ಮಂಗಳೂರು: ಒಂದೇ ನೋಟದಲ್ಲಿ ಈ ಕೆರೆ ನೋಡುಗರನ್ನು ಸೆಳೆಯುತ್ತದೆ. ಜಲಪಾತ್ರೆಯ ಸುತ್ತ ಸ್ಟೀಲ್ ಬೇಲಿ, ಪಕ್ಕದಲ್ಲೇ ಮಕ್ಕಳ ಆಟಿಕೆಗಳು, ವ್ಯಾಯಾಮ ಸಾಮಗ್ರಿಗಳು, ಎದುರಿನಲ್ಲಿ ಕುಳಿತುಕೊಳ್ಳಲು ಬೆಂಚ್‌ಗಳು, ಸೂಸುವ ತಂಗಾಳಿ, ಮುಸ್ಸಂಜೆ ವಾಯುವಿಹಾರಕ್ಕೆ ಬರುವವರಿಗೆ ಈ ಸ್ಥಳ ಮುದ ನೀಡುತ್ತದೆ.
ಮೇಲ್ನೋಟಕ್ಕೆ ಸೌಂದರ್ಯದಿಂದ ತುಳುಕುವ ಕೆರೆಯು, ಒಡಲಲ್ಲಿ ಮೂಕವಾಗಿ ರೋದಿಸುತ್ತಿದೆ. ಕಾರಣ, ಈ ಪವಿತ್ರ ತೀರ್ಥಕ್ಕೆ ನಿತ್ಯ ನಿರಂತರ ಕೊಳಚೆ ನೀರು ಸೇರುತ್ತದೆ. ಇರುಳಿನಲ್ಲಿ ಅನಾಮಿಕರು ಕಸ ತಂದು ಎಸೆಯುತ್ತಾರೆ. ಇದು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಂಡಿರುವ ನಗರದ ಗುಜ್ಜರಕೆರೆಯ ದುಃಸ್ಥಿತಿ.
ಅಂದಾಜು 3.80 ಎಕರೆಯಲ್ಲಿ ಇರುವ ಕೆರೆಯನ್ನು ₹3.74 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪುನರುಜ್ಜೀವನಗೊಳಿಸಲಾಗಿದೆ. ಕೆರೆ ಅಭಿವೃದ್ಧಿಪಡಿಸಿದ ಮೇಲೆ ಇಲ್ಲಿ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ.
ಯೋಗಿ ಗೋರಕ್ಷನಾಥರಿಂದ ನಿರ್ಮಿತವಾಗಿರುವ ಗುಜ್ಜರಕೆರೆಯು ಬೋಳಾರ ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ತೀರ್ಥಕೆರೆ. ಸುತ್ತಲಿನ ನೂರಾರು ಮನೆಗಳ ಜಲಮೂಲಕ್ಕೆ ಇದು ಅಂತರ್ಜಲ ಹೆಚ್ಚಿಸುವ ಜಲಕೋಟೆಯಾಗಿದೆ. ಇಂತಹ ಪವಿತ್ರ ಕೆರೆ ಅಭಿವೃದ್ಧಿ ಪಡಿಸುವ ವೇಳೆ ಇಲ್ಲಿನ ಐತಿಹಾಸಿಕ, ಧಾರ್ಮಿಕ ಮಹತ್ವವನ್ನು ಅರಿತು ಕಾಮಗಾರಿ ನಡೆಸಬೇಕಿತ್ತು. ಮೇಲ್ನೋಟಕ್ಕೆ ಕೆರೆ ಸುಂದರವಾಗಿ ಕಂಡರೂ, ಕೆರೆಯ ನೀರಿಗೆ ಚರಂಡಿಯ ಕಲುಷಿತ ನೀರು ಬಂದು ಸೇರುವುದು ನಿಂತಿಲ್ಲ ಎನ್ನುತ್ತಾರೆ ಸ್ಥಳೀಯರು.
‘ಅಂದಾಜು 40 ಅಡಿ ಆಳದ ಕೆರೆಯಲ್ಲಿ ಪ್ರಸ್ತುತ 20 ಅಡಿ ನೀರು ಇದ್ದಿರಬಹುದು. ಮಂಗಳೂರು ನಗರದ ಜಲ ಬವಣೆ ನೀಗಿಸಲು ಈ ಕೆರೆ ಸಹಕಾರಿ. ಆದರೆ, ಕೆರೆಗೆ ಒಳಚರಂಡಿ ನೀರು ಸೇರುವುದನ್ನು ತಪ್ಪಿಸಿ, ಜಲ ಶುದ್ಧೀಕರಣ ನಡೆಸಬೇಕು. ಕೆರೆ ನೀರು ಕಲುಷಿತಗೊಂಡಿರುವ ಕಾರಣ ಸುತ್ತಲಿನ ಮನೆಗಳ ನೀರು ಸಹ ಮಲಿನಗೊಂಡಿದೆ’ ಎನ್ನುತ್ತಾರೆ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಿ. ನೇಮು ಕೊಟ್ಟಾರಿ.
