ADVERTISEMENT

ಮಹಾಕಾಳಿಪಡ್ಪು ಕೆಳಸೇತುವೆ ಶೀಘ್ರ ಲೋಕಾರ್ಪಣೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:29 IST
Last Updated 15 ಜನವರಿ 2026, 4:29 IST
ದರ್ಶನ್ ಎಚ್‌.ವಿ  
ದರ್ಶನ್ ಎಚ್‌.ವಿ     

ಮಂಗಳೂರು: ನಗರದ ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರವೇ ಅದರ ಲೋಕಾರ್ಪಣೆಗೆ ಕ್ರಮವಹಿಸುತ್ತೇವೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ ತಿಳಿಸಿದರು. 

ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಗುರುವಾರ ಉತ್ತರಿಸಿದ ಅವರು, ‘ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೆತ್ತಿಕೊಂಡ ಈ ಕೆಳಸೇತುವೆ ಕಾಮಗಾರಿಯಲ್ಲಿನ್ಯಾಯಾಲಯದಲ್ಲಿರುವ ವ್ಯಾಜ್ಯದ ಕಾರಣಕ್ಕಾಗಿ ಒಂದು ಬದಿಯ ರಸ್ತೆಯ ಕೆಲಸ ಸ್ವಲ್ಪ ಬಾಕಿ ಇದೆ. ಈ ಕೆಳಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಹಾಗೂ ರೈಲ್ವೆ ಇಲಾಖೆಯ ನಿರಾಕ್ಷೇಪ ಪತ್ರವು ಬೇಕಿದೆ. ಈ ಕೆಳಸೇತುವೆ  ವಾಹನ ಸಂಚಾರಕ್ಕೆ ಮುಕ್ತವಾಗದ ಬಳಿಕ ಪಂಪ್‌ವೆಲ್‌– ಕಂಕನಾಡಿವರೆಗಿನ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು. 

ಕರಾವಳಿ ಉತ್ಸವದ  ಅಂತರರಾಷ್ಟ್ರೀಯ ಗಾಳಿಪಟ ಉತ್ಸವವು ಈ ವಾರಾಂತ್ಯದಲ್ಲಿ ನಡೆಯಲಿದೆ. ಈ ವೇಳೆ ಪಂಪ್‌ವೆಲ್‌– ಕಂಕನಾಡಿವರೆಗಿನ ರಸ್ತೆ ಕಾಮಗಾರಿ ಶುರುವಾದರೆ ನಗರದಲ್ಲಿ ವಾಹನ ದಟ್ಟಣೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಇದೇ 17ರ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಎಂದು ಪೊಲೀಸ್‌ ಇಲಾಖೆಯವರು ಸಲಹೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಲಭ್ಯ ಇದ್ದರೆ  ಮುಂದಿನ ವಾರವೇ ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ಸೇತುವೆ ಲೋಕಾರ್ಪಣೆಗೆ ಕ್ರಮ ವಹಿಸುತ್ತೇವೆ. ಇಲ್ಲದಿದ್ದರೆ ಇದೇ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಿದ್ದೇವೆ ಎಂದರು.

ADVERTISEMENT

ಬೀದಿನಾಯಿಗಳ ಆಶ್ರಯ ತಾಣಕ್ಕೆ ಬೊಂಡಂತಿಲದಲ್ಲಿ ಜಾಗ ಗುರುತಿಸಲಾಗಿದೆ. ಸದ್ಯ ಮೂಲ್ಕಿ, ಮಂಗಳೂರು ಹಾಗೂ ಉಳ್ಳಾಲ ತಾಲ್ಲೂಕುಗಳ ಬೀದಿನಾಯಿಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಆಲೋಚನೆ ಇದೆ. ನಗರದ ಎಲ್ಲ ನಾಯಿಗಳಿಗೂ ಅಲ್ಲಿ ಆಶ್ರಯ ಕಲ್ಪಿಸಲಾಗದು. ಅಗತ್ಯ ಇರುವ ಬೀದಿ ನಾಯಿಗಳಿಗೆ ಮಾತ್ರ ಪುನರ್ವಸತಿ ಕಲ್ಪಿಸುತ್ತೇವೆ. ಮನೆಯಲ್ಲಿ ಸಾಕಿದ ನಾಯಿಗಳನ್ನು ಅನಾರೋಗ್ಯ ಮತ್ತಿತರ ಕಾರಣಗಳಿಂದಾಗಿ ಬೀದಿ ಬದಿಯಲ್ಲಿ ಬಿಟ್ಟು ಹೋಗುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಾಯಿ ಸಾಕಲು ಅನುಮತಿ ಕಡ್ಡಾಯಗೊಳಿಸುವ ಬಗ್ಗೆಯೂ ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಕೆಲವೊಂದು ಹೊಸ ಯೋಜನೆಗಳು ಜಾರಿಯಾಗುತ್ತಿವೆ. ಈ ಬಗ್ಗೆ ಆಸಕ್ತಿ ತೋರಿಸಿರುವ ಆರು ಸಂಸ್ಥೆಗಳ ಜೊತೆ ಭರವಸೆ ಒದಗಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಗುರುಪುರ ಬಳಿ ತಾಜ್ ಗ್ರೂಪ್‌ ಹಾಗೂ ಎಸ್‌ಕೆಎಸ್‌ ಗ್ರೂಪ್‌ನವರು ಎರಡು ಪಂಚತಾರಾ ಹೋಟೆಲ್‌ ಮತ್ತು ರೆಸಾರ್ಟ್‌ ನಿರ್ಮಾಣವಾಗಲಿವೆ.  ತಣ್ಣೀರುಬಾವಿ ಬಳಿ 2 ಎಕರೆ ಜಾಗದಲ್ಲಿ ರೆಸಾರ್ಟ್‌ ನಿರ್ಮಾಣವಾಗಲಿದೆ. ಕೂಳೂರು ಸೇತುವೆ ಬಳಿ ಎ.ಜೆ. ಹೋಟೆಲ್‌ನವರು ಹೊಸ ರೆಸಾರ್ಟ್‌ ನಿರ್ಮಿಸಲಿದ್ದಾರೆ’ ಎಂದರು. 

‘ಎಸ್‌ಐಆರ್‌ ಗೊಂದಲ ನಿವಾರಣೆಗೆ ಕ್ರಮ’ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ತಳ ಹಂತದ ಅಧಿಕಾರಿಗಳಲ್ಲಿ ಕೆಲವು ಗೊಂದಲಗಳಿವೆ. ಅದನ್ನು ನಿವಾರಿಸಲು ಮತದಾರರ ನೋಂದಣಿ ಅಧಿಕಾರಿ (ಇಆರ್‌ಒ) ಮತ್ತು ಮತದಾರರ ಸಹಾಯಕ ನೋಂದಣಿ ಅಧಿಕಾರಿ (ಎಇಆರ್‌ಒ)  ಅವರಿಗೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ಮಾಹಿತಿ ಕಾರ್ಯಕ್ರಮ ಆಯೋಜಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.