ADVERTISEMENT

ಊರು ತಲುಪಿದ ಕುವೈತ್‌ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:38 IST
Last Updated 7 ಆಗಸ್ಟ್ 2019, 19:38 IST

ಮಂಗಳೂರು: ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಕರಾವಳಿಯ ಸಂತ್ರಸ್ತ ಕಾರ್ಮಿಕರಲ್ಲಿ ಕೊನೆಯ ತಂಡದಲ್ಲಿ ಹಿಂದಿರುಗಿದ್ದ ಎಂಟು ಮಂದಿ ಬುಧವಾರ ನಸುಕಿನ ಜಾವ ತವರು ಸೇರಿದ್ದಾರೆ.

ಭಾನುವಾರ ರಾತ್ರಿ ಕುವೈತ್‌ನಿಂದ ವಿಮಾನದಲ್ಲಿ ಹೊರಟ ಎಂಟು ಮಂದಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ಬಸ್‌ನಲ್ಲಿ ಮಂಗಳೂರಿನತ್ತ ಹೊರಟಿದ್ದರು. ಮಂಗಳವಾರ ಬೆಳಿಗ್ಗೆ ಅವರಿದ್ದ ಬಸ್‌ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಘಾಟಿಯಲ್ಲಿ ಪ್ರವಾಹದ ನಡುವೆ ಸಿಲುಕಿತ್ತು.

ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9.30ರವರೆಗೂ ಘಾಟಿಯ ನಡುವೆ ಸಿಲುಕಿದ್ದರು. ರಾತ್ರಿ 9.30ಕ್ಕೆ ಪ್ರವಾಹ ಮಟ್ಟ ತಗ್ಗಿದ ಬಳಿಕ ಬಸ್‌ ಅಲ್ಲಿಂದ ಹೊರಟಿತು. ಬುಧವಾರ ನಸುಕಿನ ಜಾವ 1.30ರ ಸುಮಾರಿಗೆ ಮಿಲಾಗ್ರಿಸ್‌ ಬಳಿ ಬಂದು ಬಸ್‌ನಿಂದ ಇಳಿದರು.

ADVERTISEMENT

ಎಂಟು ಮಂದಿ ಬರುತ್ತಿರುವ ಸುದ್ದಿ ತಿಳಿದ ಅವರ ಕುಟುಂಬದ ಸದಸ್ಯರು ಮಿಲಾಗ್ರಿಸ್‌ ಬಳಿ ಬಂದು ಕಾದಿದ್ದರು. ಬಸ್‌ ಇಳಿಯುತ್ತಿದ್ದಂತೆ ಕುಟುಂಬದ ಸದಸ್ಯರನ್ನು ತಬ್ಬಿಕೊಂಡ ಸಂತ್ರಸ್ತ ಕಾರ್ಮಿಕರು ಕಣ್ಣೀರಾದರು. ನಂತರ ತವರು ಸೇರಿದ ಸಂಭ್ರಮದಲ್ಲಿ ಮನೆಯತ್ತ ತೆರಳಿದರು.

‘ಮುಂಬೈನಿಂದ ಮಂಗಳೂರಿಗೆ ಮಂಗಳವಾರ ಬಸ್‌ನಲ್ಲಿ ಬರುತ್ತಿದೆವು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಶಿರಸಿ ಘಾಟಿಯ ಕೊನೆಯ ತಿರುವಿನ ಬಳಿ ಪ್ರವಾಹ ಇದ್ದ ಕಾರಣ ಬಸ್‌ ಮುಂದಕ್ಕೆ ಸಾಗಲು ಆಗದ ಸ್ಥಿತಿ ನಿರ್ಮಾಣವಾಯಿತು. ಇಡೀ ದಿನ ಹಸಿವಿನಿಂದ ಬಳಲಿದೆವು. ಸಂಜೆ ಸ್ನೇಹಿತನೊಬ್ಬ ತಂದುಕೊಟ್ಟ ಆಹಾರದಿಂದ ಹಸಿವು ನೀಗಿಸಿಕೊಂಡೆವು. ರಾತ್ರಿ 9:30ರ ಸುಮಾರಿಗೆ ಪ್ರವಾಹ ತಗ್ಗಿತು. ಬಳಿಕ ಬಸ್ ಪ್ರಯಾಣ ಮುಂದುವರಿಸಿತು. ಮಂಗಳೂರು ತಲುಪಿದ ತಕ್ಷಣ ದೊಡ್ಡ ಗಂಡಾತರದಿಂದ ಬಿಡುಗಡೆಯಾಗಿ ಬಂದ ಅನುಭವವಾಯಿತು’ ಎಂದು ಕುವೈತ್‌ನಿಂದ ಹಿಂದಿರುಗಿದ ಸಂತ್ರಸ್ತ ಕಾರ್ಮಿಕ ಅಝೀಝ್ ಅಬ್ದುಲ್ ಬೋಳಾಯಿ ಪ್ರತಿಕ್ರಿಯಿಸಿದರು.

ಹಣ ವಾಪಸ್‌ಗೆ ಮನವಿ: ‘ಉದ್ಯೋಗ ಸಿಗುವ ಭರವಸೆಯಿಂದ ಕುವೈತ್‌ಗೆ ಹೋಗಿ ನರಕಯಾತನೆ ಅನುಭವಿಸಿದೆವು. ಉದ್ಯೋಗ ನೀಡುವುದಾಗಿ ಕರೆದೊಯ್ದಿದ್ದ ಏಜೆನ್ಸಿಯು ನಮಗೆ ಅನ್ಯಾಯ ಮಾಡಿದೆ. ಏಜೆನ್ಸಿಗೆ ನಾವು ತಲಾ ₹ 60,000 ಪಾವತಿಸಿದ್ದೇವೆ. ಹಲವರು ಸಾಲ ಮಾಡಿ ಹಣ ಪಾವತಿಸಿದ್ದೆವು. ಏಳು ತಿಂಗಳಿನಿಂದ ಒಂದು ರೂಪಾಯಿ ಕೂಡ ದುಡಿಮೆ ಮಾಡಲು ಆಗಿಲ್ಲ. ನಾವು ಪಾವತಿಸಿದ ಹಣವನ್ನು ಏಜೆನ್ಸಿಯಿಂದ ವಾಪಸ್ ಕೊಡಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರಲ್ಲಿ ಮನವಿ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.