ADVERTISEMENT

ದ್ವೇಷ ಭಾಷಣ ನಿಯಂತ್ರಿಸಲು ಕಾನೂನು ದುರ್ಬಲ: KPCC ಕಾರ್ಯದರ್ಶಿ ಪದ್ಮರಾಜ್‌ ಪೂಜಾರಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 7:48 IST
Last Updated 2 ಜೂನ್ 2025, 7:48 IST
<div class="paragraphs"><p>ಪದ್ಮರಾಜ್‌ ಪೂಜಾರಿ ಮಾತನಾಡಿದರು</p></div>

ಪದ್ಮರಾಜ್‌ ಪೂಜಾರಿ ಮಾತನಾಡಿದರು

   

ಮಂಗಳೂರು: 'ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಹೇಳಿಕೆ ನೀಡುವ, ದ್ವೇಷ ಭಾಷಣ ಮಾಡಿ ಸಮಾಜದ ಶಾಂತಿ ಸುವ್ಯವಸ್ಥೆ ಕದಡುವರ ವಿರುದ್ಧ ಎಫ್‌ಐಆರ್ ದಾಖಲಿಸಿದರೂ, ಅವರ ವಿರುದ್ಧ ಕಠಿಣ ಕ್ರಮಕ್ಕೆ ಅವಕಾಶ ಇಲ್ಲ. ಈ ವಿಚಾರದಲ್ಲಿ ಕಾನೂನು ದುರ್ಬಲವಾಗಿದ್ದು, ತಿದ್ದುಪಡಿ ಆಗಬೇಕಾದ ಅಗತ್ಯ ಇದೆ' ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್‌.ಪೂಜಾರಿ ಹೇಳಿದರು.‌

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಹೇಳಿ ನೀಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರನ್ನು ಪೊಲೀಸರು ಬಂಧಿಸಿದರೂ ಅಂತಹವರಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಹಾಗಾಗಿ ದ್ವೇಷ ಹುಟ್ಟಿಸುವ ಮಾತುಗಳನ್ನು ಆಡುವವರು ತಮ್ಮ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಈಗಿನ ಕಾಲ ಘಟ್ಟದ ಅಗತ್ಯಗಳಿಗೆ ಅನುಗುಣವಾಗಿ ಕಾನೂನು ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಲಿದೆ ಎಂಬ ವಿಶ್ವಾಸ ಇದೆ’ ಎಂದರು.

ADVERTISEMENT

‘ಸರ್ಕಾರವು ಜಿಲ್ಲೆಗೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ದ್ವೇಷ ಹುಟ್ಟಿಸುವವರ ಮೇಲೆ ನಿಗಾ ಇಟ್ಟಿರುವ ಪೊಲೀಸರು, ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ದ್ವೇಷ ಮೂಡಿಸುವ ಸಂದೇಶ ಹಂಚಿಕೊಂಡು ಯಾರೂ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವ ಭಾಷೆಯೂ ತಂದೆ–ತಾಯಿ ಕುರಿತು ಗೌರವ ಮೂಡಿಸುವಂತೆ ಇರಲಿ’ ಎಂದರು.

‘ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅನಾಹುತಗಳು ಸಂಭವಿಸಿದಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಕೇವಲ ಸರ್ಕಾರದ ಟೀಕೆಯಲ್ಲಿ ತೊಡಗಿದ್ದಾರೆ. ಆಡಳಿತಾತ್ಮಕ ತೊಡಕುಗಳಿದ್ದರೆ, ಜಿಲ್ಲೆಗೆ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಭೇಟಿ ನೀಡಿದಾಗ ಶಾಸಕರು ಅವರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆ ನಿವಾರಣೆಗೆ ಕ್ರಮವಹಿಸಬೇಕು. ಮನೆ ಹಾಳು ರಾಜಕೀಯ ಮಾಡುವುದನ್ನು ಬಿಟ್ಟು ಕಾಮತ್ ಅವರು ಮುಖ್ಯ ಮಂತ್ರಿ, ಸಚಿವರು ಜಿಲ್ಲಾ ಪ್ರವಾಸ ಕೈಗೊಂಡಾಗ ಎಷ್ಟು ಸಲ ಅವರನ್ನು ಭೇಟಿ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಮಳೆಯಲ್ಲಿ ಅನಾಹುತ ಸಂಭವಿಸಿದಾಗ ಜಿಲ್ಲೆಗೆ ತಕ್ಷಣ ಭೇಟಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮಳೆಯಿಂದಾಗಿ ಮನೆ ಕುಸಿದು ಮೃತ ಪಟ್ಟವರ ಕುಟುಂಬಗಳಿಗೆ ಉಸ್ತುವಾರಿ ಸಚಿವರು ಅದೇ ದಿನ ಪರಿಹಾರದ ಚೆಕ್ ವಿತರಿಸಿ ಸ್ಪಂದಿಸಿದ್ದಾರೆ. ವಿಕೋಪ ನಿರ್ವಹಣೆ ಬಗ್ಗೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಳೆ ಸಂತ್ರಸ್ತರಿಗೆ ನೆರವಾಗಲು ಕಾಂಗ್ರೆಸ್ ಪಕ್ಷದಿಂದಲೂ ತಂಡವನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಪ್ರಕಾಶ ಸಾಲಿಯಾನ್, ಎನ್ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸುಹಾನ್ ಆಳ್ವ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾರಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು, ಮುಖಂಡರಾದ ಶಶಿಧರ್ ಹೆಗ್ಡೆ, ಅಪ್ಪಿ, ನೀರಜ್ ಚಂದ್ರಪಾಲ್, ಟಿ.ಹೊನ್ನಯ್ಯ, ಪ್ರೇಮ್ ಬಲ್ಲಾಳ್‌ಬಾಗ್ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.