ADVERTISEMENT

ಮಂಗಳೂರು | ಕೃಷ್ಣ ನಗರದಲ್ಲಿ ಔಷಧ ಉಗ್ರಾಣ ನಿರ್ಮಾಣ: ಆರೋಗ್ಯಾಧಿಕಾರಿ ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 6:05 IST
Last Updated 5 ಫೆಬ್ರುವರಿ 2026, 6:05 IST
   

ಮಂಗಳೂರು: ನಗರದ ಮರಕಡ ಗ್ರಾಮ ಬೋಂದೆಲ್‌ ಕೃಷ್ಣನಗರದಲ್ಲಿ ಔಷಧ ಉಗ್ರಾಣ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ ತಿಳಿಸಿದರು.

ಇಲ್ಲಿನ 60 ಸೆಂಟ್ ಜಾಗವನ್ನು 2024ರಲ್ಲಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದ್ದು ₹ 25 ಲಕ್ಷ ವೆಚ್ಚದಲ್ಲಿ ಆವರಣ ಗೋಡೆಯನ್ನು ನಿರ್ಮಿಸುವ ಕಾಮಗಾರಿ ನಡೆಯಲಿದೆ ಎಂದು ಅವರು ವಿವರಿಸಿದರು.

ಔಷಧಿ ಸಂಗ್ರಹ ಸವಾಲಾಗಿ ಪರಿಣಮಿಸಿದೆ. ವೆನ್‌ಲಾಕ್ ಆಸ್ಪತ್ರೆಯಲ್ಲಿ ಇರುವ ಉಗ್ರಾಣ ಸಣ್ಣದು. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲು ಆಗುತ್ತಿಲ್ಲ. ಮಳೆಗಾಲದಲ್ಲಿ ಔಷಧಿ ಹಾಳಾಗದಂತೆ ಸಂಗ್ರಹಿಸುವುದೂ ಕಷ್ಟವಾಗುತ್ತಿದೆ. ಹೀಗಾಗಿ ಹೊಸ ಉಗ್ರಾಣ ನಿರ್ಮಿಸಲು ಚಿಂತಿಸಲಾಗಿದೆ. ಕೃಷ್ಣನಗರದ ಜಾಗವನ್ನು ಆರೋಗ್ಯಾಧಿಕಾರಿ ಕಚೇರಿಗೆ ಎಂದು ಮೀಸಲಿಡಲಾಗಿತ್ತು. ಆದರೆ ಪಡೀಲ್‌ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಕಷ್ಟು ಜಾಗ ಇರುವುದರಿಂದ ಕಚೇರಿ ಅಲ್ಲಿಗೆ ಸ್ಥಳಾಂತರವಾಗಲಿದೆ ಎಂದು ಅವರು ವಿವರಿಸಿದರು.

ADVERTISEMENT

ಪ್ರತಿಭಟನೆ ನಾಳೆ

ಕೃಷ್ಣನಗರದ ಜಾಗವನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿ ಫೆ. 6ರಂದು ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕ ಮೈದಾನ ಹೋರಾಟ ಸಮಿತಿ ಪ್ರತಿಭಟನೆ ನಡೆಸಲಿದೆ ಎಂದು ಕೃಷ್ಣನಗರದ ಸಾರ್ವಜನಿಕ ಮೈದಾನ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಲ್ಯಾನ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 60 ಸೆಂಟ್ ಜಾಗದಲ್ಲಿ 30 ವರ್ಷಗಳಿಂದ ಸ್ಥಳೀಯರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು ಇದನ್ನು ಆರೋಗ್ಯ ಇಲಾಖೆ ಬಳಸಿಕೊಂಡರೆ ಸುಮಾರು 600 ಮನೆಗಳ ಜನರ ಚಟುವಟಿಕೆಗೆ ಬೇರೆ ಜಾಗ ಇಲ್ಲದಂತಾಗುತ್ತದೆ ಎಂದರು.  ಉಮೇಶ್ ದಡ್ಡಲಕಾಡು, ಜಿ.ಅಬ್ದುಲ್ ಹಮೀದ್‌, ಸಂತೋಷ್ ಮತ್ತು ರಹಮಾನ್ ಖಾನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.