ADVERTISEMENT

ಕುಪ್ಪೆಪದವು ದುರ್ಗೇಶ್ವರೀ ದೇವಿ ದೇವಸ್ಥಾನ: 7ರಿಂದ ಬ್ರಹ್ಮಕಲಶಾಭಿಷೇಕ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:21 IST
Last Updated 4 ಫೆಬ್ರುವರಿ 2023, 5:21 IST
ಕುಪ್ಪೆಪದವು ದುರ್ಗೇಶ್ವರಿ ದೇವಿ ದೇವಸ್ಥಾನ
ಕುಪ್ಪೆಪದವು ದುರ್ಗೇಶ್ವರಿ ದೇವಿ ದೇವಸ್ಥಾನ   

ಬಜಪೆ: ಮಂಗಳೂರು ತಾಲ್ಲೂಕಿನ ಕುಪ್ಪೆಪದವು ಪೇಟೆಯ ಹೃದಯಭಾಗದಲ್ಲಿ ನೆಲೆಸಿರುವ ವಾತ್ಸಲ್ಯಮಯಿ ದುರ್ಗೇಶ್ವರಿ ದೇವಿ ದೇವಸ್ಥಾನದಲ್ಲಿ ‌ಫೆ.7ರಿಂದ 12ರ ವರೆಗೆ ಎಡಪದವು ರಾಧಾಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿದೆ.

ಕುಪ್ಪೆಪದವು ದುರ್ಗೇಶ್ವರಿಯ ಸಾನ್ನಿಧ್ಯ ಇರುವ ಬಗ್ಗೆ ದೈವಜ್ಞರ ಚಿಂತನಾ ಪ್ರಶ್ನೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಪೇಜಾವರದ ದಿ. ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಅಂದು ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರಿಂದ ಶಿಲಾನ್ಯಾಸ ನೆರವೇರಿತ್ತು. ನಂತರ ದೇವಸ್ಥಾನ ನಿರ್ಮಾಣವಾಗಿ 1973-74ರಲ್ಲಿ ದೇವಿಯ ಪ್ರತಿಷ್ಠೆ ನಡೆದು ಬ್ರಹ್ಮಕಲಶೋತ್ಸವ ನಡೆದ ಬಗ್ಗೆ ನೆನಪು ಮಾಡುತ್ತಾರೆ ಹಾಲಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರಾಮಚಂದ್ರ ಸಾಲ್ಯಾನ್ ತಾಳಿಪಾಡಿ.

ಅಂದು ನಿರ್ಮಾಣವಾಗಿದ್ದ ದೇವಾಲಯ ಜೀರ್ಣಾವಸ್ಥೆ ತಲುಪಿದ್ದ ಕಾರಣ ಪಂಜ ಭಾಸ್ಕರ ಭಟ್ ಅವರ ಸೂಚನೆಯ ಅನ್ವಯ ಸೋಲೂರು ಆರ್ಯ-ಈಡಿಗ ಮಹಾಸಂಸ್ಥಾನ ಮಠದ ವಿಖ್ಯಾತಾನಂದ ಸ್ವಾಮೀಜಿ ಅವರ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತರು ತೀರ್ಮಾನಿಸಿದಂತೆ ತೀರ್ಥ ಮಂಟಪ ಮತ್ತು ನೂತನ ಶಿಲಾಮಯ ಗರ್ಭಗೃಹ, ಗಣಪತಿ ಗುಡಿ, ಕೊಡಮಣಿತ್ತಾಯ ದೈವಸ್ಥಾನ ಮತ್ತು ನಾಗಸನ್ನಿಧಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸುಂದರವಾದ ದೇವಳದಲ್ಲಿ ಮಾತೆ ದುರ್ಗೆಯ ಪುನಃ ಪ್ರತಿಷ್ಠೆಗೆ ದಿನಗಣನೆ ಪ್ರಾರಂಭವಾಗಿದೆ. ದುರ್ಗೇಶ್ವರಿಯ ಇಚ್ಛೆಯಂತೆ ಭಕ್ತರ ಸಹಕಾರದಿಂದ ಸುಂದರವಾದ ಶಿಲಾಮಯ ನೂತನ ದೇವಾಲಯ ನಿರ್ಮಾಣವಾಗಿದೆ ಎನ್ನುತ್ತಾರೆ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ಕುಮಾರ್ ಅಗರಿ.

ADVERTISEMENT

ಭರದ ಸಿದ್ಧತೆ: ಬ್ರಹ್ಮಕಲಶೋತ್ಸವಕ್ಕೆ ಸರ್ವರೀತಿಯ ಸಿದ್ಧತೆಗಳು ನಡೆಯುತ್ತಿವೆ. 17 ಉಪಸಮಿತಿಗಳು ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 6 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಿವೆ. ಸುಸಜ್ಜಿತ ಪಾಕಶಾಲೆ, ಉಗ್ರಾಣ, ಸಭಾ ವೇದಿಕೆ, ಅನ್ನಛತ್ರದ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಊರ-ಪರವೂರ ಭಕ್ತರ ಸಹಕಾರದಿಂದ ಗ್ರಾಮೀಣ ಪ್ರದೇಶವಾದ ಕುಪ್ಪೆಪದವಿನಲ್ಲಿ ದುರ್ಗೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಪೂರ್ಣಗೊಂಡಿವೆ. ಶಿಲಾಮಯ ನೂತನ ದೇಗುಲದಲ್ಲಿ ಪುನಃ ಪ್ರತಿಷ್ಠೆ ಸಹಿತ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ ಫೆ.7ರಿಂದ ಪ್ರಾರಂಭವಾಗಲಿವೆ.

ಅಜಿತ್ ಕುಮಾರ್ ಜೈನ್ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ

ದುರ್ಗೇಶ್ವರಿ ದೇವಿ, ಮಹಾಗಣಪತಿ ದೇವರು, ನಾಗದೇವರು ಮತ್ತು ಕೊಡಮಣಿತ್ತಾಯ ದೈವದ ನೂತನ ಬಿಂಬ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುವ 6 ದಿನಗಳ ಕಾಲ ಭಕ್ತರ ಆತಿಥ್ಯಕ್ಕೆ ನಮ್ಮ ಸಮಿತಿ ಸರ್ವ ರೀತಿಯಿಂದ ತಯಾರಿ ನಡೆಸಿದೆ.

ಜಗದೀಶ್ ಕುಲಾಲ್ ಪಾಕಜೆ, ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.