ಮಂಗಳೂರು: ರಾಜ್ಯದಲ್ಲೇ ಅತಿ ಹೆಚ್ಚು ಸಮಗ್ರ ಜಿಲ್ಲಾ ಆಂತರಿಕ ಉತ್ಪನ್ನ ಹೊಂದಿರುವ (ಜಿಡಿಡಿಪಿ) ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ (₹1,25,140 ಕೋಟಿ) ಎರಡನೇ ಸ್ಥಾನದಲ್ಲಿದೆ. ತೆರಿಗೆ ಪಾಲಿನಲ್ಲೂ ಜಿಲ್ಲೆಗೆ ಎರಡನೇ ಸ್ಥಾನ.ಇಷ್ಟಾಗಿಯೂ ಜಿಲ್ಲೆಯ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳು ಅನುದಾನದ ಕೊರತೆಯಿಂದ ತೆವಳುತ್ತಾ ಸಾಗುತ್ತಿವೆ.
ಕೊಯಿಲ ಪಶುವೈದ್ಯಕೀಯ ಕಾಲೇಜು, ಪಡೀಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಕುಳಾಯಿ ಬಂದರು.... ಜಿಲ್ಲೆಯ ಅಪೂರ್ಣ ಯೋಜನೆಗಳಿಗೆ ಇವು ಕೆಲವು ಉದಾಹರಣೆಗಳು. ಕಡಲ್ಕೊರೆತ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಕೊರತೆ, ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ, ಗ್ರಾಮೀಣ ಮೂಲಸೌಕರ್ಯ ಕೊರತೆಗಳನ್ನು ನೀಗಿಸಲು ಜಿಲ್ಲೆಯ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ತಿಂಗಳು ಮಂಡಿಸಲಿರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅನುದಾನವನ್ನು ನಿರೀಕ್ಷಿಸುತ್ತಿದ್ದಾರೆ.
ಕಡಬ ತಾಲ್ಲೂಕಿನ ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪಿಸುವ ಘೋಷಣೆಯಾಗಿದ್ದು 2012–13ನೇ ಸಾಲಿನಲ್ಲಿ. 2016ರಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು. ಇನ್ನೂ ಈ ಕಾಲೇಜು ಆರಂಭವಾಗಿಲ್ಲ. ಈ ಯೋಜನೆಗೆ ಮೊದಲ ಹಂತದಲ್ಲಿ ₹ 135 ಕೋಟಿ ಹಣ ಬಿಡುಗಡೆಯಾಗಿದ್ದು, ಪಶುವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಟ್ಟಡಗಳು ನಿರ್ಮಾಣವಾಗಿವೆ. ಆದರೆ ಇದಕ್ಕೆ ಪೂರಕ ಮೂಲ ಸೌಕರ್ಯ ಕಲ್ಪಿಸಿ ತರಗತಿ ಆರಂಭಿಸಲು ಎರಡನೇ ಹಂತದಲ್ಲಿ ₹ 215 ಕೋಟಿ ಅನುದಾನದ ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು.
‘ಅನಗತ್ಯ ವೆಚ್ಚವನ್ನು ತಗ್ಗಿಸಿ ಬಳಿಕ ₹ 166 ಕೋಟಿ ಅನುದಾನವನ್ನಾದರೂ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ವಿವಿಧ ಬಗೆಯ ಪ್ರಾಣಿಗಳ ಫಾರ್ಮ್‌ಗಳು, ಸಿಬ್ಬಂದಿಯ ವಸತಿ ಗೃಹಗಳ ನಿರ್ಮಾಣ, ಪೀಠೋಪಕರಣ ಮೊದಲಾದ ಸೌಕರ್ಯಗಳನ್ನು ಇನ್ನಷ್ಟೇ ಕಲ್ಪಿಸ ಬೇಕಿದೆ. ಈಗ ನಿರ್ಮಾಣವಾಗಿರುವ ಮೂಲಸೌಕರ್ಯವನ್ನು ಬಳಸಿ ಕಾಲೇಜು ಶುರು ಮಾಡಲು ಇನ್ನೂ ಕನಿಷ್ಠ ₹ 23 ಕೋಟಿ ಅನುದಾನವಾದರೂ ಬೇಕು ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ.
ಪಡೀಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕಚೇರಿ ಸಂಕೀರ್ಣಕ್ಕೆ ಸರ್ಕಾರ ಭವ್ಯ ಯೋಜನೆಯನ್ನೇನೋ ರೂಪಿಸಿದೆ. ಆದರೆ, ಅದರ ಅನುಷ್ಠಾನ ಮಾತ್ರ ಆಮೆಗತಿಯಲ್ಲಿದೆ. 2015ರಲ್ಲೇ ಈ ಕಚೇರಿ ಸಂಕೀರ್ಣದ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ₹ 65 ಕೋಟಿಯ ಕ್ರಿಯಾಯೋಜನೆ ಸಿದ್ಧಪಡಿಸಿತ್ತು. ಯೋಜನಾ ವೆಚ್ಚವನ್ನು ₹ 41ಕೋಟಿಗೆ ಪರಿಷ್ಕರಿಸಿದ ಸರ್ಕಾರ ಕಾಮಗಾರಿಗೆ 2017ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆರಂಭದಲ್ಲಿ ಎದುರಾದ ಕೆಲ ಕಾನೂನು ತೊಡಕು ನಿವಾರಿಸಿ, ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಅನುವು ಮಾಡಿಕೊಟ್ಟಿದ್ದು 2018ರ ಮಾರ್ಚ್‌ನಲ್ಲಿ. ಈ ಭವ್ಯ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸದ್ಯಕ್ಕೆ ಇದರ ಒಂದು ಅಂತಸ್ತಿನ ಕಾಮಗಾರಿಯನ್ನು ಪೂರ್ಣಗೊಳಿಸಿ, ಅಲ್ಲಿಗೆ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಈ ಕಟ್ಟಡ ಸಂಕೀರ್ಣದ ಎಲ್ಲ ಕಾಮಗಾರಿ ಪೂರ್ಣಗೊಳಿಸಿ, ಪೂರಕ ಸೌಕರ್ಯ ಕಲ್ಪಿಸಲು ₹ 32 ಕೋಟಿಗಳಷ್ಟು ಹೆಚ್ಚುವರಿ ಅನುದಾನದ ಅಗತ್ಯವಿದೆ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.
ತ್ರಿಶಂಕು ಸ್ಥಿತಿಯಲ್ಲಿ ಕುಳಾಯಿ ಬಂದರು: ಕುಳಾಯಿಯಲ್ಲಿ ನಾಡದೋಣಿ ಮೀನುಗಾರಿಕೆಗೆ ಆದ್ಯತೆ ಸಿಗುವಂತೆ ಸರ್ವಋತು ಬಂದರು ನಿರ್ಮಿಸಬೇಕೆಂಬುದು ದಶಕಗಳ ಬೇಡಿಕೆ. ನವಮಂಗಳೂರು ಬಂದರು ಪ್ರಾಧಿಕಾರದ ಸಹಕಾರದಲ್ಲಿ ₹ 196.51 ಕೋಟಿ ವೆಚ್ಚದ ಕಾಮಗಾರಿ ಕಳೆದ ವರ್ಷ ಶುರುವಾಗಿತ್ತು. ಈ ಬಂದರಿನ ವಿನ್ಯಾಸವನ್ನು ಸ್ಥಳೀಯ ಮೀನುಗಾರರು ಒಪ್ಪದ ಕಾರಣ ಆ ಕಾಮಗಾರಿಯೂ ಅರ್ಧದಲ್ಲೇ ಸ್ಥಗಿತಗೊಂಡಿದೆ.
