರಮ ಕೈಗೊಂಡು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಕೆಪಿಟಿಸಿಎಲ್‌ನಿಂದ ವತಿಯಿಂದ ಡಿಪಿಆರ್ ಹಾಗೂ ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ.

ADVERTISEMENT

ಮೆಸ್ಕಾಂನಿಂದ ಶತತ ಪ್ರಯತ್ನ: ವಿದ್ಯುತ್ ಸಬ್ ಸ್ಟೇಷನ್‌ಗೆ ಜಮೀನು ಮಂಜೂರು ಮಾಡಲು ಜಮೀನಿನ ಮೇಲಿನ ಕುಮ್ಕಿ ಸೌಲಭ್ಯವನ್ನು ವಿರಹಿತಪಡಿಸಿ ಆದೇಶಿಸಲಾಗಿತ್ತು. ಆದರೆ, ಈ ಜಮೀನಿನ ಪ್ರಸ್ತುತ ಮಾರುಕಟ್ಟೆ ಮೌಲ್ಯ ಮತ್ತು ನಿಯಮಾನುಸಾರ ಇತರ ಶುಲ್ಕ ವಿಧಿಸಿ ಸರ್ಕಾರಕ್ಕೆ ಜಮೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಕುರಿತು ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದು ಯೋಜನೆಯ ಕುರಿತು ವಿವರಿಸಿದ್ದೆ. ಅವರು ಜಮೀನು ಮಂಜೂರಾತಿ ಮಾಡಿಸಿಕೊಟ್ಟಿದ್ದಾರೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಹುಕಾಲದ ಬೇಡಿಕೆ ಈಡೇರಿದೆ: ಉಪ್ಪಿನಂಗಡಿ ಭಾಗದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕರುವೇಲುವಿನಲ್ಲಿ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಸ್ಥಾಪನೆಗೆ 15 ವರ್ಷಗಳಿಂದ ಬೇಡಿಕೆ ಇತ್ತು. ಜಾಗ ಮಂಜೂರಾತಿ ಆಗಲು ಹಣ ಪಾವತಿ ಆಗಿರಲಿಲ್ಲ. ಇಂಧನ ಸಚಿವ ಕೆ.ವಿ.ಜಾರ್ಜ್‌ ಅವರು ಸ್ಪಂದಿಸಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.