ಪ್ರಜಾವಾಣಿ ವಾರ್ತೆ
ಉಜಿರೆ: ‘ಎಂಟು ಶತಮಾನಗಳ ಇತಿಹಾಸ, ಪರಂಪರೆಯನ್ನು ಇರುವ ಧರ್ಮಸ್ಥಳದ ಮೇಲೆ ಕ್ಷುಲ್ಲಕವಾಗಿ ಮಾಧ್ಯಮಗಳಲ್ಲಿ ನಡೆದ ಅಪಪ್ರಚಾರದಿಂದ ಎಲ್ಲರಿಗೂ ತೀವ್ರ ದುಃಖವಾಗಿದೆ. ಧರ್ಮಸ್ಥಳದ ಪರಂಪರೆ, ಹೆಗ್ಗಡೆಯವರ ಬಹುಮುಖಿ ಸಮಾಜಸೇವಾ ಕಾರ್ಯಗಳನ್ನು ಬೆಂಬಲಿಸಿ ಸಹಕಾರ ನೀಡುವುದು ಸಮಗ್ರ ಜೈನಸಮಾಜದ ಕರ್ತವ್ಯವಾಗಿದೆ’ ಎಂದು ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಕಾರ್ಕಳ ಸೀಮೆಯ ಜೈನರೊಂದಿಗೆ ಶನಿವಾರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆ ಅವರನ್ನು ಗೌರವಿಸಿ ಮಾತನಾಡಿದರು.
‘ಕೆಸರಾದ ನೀರನ್ನು ಮತ್ತೆ ತಿಳಿಯಾಗಿ ಪರಿಶುದ್ಧಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಪಪ್ರಚಾರ, ಆರೋಪಗಳೆಲ್ಲ ದೂರವಾಗಲಿ. ಹೆಗ್ಗಡೆ ಅವರಿಗೆ ಇನ್ನಷ್ಟು ಲೋಕಕಲ್ಯಾಣ ಕಾರ್ಯ ಮಾಡುವಂತೆ ಹರಸಲಿ’ ಎಂದು ಸ್ವಾಮೀಜಿ ಹಾರೈಸಿದರು.
ಕಾರ್ಕಳ ಸೀಮೆಯ ಎಲ್ಲ ಬಸದಿಗಳಲ್ಲಿ ಪೂಜೆ ಸಲ್ಲಿಸಿ ಪುರೋಹಿತರು ತಂದ ಪ್ರಸಾದವನ್ನು ಹೆಗ್ಗಡೆ ಅವರಿಗೆ ಅರ್ಪಿಸಿದರು.
ಕಾರ್ಕಳ ಮಠದ ಬಸದಿಯ ವಿಶೇಷ ಪ್ರಸಾದವನ್ನು ಹೆಗ್ಗಡೆ ಅವರಿಗೆ ಸ್ವಾಮೀಜಿ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಮಾತನಾಡಿ, ಸತ್ಯಕ್ಕೆ ಸದಾ ಜಯವಿದೆ. ಸತ್ಯ ಪ್ರಕಟವಾಗುವುದರೊಂದಿಗೆ ಆರೋಪಿಗಳಿಗೆ ಶಿಕ್ಷೆಯಾಗಲಿ. ಹೆಗ್ಗಡೆಯವರ ಜೊತೆ ಬೆಂಬಲ ನೀಡಲು ನಾವು ಸಿದ್ಧರು ಎಂದು ಅವರು ಭರವಸೆ ನೀಡಿದರು.
‘ನನ್ನ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸಮಾಜ ಬಾಂಧವರ ಭಕ್ತಿ-ಗೌರವ, ಅಭಿಮಾನ ಇದೇ ರೀತಿ ಇರಲಿ’ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಶಿರ್ತಾಡಿಯ ಎಸ್.ಡಿ.ಸಂಪತ್ ಸಾಮ್ರಾಜ್ಯ, ಸುದರ್ಶನ ಜೈನ್ ಬಂಟ್ವಾಳ, ಪುಷ್ಪರಾಜ ಜೈನ್ ಮಂಗಳೂರು, ಕುಲದೀಪ್ ಚೌಟರ ಅರಮನೆ, ಮೂಡುಬಿದಿರೆಯ ಅಂಡಾರು ಮಹಾವೀರ ಹೆಗ್ಡೆ, ಅನಂತರಾಜ ಪೂವಣಿ, ಶಿಶುಪಾಲ ಜೈನ್, ಮೋಹನ ಪಡಿವಾಳ್, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಗುಣವರ್ಮ ಜೈನ್ ಕಾರ್ಕಳ, ನೇಮಿರಾಜ ಆರಿಗಾ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.