ADVERTISEMENT

ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಚಾವಣಿ ಶಿಥಿಲ: ಆರಕ್ಷಕರ ಸೂರಿಗೆ ಟಾರ್ಪಲ್‌ ರಕ್ಷಣೆ

ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಕಟ್ಟಡದ ಚಾವಣಿ ಶಿಥಿಲ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 4:13 IST
Last Updated 7 ಜೂನ್ 2022, 4:13 IST
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಕಟ್ಟಡ
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಕಟ್ಟಡ   

ಸುಬ್ರಹ್ಮಣ್ಯ: ಜನರ ರಕ್ಷಣೆಗೆ ಪೊಲೀಸರು ಬೇಕು. ಆದರೆ, ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಠಾಣಾ ಕಟ್ಟಡದ ಹೆಂಚಿನ ಚಾವಣಿ ದುರಸ್ತಿಗೆ ಅನುದಾನವಿಲ್ಲದ ಕಾರಣ ಮಳೆನೀರು ಸೋರುವುದನ್ನು ತಡೆಯಲು ಟಾರ್ಪಲ್‌ ಹೊದಿಸಲಾಗಿದೆ.

ಸುಬ್ರಹ್ಮಣ್ಯ ಠಾಣೆಯ ಚಾವಣಿ ಶಿಥಿಲವಾಗಿ 3-4 ವರ್ಷಗಳು ಕಳೆದಿವೆ. ಹೆಂಚುಗಳ ಮಧ್ಯೆ ಅಲ್ಲಲ್ಲಿ ನೀರು ಸೋರುತ್ತಿದೆ. ಠಾಣೆಯಲ್ಲಿರುವ ಅಗತ್ಯ ದಾಖಲೆಗಳು ಒದ್ದೆಯಾಗುವ ಭಯವಿದೆ. ಆರೋಪಿಗಳನ್ನು ದಸ್ತಗಿರಿ ಮಾಡಿ ಕೂಡಿಹಾಕುವ ಕೊಠಡಿ ಯಲ್ಲಿಯೂ ನೀರು ತುಂಬುತ್ತಿದೆ. ಹೀಗಾಗಿ, ಮಳೆಯಿಂದ ರಕ್ಷಣೆ ಪಡೆಯಲು ತಾತ್ಕಾಲಿಕವಾಗಿ ಟಾರ್ಪಲ್‌ ಮೊರೆ ಹೋಗಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ದಿನಂಪ್ರತಿ ಸಾವಿರಾರು ಭಕ್ತರು, ಗಣ್ಯರು ಬರುತ್ತಾರೆ. ಆದರೆ, ಇಲ್ಲಿನ ಸಿಬ್ಬಂದಿಯ ಪರಿಸ್ಥಿತಿ ‘ದೇವರಿಗೆ ಪ್ರೀತಿ’ ಎಂಬಂತಿದೆ.

ADVERTISEMENT

‘ಗೃಹ ಸಚಿವ ಆರಗ ಜ್ಞಾನೇಂದ್ರ ಈಚೆಗೆ ಕುಕ್ಕೆಗೆ ಭೇಟಿ ನೀಡಿದ್ದ ಸಂದರ್ಭ, ‘ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಕಟ್ಟಡಕ್ಕೆ ₹ 1 ಕೋಟಿ ಮೀಸಲಿರಿಸಿದ್ದು, ಶೀಘ್ರವೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ’ ಎಂದು ತಿಳಿಸಿದ್ದರು.

ಆದರೆ, ಟೆಂಡರ್ ಕರೆದದ್ದಾಗಲಿ, ಅನುದಾನ ಬಿಡುಗಡೆ ಮಾಡಿದ್ದಾಗಲಿ ಗೊತ್ತಾಗಿಲ್ಲ. ಚಾವಣಿ ಬೀಳುವ ಮುಂಚೆ ಹೊಸ ಕಟ್ಟಡಕ್ಕೆ ಶಿಲಾನ್ಯಾಸ ನಡೆಯಲಿ’ ಎನ್ನುತ್ತಾರೆ ಸ್ಥಳೀಯರು.

‘2017ರಲ್ಲಿ ₹1.23 ಕೋಟಿ ಅನುದಾನವನ್ನು ಸುಬ್ರಹ್ಮಣ್ಯ ಠಾಣಾ ಕಟ್ಟಡಕ್ಕೆ ಕಾಯ್ದಿರಿಸಲಾಗಿತ್ತು. ಆದರೆ, ಅದು ಬಿಡುಗಡೆಗೊಂಡಾಗ 4 ವರ್ಷ ಕಳೆದಿತ್ತು. ಆ ಮೊತ್ತಕ್ಕೆ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿ, ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅದು ನನೆಗುದಿಗೆ ಬಿದ್ದಿದೆ’ ಎನ್ನುತ್ತದೆ ಇಲಾಖಾ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.