ADVERTISEMENT

ಮಂಗಳೂರು: KSOU ಪ್ರಾಯೋಗಿಕ ಪರೀಕ್ಷೆಗೆ ಜಿಲ್ಲೆಯಲ್ಲೇ ಅವಕಾಶ

ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 13:29 IST
Last Updated 24 ಜುಲೈ 2023, 13:29 IST
ಪ್ರೊ.ಶರಣಪ್ಪ ವಿ.ಹಲಸೆ
ಪ್ರೊ.ಶರಣಪ್ಪ ವಿ.ಹಲಸೆ   

ಮಂಗಳೂರು: ‘ಕೆಎಸ್‌ಒಯುವಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಆ 30ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ವಿಶ್ವವಿದ್ಯಾಲಯವು 34 ಪ್ರಾದೇಶಿಕ ಕೇಂದ್ರಗಳನ್ನು ಹಾಗೂ 140 ಕಲಿಕಾರ್ಥಿ ಸಹಾಯಕ ಕೇಂದ್ರಗಳನ್ನು ರಾಜ್ಯದಲ್ಲಿ ಹೊಂದಿದೆ. ಪ್ರತಿ ಜಿಲ್ಲೆಯಲ್ಲೂ ಪ್ರಾದೇಶಿಕ ಕೇಂದ್ರಗಳು ಇರುವುದರಿಂದ ವಿದ್ಯಾರ್ಥಿಗಳು ಈ ಸಾಲಿನಿಂದ ಸಂಪರ್ಕ ತರಗತಿ ಹಾಗೂ ಪ್ರಾಯೋಗಿಕ ಪರೀಕ್ಷೆಗಳಿಗೆ ಆಯಾ ಜಿಲ್ಲೆಯಲ್ಲೇ ಹಾಜರಾಗಬಹುದು’ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು)  ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.

ಕೆಎಸ್‌ಒಯು ಆಟೊರಿಕ್ಷಾ ಚಾಲಕರ ಮಕ್ಕಳಿಗೆ ಶುಲ್ಕದಲ್ಲಿ ಶೇ 25ರಷ್ಟು ರಿಯಾಯಿತಿ ನೀಡುತ್ತಿದೆ. ಬಿಪಿಎಲ್‌ ಕುಟುಂಬಗಳ ಹೆಣ್ಣು ಮಕ್ಕಳಿಗೆ ಹಾಗೂ ಮಾಜಿ ಸೈನಿಕರ ಮತ್ತು ಯೋಧರ ಮಕ್ಕಳಿಗೆ ಶುಲ್ಕದಲ್ಲಿ ಶೇ 15ರಷ್ಟು ರಿಯಾಯಿತಿ ಇದೆ. ಕೋವಿಡ್‌ನಿಂದ ತಂದೆ–ತಾಯಿಯನ್ನು ಕಳೆದುಕೊಂಡವರಿಗೆ ಹಾಗೂ ತೃತೀಯಲಿಂಗಿಗಳಿಗೆ ಪೂರ್ತಿ ಶುಲ್ಕ ವಿನಾಯಿತಿ ಇದೆ. ಸಾರಿಗೆ ಸಂಸ್ಥೆ ಉದ್ಯೋಗಿಗಳ ಮಕ್ಕಳಿಗೆ ಶೇ 25ರಷ್ಟು ಶುಲ್ಕ ವಿನಾಯಿತಿ ಇದೆ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕೆಎಸ್‌ಒಯು ಮಂಗಳೂರು ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯಲ್ಲಿ ನಗರದ ಕೆನರಾ ಕಾಲೇಜು, ಪುತ್ತೂರಿನ ಸೇಂಟ್‌ ಫಿಲೋಮಿನಾ ಕಾಲೇಜು, ಮೂಡುಬಿದಿರೆಯ ಆಳ್ವಾಸ್‌ ಕಾಲೇಜು, ಸುಬ್ರಹ್ಮಣ್ಯದ ಕೆಎಸ್‌ಎಸ್‌ ಕಾಲೇಜುಗಳಲ್ಲಿ ಕಲಿಕಾರ್ಥಿ ಸಹಾಯಕ ಕೇಂದ್ರಗಳಿವೆ’ 

