ಮಂಗಳೂರು: ‘ದೀರ್ಘ ಯುದ್ಧದಲ್ಲಿ ಯಾವ ದೇಶವೂ ಗೆಲ್ಲುವುದಿಲ್ಲ. ಮೇಲುಗೈ ಸಾಧಿಸುವ ರಾಷ್ಟ್ರವೂ ಸಾಕಷ್ಟು ನಷ್ಟವನ್ನು ಅನುಭವಿಸಿ, ಸೋತು ಸುಣ್ಣವಾಗಿರುತ್ತದೆ’ ಎಂದು ಭಾರತೀಯ ವಾಯುಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ.ಅಮೀನ್ ಅಭಿಪ್ರಾಯಪಟ್ಟರು.
ಪ್ರೆಸ್‌ಕ್ಲಬ್ ವತಿಯಿಂದ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ಗೌರವ ಅತಿಥಿ’ ಸನ್ಮಾನ ಸ್ವೀಕರಿಸಿದ ಅವರು ಗುವಾಹಟಿ, ಅರುಣಾಚಲಪ್ರದೇಶ, ಚಂಡಿಗಡದ ಸೇನಾ ನೆಲೆಗಳಲ್ಲಿ ಹಾಗೂ ಸಿಯಾಚಿನ್, ಕಾರ್ಗಿಲ್‌ನಂತಹ ಕಠಿಣ ಪ್ರದೇಶಗಳಲ್ಲಿ ವಾಯುಸೇನೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನೆನಪುಗಳನ್ನು ಮೆಲುಕು ಹಾಕಿದರು. ಬೆಟ್ಟಗುಡ್ಡಗಳ ನಡುವೆ ಇರುವ ರಸ್ತೆ ಸಂಪರ್ಕ ಇಲ್ಲದ ಗ್ರಾಮಗಳಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸಿದ ರೋಮಾಂಚನಕಾರಿ ಅನುಭವಗಳನ್ನು ಹಂಚಿಕೊಂಡರು.
ಸಶಸ್ತ್ರ ಸೇನೆಯಲ್ಲಿ ಕೆಲಸ ಮಾಡುವ ಅನುಭವವೇ ಬೇರೆ. ಸೇನೆಯಲ್ಲಿ ಸಿಗುವ ತರಬೇತಿ ಮಾನಸಿಕ ಹಾಗೂ ದೈಹಿಕ ಹಾಗೂ ಶೈಕ್ಷಣಿಕವಾಗಿಯೂ ಸದೃಢಗೊಳಿಸುತ್ತಿದೆ. ಸೇನೆಯಲ್ಲಿ ಯಾರೂ ಶ್ರೇಷ್ಠ ಅಥವಾ ಕನಿಷ್ಠ ಎಂಬುದಿಲ್ಲ. ಅಲ್ಲಿ ಕಲಿಯುವ ಪ್ರತಿ ವಿಚಾರವೂ ಬದುಕಿಗೆ ಒಂದು ಪಾಠ. ನಾಯಕತ್ವ ಗುಣಗಳನ್ನು ಅದು ದಯಪಾಲಿಸುತ್ತದೆ’ ಎಂದರು.
‘ಜಗತ್ತಿನ ಅತಿದೊಡ್ಡ ಹೆಲಿಕಾಪ್ಟರ್ ಎಂಐ 26ರಲ್ಲಿ (ರಷ್ಯಾ ನಿರ್ಮಿತ) ಕಾರ್ಯಾಚರಿಸಿದ ನೆನಪೂ ಅವಿಸ್ಮರಣೀಯ. ಅಗ್ನಿ–1 ಕ್ಷಿಪಣಿಯನ್ನು ಮೊದಲ ಸಲ ಪರೀಕ್ಷಾರ್ಥ ಒಡಿಷಾದ ಚಂಡಿಪುರಕ್ಕೆ ಅದೇ ಹೆಲಿಕಾಪ್ಟರ್‌ನಲ್ಲಿ ಸಾಗಿಸಿದ್ದೆವು. ಅನೇಕ ಕಡೆ ಪ್ರವಾಹ ನಿಯಂತ್ರಣ ಕಾರ್ಯದಲ್ಲಿ ಭಾಗಿಯಾಗಿದ್ದೆವು’ ಎಂದು ತಿಳಿಸಿದರು.
