ADVERTISEMENT

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ವ್ಯವಸ್ಥಾಪನಾ ಸಮಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:29 IST
Last Updated 22 ಮೇ 2025, 13:29 IST
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅಧ್ಯಕ್ಷತೆ ವಹಿಸಿದ್ದರು. 

ಕ್ಷೇತ್ರದ ವತಿಯಿಂದ ಭಕ್ತರಿಗೆ ಬೆಳಗ್ಗಿನ ಉಪಾಹಾರ ನೀಡುವ ಯೋಜನೆ ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿ ಸದಸ್ಯರು ಯೋಜನೆ ಆರಂಭಕ್ಕೆ ಸಹಮತ ಸೂಚಿಸಿದರು. ಶೀಘ್ರದಲ್ಲೇ ಬೆಳಗ್ಗಿನ ಉಪಾಹಾರ ಯೋಜನೆ ಆರಂಭಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ಕ್ಷೇತ್ರದಲ್ಲಿ ಆಶ್ಲೇಷ ಸೇವೆ ನಡೆಸಲು ಹೊಸ ಕಟ್ಟಡ ನಿರ್ಮಿಸಲು ಈ ಹಿಂದೆ ಒಬ್ಬ ದಾನಿ ಮುಂದೆ ಬಂದಿದ್ದರು. ಆದರೆ, ಕಟ್ಟಡ ಕಾಮಗಾರಿ ಆರಂಭಗೊಂಡಿರಲಿಲ್ಲ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಆಶ್ಲೇಷ ಸೇವೆ, ಪೂಜೆ ನಡೆಸುವ ಹೊಸ ಕಟ್ಟಡ ಕಾಮಗಾರಿಗೆ ಚಾಲನೆ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ಎಸ್ಎಸ್‌ಪಿಯು ಕಾಲೇಜಿನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಸೀಟುಗಳ ಅವಶ್ಯಕತೆ ಇದ್ದು, ಹೆಚ್ಚುವರಿ ವಿಭಾಗ ತೆರೆಯಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಈ ಬಗ್ಗೆ ಬೆಂಗಳೂರಿಗೆ ನಿಯೋಗ ತೆರಳಿ ಇಲಾಖೆಯಲ್ಲಿ ಅನುಮತಿಗಾಗಿ ಮನವಿ ಸಲ್ಲಿಸಿ ಈ ವರ್ಷದಿಂದಲೇ ಹೆಚ್ಚುವರಿ ವಿಭಾಗ ಆರಂಭಿಸುವ ಬಗ್ಗೆ ‌ತೀರ್ಮಾನಿಸಲಾಯಿತು. ದೇವಸ್ಥಾನದ ವತಿಯಿಂದ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಬಿ.ರಘು, ಅಶೋಕ್ ನೆಕ್ರಾಜೆ, ಮಹೇಶ್ ಕುಮಾರ್ ಕರಿಕ್ಕಳ, ಅಜಿತ್ ಕುಮಾರ್, ಸೌಮ್ಯಾ ಬಿ.ಕೆ., ಪ್ರವೀಣ ಪಿ., ಲೀಲಾ ಮನಮೋಹನ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.