ಕುಳಾಯಿ ಬಂದರಿನ ಉತ್ತರದಲ್ಲಿ 831 ಮೀ ಉದ್ದದ ಹಾಗೂ ದಕ್ಷಿಣದಲ್ಲಿ 262 ಮೀ ಉದ್ದದ ಬ್ರೇಕ್ ವಾಟರ್ ನಿರ್ಮಿಸಲು ನಿರ್ಧರಿಸಲಾಗಿತ್ತು. ಕುಳಾಯಿ ಪ್ರದೇಶದಲ್ಲಿ ಮೇ–ಸೆಪ್ಟೆಂಬರ್‌ವರೆಗೆ ಕಿನಾರೆಯಿಂದ ಸುಮಾರು 600– 800 ಮಿ ದೂರದವರೆಗೂ ಸಮುದ್ರದಲ್ಲಿ ಅಲೆಗಳ ಅಬ್ಬರ ಇರುತ್ತದೆ. ಈಗ ಪ್ರಸ್ತಾಪಿಸಿದಷ್ಟು ಉದ್ದದ ಬ್ರೇಕ್ ವಾಟರ್ ಅಲೆಗಳ ಆರ್ಭಟ ತಡೆಯಲು ಸಾಕಾಗದು. ಉತ್ತರದ ಬ್ರೇಕ್ ವಾಟರ್‌ನ ಉದ್ದವನ್ನು 1,081 ಮೀಟರ್‌ಗೆ ಹಾಗೂ ದಕ್ಷಿಣದ ಬ್ರೇಕ್ ವಾಟರ್ ಉದ್ದವನ್ನು 981 ಮೀಟರ್‌ಗೆ ವಿಸ್ತರಿಸಬೇಕು ಎಂಬುದು ಸ್ಥಳೀಯ ಮೀನುಗಾರರ ಬೇಡಿಕೆ. ಅದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಭರಿಸಲು ಎನ್‌ಎಂಪಿಎ ಸಿದ್ಧವಿಲ್ಲ. ಈ ಕಾಮಗಾರಿ ಪೂರ್ಣಗೊಳಿಸುವುದಕ್ಕೂ ಸರ್ಕಾರದ ಅನುದಾನದ ಅಗತ್ಯವಿದೆ.
ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ ಕೇಂದ್ರವಾಗಿ ಬೆಳೆದಿದೆ. ಇಲ್ಲಿನ ಪರಿಗಣಿತ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು ಹಾಗೂ ಪದವಿ ಕಾಲೇಜುಗಳಲ್ಲಿ ರಾಜ್ಯದ ಇತರ ಜಿಲ್ಲೆಗಳ ವಿದ್ಯಾರ್ಥಿಗಳೂ ಕಲಿಯುತ್ತಿದ್ದಾರೆ. ಇಲ್ಲಿನ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸಿದ 700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈ ಸೌಕರ್ಯ ಸಿಕ್ಕಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಸಂಖ್ಯೆ ಹೆಚ್ಚಿಸಲು ಬಜೆಟ್‌ನಲ್ಲಿ ಅನುದಾನ ಒದಗಿಸುವ ಅಗತ್ಯ ಇದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದ ಸಂಪರ್ಕ ರಸ್ತೆಗಳು, ಶಿಥಿಲಗೊಂಡ ಸೇತುವೆಗಳು, ಹಳೆಯ ಕಿಂಡಿ ಆಣೆಕಟ್ಟುಗಳ ದುರಸ್ತಿಗೂ ಬಜೆಟ್‌ನಲ್ಲಿ ಅನುದಾನ ನೀರೀಕ್ಷಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳ ಅಭಿವೃದ್ಧಿಗೂ ಸರ್ಕಾರದ ಆರ್ಥಿಕ ನೆರವಿನ ಅಗತ್ಯವಿದೆ.