‘ಅತಿಗಣ್ಯರನ್ನು ಕರೆದೊಯ್ಯುವ ತಂಡದಲ್ಲಿ ಕಾರ್ಯನಿರ್ವಹಿಸಿದ್ದು ನನಗೆ ಸಿಕ್ಕ ಅಪೂರ್ವ ಅವಕಾಶ. ಅತಿಗಣ್ಯರನ್ನು ಗೊತ್ತುಪಡಿಸಿದ ಜಾಗಕ್ಕೆ ನಿಗದಿತ ಸಮಯಕ್ಕೆ ತಲುಪಿಸಬೇಕು. ಒಂದು ನಿಮಿಷ ತಡವಾದರೂ ಅದನ್ನು ಕಪ್ಪು ಚುಕ್ಕೆ ಎಂದೇ ಪರಿಗಣಿಸಲಾಗುತ್ತದೆ. ಎಳ್ಳಿನಿತೂ ತಪ್ಪೆಸಗಲು ಇಲ್ಲಿ ಅವಕಾಶ ಇಲ್ಲ. ಮಾಜಿ ಪ್ರಧಾನಿಗಳಾದ ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ. ದೇವೇಗೌಡ, ಮಾಜಿ ರಾಷ್ಟ್ರಪತಿಗಳಾದ ಶಂಕರ ದಯಾಳ್ ಶರ್ಮಾ, ಕೆ.ಆರ್.ನಾರಾಯಣನ್, ಎಪಿಜೆ ಅಬ್ದುಲ್ ಕಲಾಂ ಮಾಜಿ ರಕ್ಷಣಾ ಸಚಿವರಾದ ಜಾರ್ಜ್ ಫರ್ನಾಂಡಿಸ್, ಮುಲಾಯಂ ಸಿಂಗ್ ಯಾದವ್ ಅವರನ್ನು ಅನೇಕ ಸಲ ಕರೆದೊಯ್ದಿದ್ದೇನೆ. ಚಂಬಲ್ ಕಣಿವೆಯಲ್ಲಿ ಡಕಾಯಿತೆಯಾಗಿದ್ದ ಪೂಲನ್ ದೇವಿ ಸಂಸದೆಯಾದ ಬಳಿಕ ಆಕೆಯ ಆಟೋಗ್ರಾಫ್ ಪಡೆದಿದ್ದೆ’ ಎಂದರು.
‘ಸೇನೆಯಲ್ಲಿ 25 ವರ್ಷ ಕರ್ತವ್ಯ ನಿರ್ವಹಿಸಿದ ಬಳಿಕ ಏರ್ ಇಂಡಿಯಾ ಸಂಸ್ಥೆಯನ್ನು ಸೇರಿದ್ದೆ. 168 ಮಂದಿ ಪ್ರಯಾಣಿಕರು ಮೃತಪಟ್ಟ ಮಂಗಳೂರು ವಿಮಾನ ದುರಂತವನ್ನು ನಿಭಾಯಿಸಿದ್ದು ಬದುಕಿನಲ್ಲಿ ಮರೆಯಲಾಗದ ಅನುಭವ’ ಎಂದರು.
