ADVERTISEMENT

ಕುಳಾಯಿ: ಶ್ರೀಕೃಷ್ಣ ಜನ್ಮಾಷ್ಠಮಿ– ಇಸ್ಕಾನ್‌ನಿಂದ ವಿಶೇಷ ಕಾರ್ಯಕ್ರಮ 18ರಿಂದ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 5:10 IST
Last Updated 17 ಆಗಸ್ಟ್ 2022, 5:10 IST

ಮಂಗಳೂರು: ‘ಇಸ್ಕಾನ್‌ಗೆ ಕುಳಾಯಿ ನೇತಾಜಿನಗರದ ಮೂಡುಬೆಟ್ಟುವಿನಲ್ಲಿ 1.5 ಎಕರೆಗಳಷ್ಟು ವಿಶಾಲ ಜಾಗ ಮಂಜೂರಾಗಿದೆ. ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಇದೇ 18ರಿಂದ ಮೂರುದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಈ ಜಾಗದಲ್ಲೇ ಏರ್ಪಡಿಸಲಾಗುತ್ತಿದೆ’ ಎಂದು ಸಂಸ್ಥೆಯ ಶ್ರೀವಾಸಾಂಗನ್‌ ಕೀರ್ತನದಾಸ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಇದೇ 18, 19 ಹಾಗೂ 20ರಂದು ನಿತ್ಯವೂ ಬೆಳಿಗ್ಗೆ 10ರಿಂದ ಮಕ್ಕಳಿಗಾಗಿ ಕೃಷ್ಣ ವೇಷ ಮತ್ತು ಚಿತ್ರಕಲೆ, ಶ್ಲೋಕ ಪಠಣೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 18ರಂದು ಸಂಜೆ 6ರಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸಂಜೆ ವಿಶೇಷ ಆರತಿ, ಕೀರ್ತನೆ, ಅಭಿಷೇಕ, ಭಾಗವತ ಪ್ರವಚನ, ಮಹಾ ಮಂಗಳಾರತಿಗಳು ನಡೆಯಲಿವೆ. ಇದೇ 19ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಕೀರ್ತನೆ, ಮಹಾ ಅಭಿಷೇಕ, ಭಾಗವತ ಪ್ರವಚನ, ಮಹಾ ಮಂಗಳಾರತಿಗಳು ನಡೆಯಲಿವೆ. 20ರಂದು ಶ್ರೀಲ ಪ್ರಭುಪಾದ ವ್ಯಾಸಪೂಜೆ ನಡೆಯಲಿದೆ’ ಎಂದರು.

ಸಚ್ಚಿದಾನಂದ ಅದ್ವೈತದಾಸ, ‘ಇಸ್ಕಾನ್‌ನಿಂದ ಭಗವದ್ಗೀತೆ ಅಧ್ಯಯನಕ್ಕಾಗಿ ತುಳು, ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ವಿಶೇಷ ಆನ್‌ಲೈನ್‌ ಕೋರ್ಸ್‌ (ಕೊಂಡಿ: https://iskconmangaluru.com/understandgita/ ಅಥವಾ ವಾಟ್ಸ್‌ ಆ್ಯಪ್‌ ಸಂಪರ್ಕ: 8921447472) ನಡೆಸಲಾಗುತ್ತಿದೆ. ಜಗತ್ತಿನಾದ್ಯಂತ 7 ಲಕ್ಷಕ್ಕೂ ಅಧಿಕ ಮಂದಿ ಸಂಪೂರ್ಣ ಉಚಿತವಾಗಿರುವ ಈ ಕೋರ್ಸ್‌ನ ಪ್ರಯೋಜನ ಪಡೆದಿದ್ದಾರೆ’ ಎಂದರು.

ADVERTISEMENT

ಕುಳಾಯಿಯಲ್ಲಿ ಇಸ್ಕಾನ್‌ನ ನೂತನ ಶ್ರೀಕೃಷ್ಣ ದೇವಸ್ಥಾನವನ್ನು ₹ 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 5 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಈ ಮಂದಿರದಲ್ಲಿ ಅನ್ನದಾನ ಸಭಾಂಗಣ, ಆಡಿಯೊ ವಿಷುವಲ್‌ ಪ್ರದರ್ಶನಕ್ಕೆ ಪ್ರತ್ಯೇಕ ಸಭಾಂಗಣ, ಪ್ರದರ್ಶನ ಸಭಾಂಗಣ,ಪ್ರಸಾದ ವಿತರಣೆಗೆ ಹಬೆ ಆಧರಿತ ಅಡುಗೆಮನೆ, ಗೋವಿಂದ ರೆಸ್ಟೊರಂಟ್‌, ಅತಿಥಿಗೃಹ, ಕಲ್ಯಾಣಿ, ಗೋಶಾಲೆ, ಬ್ರಹ್ಮಚಾರಿ ಆಶ್ರಮಗಳು ಇರಲಿವೆ. ಇಲ್ಲಿ ತುಳಸಿ ಉದ್ಯಾನ ಹಾಗೂ ಹೂದೋಟಗಳು ನಿರ್ಮಾಣವಾಗಲಿವೆ‘ ಎಂದರು.

ಇಸ್ಕಾನ್‌ನ ಗುರುರಾಜ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.