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ಅನೇಕ ಪ್ರಸ್ತಾವಗಳನ್ನು ಸರ್ಕಾರಕ್ಕೆ ಕಳುಹಿಸಿದ್ದು ಇವುಗಳಿಗೆ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆಡಾ.ಆನಂದ್ ಕೆ. ಮುಖ್ಯಕಾರ್ಯನಿರ್ವಹಣಾಧಿಕಾರಿ ದ.ಕ. ಜಿಲ್ಲಾ ಪಂಚಾಯಿತಿ
ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಅನುದಾನದ ಅಗತ್ಯವಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆಡಾ.ಅರುಣ್ ಕುಮಾರ್ ಶೆಟ್ಟಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ದ.ಕ.
ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವಿದೆ. ಖಾಲಿ ಹುದ್ದೆಗಳ ಭರ್ತಿ ಜೊತೆಗೆ ಕೆಲ ತಜ್ಞವೈದ್ಯರ ಹುದ್ದೆಗಳನ್ನು ಸೃಜಿಸಬೇಕಿದೆಡಾ.ಡಿ.ಎಸ್.ಶಿವಪ್ರಕಾಶ್ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ವೈದ್ಯಕೀಯ ಅಧೀಕ್ಷಕ ವೆನ್ಲಾಕ್ ಆಸ್ಪತ್ರೆ
ಬೇಸಿಗೆಯಲ್ಲಿ ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಆತಂಕ ತಪ್ಪಿದ್ದಲ್ಲ. ತುಂಬೆಯ ಅಣೆಕಟ್ಟೆಯ ಜಲಾಶಯ ಹಾಗೂ ಅಡ್ಯಾರ್–ಹರೇಕಳ ಅಣೆಕಟ್ಟೆಯ ಜಲಾಶಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸುವುದು ಸಾಧ್ಯವಾದರೆ ನಗರದ ಕುಡಿಯುವ ನೀರಿನ ಬವಣೆ ನೀಗಲಿದೆ. ತುಂಬೆ ಜಲಾಶಯದಲ್ಲಿ 7 ಮೀ ಎತ್ತರದವರೆಗೆ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಆದರೆ ಇಷ್ಟು ನೀರು ಸಂಗ್ರಹಿಸಿದರೆ ಆಸುಪಾಸಿನ ಅನೇಕ ಗ್ರಾಮಗಳು ಮುಳುಗಡೆಯಾಗುತ್ತವೆ. ಹಾಗಾಗಿ 6 ಮೀ. ಎತ್ತರದವರೆಗೆ ಮಾತ್ರ ನೀರು ಸಂಗ್ರಹಿಸಲಾಗುತ್ತದೆ.
6 ಮೀ ಭರ್ತಿ ಆದಾಗ ತುಂಬೆ ಜಲಾಶಯದಲ್ಲಿ 1.042 ಕೋಟಿ ಕ್ಯುಬಿಕ್ ಮೀಟರ್ ಲೀಟರ್‌ಗಳಷ್ಟು (14.42 ಎಂಸಿಎಂ) ನೀರಿನ ಸಂಗ್ರಹವಿರುತ್ತದೆ. ಈ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಬೇಕಾದರೆ ಆಸುಪಾಸಿನ ಗ್ರಾಮಗಳಲ್ಲಿ ಒಟ್ಟು 344 ಎಕರೆ ಭೂಸ್ವಾಧೀನದ ಅಗತ್ಯವಿದೆ. ಇದಕ್ಕೆ ₹130 ಕೋಟಿ ಅನುದಾನದ ಅಗತ್ಯ ಇದೆ ಎಂದು 2019ರಲ್ಲಿ ಜಿಲ್ಲಾಡಳಿತ ಅಂದಾಜಿಸಿತ್ತು. ಈ ಮೊತ್ತ ಮತ್ತಷ್ಟು ಹೆಚ್ಚಾಗಿದೆ. ಅಡ್ಯಾರ್–ಹರೇಕಳ ಅಣೆಕಟ್ಟಿನ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಆಸುಪಾಸಿನ ಗ್ರಾಮಗಳ 33 ಹೆಕ್ಟೇರ್ ಭೂಸ್ವಾಧೀನವಾಗಬೇಕು. ಇದಕ್ಕೆ ₹ 100 ಕೋಟಿ ಅನುದಾನದ ಅಗತ್ಯವಿದೆ. ಭೂಸ್ವಾಧೀನ ನಡೆಸಿದರೆ ಈ ಅಣೆಕಟ್ಟೆಯ ನೀರು ಸಂಗ್ರಹ ಸಾಮರ್ಥ್ಯ 0.3 ಟಿಎಂಸಿ ಅಡಿಗಳನ್ನು ಹೆಚ್ಚಲಿದೆ. ಇದಕ್ಕೂ ಅನುದಾನದ ಅಗತ್ಯವಿದೆ.
ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೂಪರ್ ಸ್ಪೆಷಾಲಿಟಿ ವಿಭಾಗ ಆರಂಭವಾದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ನಿತ್ಯ ದಾಖಲಾಗುವ ರೋಗಿಗಳ ಸರಾಸರಿ ಪ್ರಮಾಣ 700ರಿಂದ 800ಕ್ಕೆ ತಲುಪಿದೆ. ಇದನ್ನು ಪ್ರಾದೇಶಿಕ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸಿ ಇಲ್ಲಿಗೆ ಮತ್ತಷ್ಟು ಸೌಕರ್ಯ ಕಲ್ಪಿಸಬೇಕು ಎಂಬ ಬೇಡಿಕೆಯೂ ಇದೆ. ಸುತ್ತಮುತ್ತಲಿನ ಏಳೆಂಟು ಜಿಲ್ಲೆಗಳ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ದಾಖಲಾಗುತ್ತಾರೆ. ಆಸ್ಪತ್ರೆಯಲ್ಲಿ ಮಂಜೂರದ ಹುದ್ದೆಗಳಲ್ಲಿ ಎ ಗುಂಪಿನ 7, ಬಿ ಗುಂಪಿನ 5, ಸಿ ಗುಂಪಿನ 122 ಹುದ್ದೆಗಳು ಸೇರಿ ಒಟ್ಟು 399 ಹುದ್ದೆಗಳು ಖಾಲಿ ಇವೆ. ಇಲ್ಲಿ ಹೊಸ ಹೊರ ರೋಗಿ ವಿಭಾಗ (ಒಪಿಡಿ) ಬ್ಲಾಕ್ ಹಾಗೂ 150 ಹಾಸಿಗೆ ವ್ಯವಸ್ಥೆ ಇರುವ ವಾರ್ಡ್‌ನ ಅಗತ್ಯವಿದೆ. ಜತೆಗೆ ಪ್ಲಾಸ್ಟಿಕ್ ಸರ್ಜನ್, ನ್ಯೂರೊ ಸರ್ಜನ್, ಆಂಕೋಸರ್ಜನ್, ನೆಫ್ರಾಲಜಿ, ರೇಡಿಯೇಷನ್ ಆಂಕಾಲಜಿ, ಮೆಡಿಕಲ್ ಆಂಕಾಲಜಿ ವಿಭಾಗಗಳಲ್ಲಿ ತಜ್ಞರ ಹುದ್ದೆಗಳನ್ನು ಹೊಸತಾಗಿ ಸೃಷ್ಟಿಸಬೇಕಿದೆ ಎನ್ನುತ್ತವೆ ಆಸ್ಪತ್ರೆಯ ಮೂಲಗಳು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೇ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯ ಆಸ್ಪತ್ರೆಯ ಸೇವೆಯ ಗುಣಮಟ್ಟ ಹೆಚ್ಚಿಸಲು ಸರ್ಕಾರ ಗಮನ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.