ADVERTISEMENT

ರಾಹುಲ್ ಗಾಂಧಿ ಅಮೇಠಿಯಿಂದಲೇ ಸ್ಪರ್ಧಿಸಲಿ: ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ನಕುಲ್ ದುಬೇ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 8:31 IST
Last Updated 12 ಜುಲೈ 2023, 8:31 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಮಂಗಳೂರು: ‘ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿಯವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂಬುದು ಕ್ಷೇತ್ರದ ಕಾರ್ಯಕರ್ತರ ಒತ್ತಾಯ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದು ರಾಹುಲ್‌ ಗಾಂಧಿ ಅವರಿಗೆ ಬಿಟ್ಟಿದ್ದು’ ಎಂದು ಉತ್ತರ ಪ್ರದೇಶ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅವಧ್‌ ಪ್ರಾಂತ್ಯದ ಅಧ್ಯಕ್ಷ ನಕುಲ್‌ ದುಬೇ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಸರ್ಕಾರದ ಧೋರಣೆಗಳನ್ನು ಕಟುವಾಗಿ ಟೀಕಿಸುವ ರಾಹುಲ್‌ ಗಾಂಧಿ ವಿರುದ್ಧ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿ, ಅವರ ಸಂಸತ್‌ ಸದಸ್ಯತ್ವವನ್ನು ರದ್ದುಪಡಿಸಲಾಯಿತು. ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತ‍ಪಡಿಸಿದರು.

‘ದೇಶವನ್ನು ಮಾರಾಟಕ್ಕಿಟ್ಟವರು ಹಾಗೂ ದೇಶ ಕಟ್ಟುವವರ ನಡುವಿನ ಹಣಾಹಣಿ ಮುಂಬರುವ ಲೋಕಸಭಾ ಚುನಾವಣೆ. ದೇಶವನ್ನು ರಕ್ಷಿಸುವ ಮತ್ತು ಕಟ್ಟಿಬೆಳೆಸುವ ಕಾರ್ಯವನ್ನು ಕಾಂಗ್ರೆಸ್‌ ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿದೆ. 2014ರಿಂದ ಆಳುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ದೇಶವನ್ನು ಮಾರಾಟ ಮಾಡುತ್ತಿದೆ. ದೇಶವನ್ನು ವಿಭಜಿಸುವ ಹಾಗೂ ಹಾಳುಗೆಡಹುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಇದರ ವಿರುದ್ಧ ನಮ್ಮ ಪಕ್ಷವು ಹೋರಾಟ ಮುಂದುವರಿಸಲಿದೆ’ ಎಂದರು.

ADVERTISEMENT

‘ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಮತ್ತೆ ಪ್ರಬಲ ರಾಜಕೀಯ ಶಕ್ತಿಯನ್ನಾಗಿ ರೂಪಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಬಿಜೆಪಿಯ ಹಿಂದುತ್ವದ ರಾಜಕಾರಣ ಹೆಚ್ಚು ಸಮಯ ನಡೆಯುವುದಿಲ್ಲ. ಬಿಜೆಪಿಯವರು ಯಾವತ್ತೂ ಅಭಿವೃದ್ಧಿಯ ಕಾರ್ಯಸೂಚಿಯನ್ನು ಹೊಂದಿಲ್ಲ. ಅದಾನಿ ಕುರಿತ ವಿಪರೀತ ಕಾಳಜಿ, ಪುಲ್ವಾಮ ಹತ್ಯಾಕಾಂಡದ ಹಿಂದಿನ ಮಸಲತ್ತುಗಳನ್ನು ಜರ್ನ ಅರ್ಥ ಮಾಡಿಕೊಂಡಿದ್ದಾರೆ. ಭಾರತ್‌ ಜೋಡೊ ಯಾತ್ರೆ ಪಕ್ಷಕ್ಕೆ ಚೈತನ್ಯ ತುಂಬಿದೆ. ರಾಹುಲ್‌ ಗಾಂಧಿಯವರೇ ಮುಂದಿನ ಪ್ರಧಾನಿ ಆಗಲಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.