‘ಸೇನೆಗೆ ಸೇರಲು ಈಗ ಹೆಚ್ಚಿನ ಸ್ಪರ್ಧೆ ಇರುವುದು ನಿಜ. ದೈಹಿಕ, ಮಾನಸಿಕ ಸಾಮರ್ಥ್ಯದ ಜೊತೆ ದೃಢವ್ಯಕ್ತಿತ್ವ, ಪ್ರಾಮಾಣಿಕತೆ ಸೇನೆಗೆ ಸೇರಲು ಬೇಕಾದ ಅರ್ಹತೆ. ಸಂದರ್ಶನ ಎದುರಿಸುವಾಗ ಮುಚ್ಚುಮರೆ ಮಾಡದೇ ನಿಮ್ಮತನವನ್ನು ತೋರಿಸಬೇಕು. ಸಾಂಘಿಕವಾಗಿ ಕಾರ್ಯನಿರ್ವಹಿಸಬಲ್ಲ ನಾಯಕತ್ವ ಗುಣ, ಸದೃಢ ಮನೋಬಲ, ಹಣಕ್ಕಿಂತ ದೇಶ ಮುಖ್ಯವೆಂಬ ಸಮರ್ಪಣಾ ಭಾವವೂ ಬೇಕು. ಅಗ್ನಿಪಥ ಯೋಜನೆಯಡಿ ಅಗ್ನಿವೀರ್‌ಗಳಾಗಿಯೂ ಸೇನೆಗೆ ಸೇರಬಹುದು. ಇದರಡಿ ಆಯ್ಕೆಯಾದವರು ಸೇನೆಯಲ್ಲಿ ಅಧಿಕಾರಿಗಳಾಗಲು ಸಾಧ್ಯವಿಲ್ಲ. ಪಿಂಚಣಿ ಸೌಲಭ್ಯವೂ ಸಿಗದು ಆದರೆ, ನಾಲ್ಕು ವರ್ಷ ಸೇವಾವಧಿಯಲ್ಲಿ ಪಡೆಯುವ ತರಬೇತಿ ಬದುಕಿನ ದಿಕ್ಕನ್ನೇ ಬದಲಿಸಬಲ್ಲುದು’ ಎಂದರು.
ಭಾರತ ಅಭಿವೃದ್ಧಿ ಪಡಿಸಿದ ತೇಜಸ್ ಉತ್ತಮ ಯುದ್ಧವಿಮಾನ. ಆದರೆ ಅದಕ್ಕಾಗಿ ಸಜ್ಜುಗೊಳಿಸಿದ ಕಾವೇರಿ ಎಂಜಿನ್ ಯಶಸ್ವಿಯಾಗಲಿಲ್ಲ. ನಾವು ವಿದೇಶಿ ಎಂಜಿನ್ ಅನ್ನು ಅದರಲ್ಲಿ ಬಳಸಬೇಕಾಗಿದೆ. ಏರೊ ಎಂಜಿನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದರು.
ಪ್ರಸ್ತುತ ಅತ್ತಾವರದ ಏರೋ ಡೈನಾಮಿಕ್ಸ್ ಅಕಾಡೆಮಿಯಲ್ಲಿ ತರಬೇತಿದಾರನಾಗಿದ್ದು, ವಾಯುಯಾನದ ಆಸಕ್ತಿ ಇರುವವರಿಗೆ ತರಬೇತಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಪತ್ರಕರ್ತ ಪರಮಾನಂದ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
‘ಚೀನಾ ವಾಯುಪಡೆ ನಮಗಿಂತ ಬಲಿಷ್ಠ’ ‘ವಿಮಾನಗಳ ಸಂಖ್ಯೆಯ ದೃಷ್ಟಿಯಲ್ಲಿ ಚೀನಾದ ವಾಯುಪಡೆ ನಮಗಿಂತ ಬಲಿಷ್ಠ. ಅವರಿಗೆ ನಾವು ಸಾಟಿಯೇ ಅಲ್ಲ. ಆದರೆ ಭೌಗೋಳಿಕವಾಗಿ ನಮಗೆ ಕೆಲವೊಂದು ಅನುಕೂಲಗಳಿವೆ. ನಮ್ಮ ವಿಮಾನಗಳನ್ನು ಸಮುದ್ರಮಟ್ಟದಲ್ಲಿ ನಿಲ್ಲಿಸುತ್ತೇವೆ. ಅವರ ವಾಯುನೆಲೆ ಟಿಬೆಟ್‌ನಲ್ಲಿ ಸಮುದ್ರಮಟ್ಟದಿಂದ 10 ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಈ ಎತ್ತರ ಅವರ ಯುದ್ಧವಿಮಾನಗಳ ಕಾರ್ಯಕ್ಷಮತೆ ಕುಗ್ಗುವಂತೆ ಮಾಡುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ನಮ್ಮ ವಾಯುಸೇನೆಯೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಚೀನಾ ವಿರುದ್ಧ ಗೆಲ್ಲುವುದಕ್ಕೆ ಸಾಧ್ಯವಾಗದೇ ಇದ್ದರೂ ಅವರಿಗೆ ತೀವ್ರ ಪ್ರತಿರೋಧ ಒಡ್ಡಲು ಸಮರ್ಥವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.