ಮಂಗಳೂರು: ಫಲ್ಗುಣಿ ನದಿ ಉಕ್ಕಿ ಹರಿದ ಪರಿಣಾಮ ನಗರದ ಕೂಳೂರು, ಬಂಗ್ರಕೂಳೂರು, ಪಂಜಿಮೊಗರು, ಪಡುಕೋಡಿ ಕೆಂಜಾರು, ಉಳಾಯಿಬೆಟ್ಟು ಪ್ರದೇಶಗಳಲ್ಲಿ ನೂರಾರು ಮನೆಗಳು ಜಲಾವೃತವಾಗಿವೆ. ಕುಳೂರು ಪರಿಸರದಲ್ಲಿ ಮುಂಜಾನೆ 40ಕ್ಕೂ ಹೆಚ್ಚು ಮನೆಗಳ ಸುತ್ತ ನೀರು ಆವರಿಸಿತ್ತು.
ನೀರಿನ ಮಟ್ಟ ಹೆಚ್ಚುತ್ತಿದ್ದಂತೆಯೇ ಈ ಪ್ರದೇಶದ ನಿವಾಸಿಗಳು ಸಮೀಪದ ಎತ್ತರ ಪ್ರದೇಶದ ಮನೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಸಾಗಿಸಿದರು. ಇನ್ನು ಕೆಲವರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದರು.
ಈ ಪ್ರದೇಶದ ನಿವಾಸಿಗಳ ಸಲುವಾಗಿ ಕೂಳೂರು ಚರ್ಚ್ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಮಹಾನಗರ ಪಾಲಿಕೆಯು ಆರಂಭಿಸಿದೆ.
‘ಕುಳೂರು ಚರ್ಚ್ ಶಾಲೆಯ ಕಾಳಜಿ ಕೇಂದ್ರದಲ್ಲಿ 43 ಮಕ್ಕಳು, 95 ಪುರುಷರು ಹಾಗೂ 59 ಮಹಿಳೆಯರು ಸೇರಿ ಒಟ್ಟು 197 ಮಂದಿ ಆಶ್ರಯ ಪಡೆದಿದ್ದಾರೆ. ಅವರಿಗೆ ಟೂತ್‌ಪೇಸ್ಟ್, ಬೆಡ್‌ಶೀಟ್, ಚಾಪೆ, ಸೊಳ್ಳೆಬತ್ತಿ ಒದಗಿಸಿದ್ದೇವೆ. ಕುಡಿಯುವ ನೀರು, ಉಪಾಹಾರ, ಹಾಗೂ ಊಟದ ವ್ಯವಸ್ಥೆ ಮಾಡಿದ್ದೇವೆ. ಸಾಕಷ್ಟು ಶೌಚಾಲಯಗಳ ವ್ಯವಸ್ಥೆಯನ್ನೂ ಕಲ್ಪಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತ ಆನಂದ ಸಿ.ಎಲ್. ತಿಳಿಸಿದರು.
‘ಕಾಳಜಿ ಕೇಂದ್ರದಲ್ಲಿ ಮಹಿಳೆಯರು ಹಾಗೂ ಪುರುಷರು ಉಳಿದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಭದ್ರತೆ ಒದಗಿಸಲಾಗಿದೆ. ವೈದ್ಯರನ್ನು, ವೈದ್ಯಕೀಯ ಸಿಬ್ಬಂದಿಯನ್ನು ಹಾಗೂ ಪೌರಕಾರ್ಮಿಕರ ನಿಯೋಜಿಸಿದ್ದೇವೆ. ತುರ್ತು ವೈದ್ಯಕೀಯ ನೆರವು ಒದಗಿಸಲು ಆಂಬುಲೆನ್ಸ್ ಕೂಡಾ ಸಜ್ಜಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.