ಮಂಗಳೂರು: ಡಿ.ಪಿ. ಚಿತ್ರಾಪುರದ ಪ್ರಕಾಶ ರಾಥೋಡ್ ಭಾನುವಾರ ನಡೆದ ಲೋಕಯ್ಯ ಶೆಟ್ಟಿ ಸ್ಮಾರಕ ಪುರುಷರ ಜಿಲ್ಲಾ ಮಟ್ಟದ ಕುಸ್ತಿ ಟೂರ್ನಿಯಲ್ಲಿ ‘ಕರಾವಳಿ ಕುಮಾರ’ ಪ್ರಶಸ್ತಿ ಗೆದ್ದುಕೊಂಡರು.
ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕುಸ್ತಿ ಸಂಸ್ಥೆಯ ಸಹಯೋಗದಲ್ಲಿ ಎಂ.ಲೋಕಯ್ಯ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಟೂರ್ನಿಯ 65 ಕೆಜಿ ವಿಭಾಗದಲ್ಲಿ ಚಾಂಪಿಯನ್ ಆಗುವುದರೊಂದಿಗೆ ಅವರಿಗೆ ಈ ಬಹುಮಾನ ಒಲಿಯಿತು. ವಿ.ಬಿ. ಬೆಂಗ್ರೆಯ ಮಂಜುನಾಥ ರನ್ನರ್ ಅಪ್ ಆದರೆ ಸುರೇಶ್ ಮೂರನೇ ಸ್ಥಾನ ಗಳಿಸಿದರು.
‘ಕರಾವಳಿ ಕೇಸರಿ’ ಪ್ರಶಸ್ತಿಗಾಗಿ 74 ಕೆಜಿ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ವಿ.ಬಿ.ಬೆಂಗ್ರೆಯ ಧನುಷ್ ಖಾರ್ವಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರು. ಉಳಿದ ಎರಡೂ ಪ್ರಶಸ್ತಿಗಳು ವಿ.ಬಿ.ಬೆಂಗ್ರೆಗೆ ಲಭಿಸಿದವು. ಅನನ್ಯ ಅಮೀನ್ ದ್ವಿತೀಯ ಸ್ಥಾನ ಗಳಿಸಿದರೆ ಆಕಾಶ್ ತೃತೀಯ ಬಹುಮಾನ ಗೆದ್ದುಕೊಂಡರು.
ಡಿ.ಪಿ.ಚಿತ್ರಾಪುರದ ಕುಮಾರ್ ಮತ್ತು ವಿ.ಬಿ ಬೆಂಗ್ರೆಯ ಅಜಿತ್ ಕ್ರಮವಾಗಿ 46 ಹಾಗೂ 57 ಕೆಜಿ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು. 46 ಕೆಜಿ ವಿಭಾಗದ ರನ್ನರ್ ಅಪ್ ಸ್ಥಾನ ವಿ.ಬಿ. ಬೆಂಗ್ರೆಯ ರೋಷನ್ ಪಾಲಾದರೆ ಅದೇ ಕ್ಲಬ್‌ನ ಸಮೀರ್ ಮೂರನೇ ಸ್ಥಾನ ಗಳಿಸಿದರು. 57 ಕೆಜಿ ವಿಭಾಗದಲ್ಲಿ ದಡ್ಡಲಕಾರು ಡಿ.ವಿ.ಎಚ್.ವಿಯ ರಂಗನಾಥ್ ಮತ್ತು ಡಿ.ಪಿ.ಚಿತ್ರಾಪುರದ ಧರ್ಮರಾಜ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಗೆದ್ದುಕೊಂಡರು.
74+ ಕೆಜಿ ವಿಭಾಗದಲ್ಲಿ ವಿ.ಬಿ.ಬೆಂಗ್ರೆಯ ಶಾನ್ ಅಮೀನ್ ಚಾಂಪಿಯನ್ ಆದರು. ದಡ್ಡಲಕಾಡು ಡಿ.ವಿ.ಎಚ್.ವಿಯ ರಕ್ಷಿತ್ ಮತ್ತು ವಿ.ಬಿ.ಬೆಂಗ್ರೆಯ ಕಿರಣ್ ಕುಮಾರ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮುಖಂಡರಾದ ಸತೀಶ್ ಪೈ, ವಸಂತ್ ಕರಂದೂರ್, ಶೇಖರ್ ಪೂಜಾರಿ, ಗಣೇಶ್ ಶೆಟ್ಟಿ, ಅಶೋಕ್ ಮೊಯ್ಲಿ, ಸುರೇಶ್‌ಚಂದ್ರ ಶೆಟ್ಟಿ, ಸತೀಶ್‌ಚಂದ್ರ ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.