‘ಸಂಸದರು, ಶಾಸಕರು, ಪಾಲಿಕೆಯ ಮೇಯರ್, ಅಧಿಕಾರಿಗಳು ಎಲ್ಲರಿಗೂ ಹಲವಾರು ಬಾರಿ ಮನವಿ ನೀಡಿ, ಸ್ಥಳಕ್ಕೆ ಕರೆತಂದು, ಸಮಸ್ಯೆಯ ಗಂಭೀರತೆಯ ಬಗ್ಗೆ ತಿಳಿಸಿ, ಕೆರೆ ಸಂರಕ್ಷಣೆ ಮಾಡುವಂತೆ ವಿನಂತಿಸಲಾಗಿದೆ. ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ, ಭರವಸೆ ದೊರೆಯುತ್ತಿದೆಯೇ ವಿನಾ, ಫಲ ಸಿಗುತ್ತಿಲ್ಲ’ ಎಂದು ಬೇಸರಿಸಿದರು.
ಕೆರೆಯ ಆವರಣದಲ್ಲಿರುವ ಆಟಿಕೆಗಳು, ವ್ಯಾಯಾಮ ಸಾಮಗ್ರಿಗಳು ತೆರೆದ ಜಾಗದಲ್ಲಿದ್ದು, ಬಿಸಿಲು– ಮಳೆಗೆ ಹಾಳಾಗುತ್ತಿವೆ. ಇದಕ್ಕೆ ತಗಡಿನ ಹೊದಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕಸ ಸಂಗ್ರಹದಲ್ಲಿ ಮಾದರಿ ಕಾರ್ಯ ನಡೆಸುತ್ತಿರುವ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ತಿಂಗಳಲ್ಲಿ ಒಂದು ದಿನ ಗುಜ್ಜರ ಕೆರೆ ಸುತ್ತಲಿನ ಪ್ರದೇಶದಲ್ಲಿ ಶ್ರಮದಾನ ನಡೆಸಿ, ಸ್ವಚ್ಛತಾ ಕಾರ್ಯ ಮಾಡುತ್ತದೆ ಎಂದು ಟ್ರಸ್ಟ್ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್ ತಿಳಿಸಿದರು.
Highlights - ಸುತ್ತಲಿನ ಮನೆಗಳಿಗೆ ಅಂತರ್ಜಲದ ಮೂಲ ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಲು ಸಹಕಾರಿ ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ತೀರ್ಥಕೆರೆ
Cut-off box - ‘ದೇವಿಯ ಜಳಕೋತ್ಸವ ನಡೆಯಲಿ’ ‘ದಸರಾ ಸಂದರ್ಭದಲ್ಲಿ ಆಯುಧ ಪೂಜೆಯ ದಿನ ಹಳೆಕೋಟೆ ಮಾರಿಯಮ್ಮನ ಉತ್ಸವ ಇಲ್ಲಿ ನಡೆಯುತ್ತದೆ. ಕೆರೆ ನೀರು ಅಶುದ್ಧವಾಗಿರುವ ಕಾರಣ ಟ್ಯಾಂಕರ್‌ನಲ್ಲಿ ನೀರು ತಂದು ತೊಟ್ಟಿಯಲ್ಲಿ ದೇವರಿಗೆ ಜಲಸೇವೆ ಮಾಡಲಾಗುತ್ತದೆ. ಕೆರೆ ಶುದ್ಧಗೊಂಡು ದೇವರ ಜಳಕೋತ್ಸವ ಇಲ್ಲಿಯೇ ನಡೆಬೇಕೆಂಬುದು ಸ್ಥಳೀಯ ನಿವಾಸಿಗಳ ಆಸೆಯಾಗಿದೆ’ ಎಂದು ಕೆರೆ ಪಕ್ಕದ ಮನೆಯ ನಿವಾಸಿಯೊಬ್ಬರು ಹೇಳಿದರು.
Cut-off box - ‘ನೀರು ಕುಡಿಯಲು ಯೋಗ್ಯವಲ್ಲ’ ಪ್ರತಿ ಆರು ತಿಂಗಳಿಗೊಮ್ಮೆ ಕೆರೆಯ ನೀರನ್ನು ಪ್ರಯೋಗಾಲಯ ತಪಾಸಣೆಗೆ ನೀಡಲಾಗುತ್ತದೆ. 2024ರ ಡಿಸೆಂಬರ್‌ನಲ್ಲಿ ಮೀನುಗಾರಿಕಾ ಕಾಲೇಜಿನ ಪ್ರಯೋಗಾಲಯದಲ್ಲಿ ನೀರಿನ ತಪಾಸಣೆ ಮಾಡಿಸಿದ್ದು ನೀರು ನೇರ ಸೇವನೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದೆ ಎಂದು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಪ್ರಮುಖರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.