ADVERTISEMENT

‘ಮಂಗಳೂರು ಪ್ರಾದೇಶಿಕ ಕೇಂದ್ರದಿಂದ ಕಳೆದ ಸಾಲಿನಲ್ಲಿ  ಜನವರಿ ಆವೃತ್ತಿಗೆ 675 ವಿದ್ಯಾರ್ಥಿಗಳು ಹಾಗೂ ಜುಲೈ ಆವೃತ್ತಿಗೆ 1392 ವಿದ್ಯಾರ್ಥಿಗಳು ಕೆಎಸ್‌ಒಯು ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದರು. ಜನವರಿ ಆವೃತ್ತಿಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಯು 8ಸಾವಿರದಿಂದ 18,600ಕ್ಕೆ ಹೆಚ್ಚಳವಾಗಿದೆ. ಜುಲೈ ಆವೃತ್ತಿಗೆ 45 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂಬ ಬನಿರೀಕ್ಷೆ ಇದೆ’ ಎಂದರು.

ಆನ್‌ಲೈನ್‌ ಕೋರ್ಸ್‌: ಈ ಸಾಲಿನಲ್ಲಿ ಆನ್‌ಲೈನ್‌ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. 10 ಆನ್‌ಲೈನ್‌ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಹಾಗೂ ಮೂರು ಆನ್‌ಲೈನ್‌ ಪದವಿ ಕೋರ್ಸ್‌ಗಳನ್ನು ಆರಂಭಿಸಲು ಮಂಜೂರಾತಿಗಾಗಿ ಯುಜಿಸಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಬಿ.ಎ, ಬಿ.ಎಸ್ಸಿ ಮತ್ತು ಬಿಸಿಎ ಮತ್ತು ಕನ್ನಡ ಎಂ.ಎ, ಇಂಗ್ಲಿಷ್‌ ಎಂ.ಎ,  ಗಣಿತ, ಕಂಪ್ಯೂಟರ್‌ ಸೈನ್ಸ್‌, ಇನ್ಫರ್ಮೇಷನ್‌ ಟೆಕ್ನಾಲಜಿ ಎಂಎಸ್ಸಿ ಸೇರಿದಂತೆ ಒಟ್ಟು 10 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿಸುವ ಪ್ರಸ್ತಾವ ಇದೆ’ ಎಂದು ಕುಲಪತಿ ಹೇಳಿದರು.

‘ಆನ್‌ಲೈನ್‌ ಮಾದರಿಯ ಎರಡು ಸೆಮಿಸ್ಟರ್‌ಗಳಿಗೆ ಅಗತ್ಯವಿರುವಷ್ಟು ಅಧ್ಯಯನ ಪಠ್ಯವನ್ನು ಸಿದ್ಧಪಡಿಸಲಾಗಿದೆ. ಮಂಜೂರಾತಿ ನೀಡುವ ಮುನ್ನ ವಿಶ್ವವಿದ್ಯಾಲಯದಲ್ಲಿ ಇದಕ್ಕೆ ಅಗತ್ಯ ಮೂಲಸೌಕರ್ಯ ಇದೆಯೇ ಎಂದು ಯುಜಿಸಿ ತಜ್ಞರ ತಂಡವು ಪರಿಶೀಲನೆ ನಡೆಸಲಿದೆ. ಮುಂದಿನ ತಿಂಗಳು ಮಂಜೂರಾತಿ ಸಿಗಬಹುದು ಎಂಬ ನಿರೀಕ್ಷೆ ನಮ್ಮದು. ಮಂಜೂರಾತಿ ಸಿಕ್ಕ ತಕ್ಷಣವೇ ಪ್ರವೇಶಾತಿಗಾಗಿ ಪ್ರತ್ಯೇಕ ಅಧಿಸೂಚನೆ ಹೊರಡಿಸಲಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.