ADVERTISEMENT

ಹೈಕೋರ್ಟ್‌ನಲ್ಲಿ ದಾವೆ ವಜಾ: ಭೂಮಿ ಗ್ರಾ.ಪಂ. ವಶಕ್ಕೆ

ತಣ್ಣೀರುಪಂಥ: ಪಂಚಾಯಿತಿ ಜಾಗ ಅತಿಕ್ರಮಣ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 6:06 IST
Last Updated 13 ಜುಲೈ 2024, 6:06 IST
ಉಪ್ಪಿನಂಗಡಿ ಸಮೀಪ ತಣ್ಣೀರುಪಂಥ ಗ್ರಾಮ ಪಂಚಾಯಿತಿ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ಅಳತೆ ಮಾಡಿ, ಗಡಿ ಗುರುತು ಮಾಡಿದರು
ಉಪ್ಪಿನಂಗಡಿ ಸಮೀಪ ತಣ್ಣೀರುಪಂಥ ಗ್ರಾಮ ಪಂಚಾಯಿತಿ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ಅಳತೆ ಮಾಡಿ, ಗಡಿ ಗುರುತು ಮಾಡಿದರು   

ಉಪ್ಪಿನಂಗಡಿ: ತಣ್ಣೀರುಪಂಥ ಗ್ರಾಮ ಪಂಚಾಯಿತಿ ಕೃಷಿ ಮಾರುಕಟ್ಟೆ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ಇಬ್ಬರು ಅತಿಕ್ರಮಿಸಿಕೊಂಡು ಕೃಷಿ ಮತ್ತು ಕಟ್ಟಡ ನಿರ್ಮಿಸಿದ್ದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ಕೃಷಿ ಒತ್ತುವರಿಯನ್ನು ತೆರವುಗೊಳಿಸಿ ಜಾಗವನ್ನು ಪಂಚಾಯಿತಿ ಸ್ವಾಧೀನಕ್ಕೆ ನೀಡಿದ ಘಟನೆ ಶುಕ್ರವಾರ ತಣ್ಣೀರುಪಂಥ ಗ್ರಾಮದ ಕಲ್ಲೇರಿಯಲ್ಲಿ ನಡೆಯಿತು.

ಬೆಳ್ತಂಗಡಿ ತಾಲ್ಲೂಕು ತಣ್ಣೀರುಪಂಥ ಗ್ರಾಮದ ಕಲ್ಲೇರಿಯಲ್ಲಿ 48 ಸೆಂಟ್ಸ್ ಜಾಗ ತಣ್ಣೀರುಪಂಥ ಗ್ರಾಮ ಪಂಚಾಯಿತಿಗೆ ಮಂಜೂರಾತಿ ಆಗಿ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಈ ಜಾಗದ ಪೈಕಿ 18 ಸೆಂಟ್ಸ್ ಜಾಗವನ್ನು ವ್ಯಕ್ತಿಯೊಬ್ಬರು ಅತಿಕ್ರಮಿಸಿ ಕೃಷಿ ಮಾಡಿದ್ದರು. 30 ಸೆಂಟ್ಸ್ ಜಾಗವನ್ನು ಇನ್ನೊಬ್ಬರು ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ನಡೆಸಿ, ಅಳತೆ ಮಾಡಿ, ಅತಿಕ್ರಮಣ ತೆರವುಗೊಳಿಸಿ, ಗಡಿ ಗುರುತು ಮಾಡಿ ಪಂಚಾಯಿತಿ ವಶಕ್ಕೆ ನೀಡಿದರು.

ಪ್ರಕರಣದ ಸಾರಾಂಶ: ಆರು ವರ್ಷಗಳ ಹಿಂದೆ ಕರಾಯ ಗ್ರಾಮದ ಸರ್ವೆ ನಂಬರ್ 12/3ಡಿ1ರಲ್ಲಿ 48 ಸೆಂಟ್ಸ್ ಜಾಗ ಪಂಚಾಯಿತಿಗೆ ಮಂಜೂರು ಆದಾಗ ಇದರ ವಿರುದ್ಧ ಸ್ಥಳೀಯ ನಿವಾಸಿ ನಾರ್ಣಪ್ಪ ಗೌಡ ಎಂಬುವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಇದಕ್ಕೆ ಪ್ರತಿಯಾಗಿ ಪಂಚಾಯಿತಿ ಹೈಕೋರ್ಟ್‌ನಲ್ಲಿ ನಿವೇದನೆ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ನಾರ್ಣಪ್ಪ ಅವರ ದಾವೆಯನ್ನು ವಜಾಗೊಳಿಸಿ ಆದೇಶಿಸಿದೆ. ಪಂಚಾಯಿತಿ ಪರವಾಗಿ ಹೈಕೋರ್ಟ್‌ನಲ್ಲಿ ಕೇತನ್ ಬಂಗೇರ ವಾದಿಸಿದ್ದರು.

ADVERTISEMENT

ಕೋರ್ಟ್‌ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ, ಬೆಳ್ತಂಗಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ತಮ್ಮ ಜಾಗದ ಗಡಿ ಗುರುತು ಮಾಡಿಕೊಡುವಂತೆ ಕೇಳಿಕೊಂಡಿತ್ತು. ಅದರಂತೆ ಶುಕ್ರವಾರ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಗಡಿ ಗುರುತು ಮಾಡಿದರು. ನಾರ್ಣಪ್ಪ ಗೌಡರು ನೆಟ್ಟಿದ್ದ ಅಡಿಕೆ ಗಿಡಗಳನ್ನು ಕಡಿದು ಹಾಕಲಾಯಿತು. ಪಂಚಾಯಿತಿ ಕೋರಿಕೆ ಮೇರೆಗೆ ಗಡಿ ಗುರುತು ಮಾಡಿಕೊಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಗಡಿ ಗುರುತಿನಿಂದಾಗಿ ಕಟ್ಟಡ ನಿರ್ಮಿಸಿದ್ದ ಅತಿಕ್ರಮಿತ ಜಾಗವೂ ಪಂಚಾಯಿತಿಗೆ ದೊರೆತಿದೆ.

ಪ್ರತ್ಯೇಕ ದಾವೆ: ಅತಿಕ್ರಮಿತ ಜಾಗದಲ್ಲಿ ನಿರಂಜನ್‌ಕುಮಾರ್ ಎಂಬುವರು ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಎರಡು ವರ್ಷಗಳ ಹಿಂದೆ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ಅಬ್ದುಲ್ಲ ಭೂ ಕಬಳಿಕೆ ನ್ಯಾಯಾಲಯಕ್ಕೆ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರು ಇತ್ಯರ್ಥ ಆಗುವ ಮುನ್ನವೇ ಜಾಗ ಪಂಚಾಯಿತಿ ವಶಕ್ಕೆ ದೊರೆತಿದೆ.

ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಪ್ರಿಯಾ, ಸದಸ್ಯರಾದ ಜಯ ವಿಕ್ರಮ ಕಲ್ಲಾಪು, ಸದಾನಂದ ಶೆಟ್ಟಿ ಮಡಪ್ಪಾಡಿ, ಡಿ.ಕೆ. ಅಯ್ಯೂಬ್, ಲೀಲಾವತಿ, ಮಾಜಿ ಸದಸ್ಯ ಕೆ.ಎಸ್. ಅಬ್ದುಲ್ಲ, ಪಂಚಾಯಿತಿ ಪ್ರಭಾರ ಅಭಿವೃದ್ದಿ ಅಧಿಕಾರಿ ಶ್ರವಣ್‌ಕುಮಾರ್, ಕಾರ್ಯದರ್ಶಿ ಆನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.