
ಮಂಗಳೂರು: ಕೇರಳ ಸರ್ಕಾರವು ರೂಪಿಸಿರುವ ‘ಮಲಯಾಳ ಭಾಷಾ ಮಸೂದೆ 2025’ರಲ್ಲಿ ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಮಾರಕವಾಗುವ ಅಂಶಗಳಿವೆ ಎಂಬ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ, ‘ಈ ಮಸೂದೆಯನ್ನು ಮರುಪರಿಶೀಲಿಸಿ’ ಎಂದು ಕೇಂದ್ರ ಭಾಷಾ ಅಲ್ಪ ಸಂಖ್ಯಾತ ಸಹಾಯಕ ಆಯುಕ್ತರು ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಮಸೂದೆಯನ್ನು ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಭಾಷಾ ಅಲ್ಪಸಂಖ್ಯಾತರ ರಕ್ಷಣೆಗಾಗಿ ಸಂವಿಧಾನಬದ್ಧ ಭಾಷಾ ಹಕ್ಕುಗಳನ್ನು ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ರೂಪಿಸಲಾಗಿದೆ. ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವುದು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕು. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕಿಗೆ ಧಕ್ಕೆಯಾಗದಂತೆ ನೀತಿಗಳನ್ನು ರೂಪಿಸಬೇಕಾಗುತ್ತದೆ ಎಂದು ಕನ್ನಡ ಸಂಘಟನೆಗಳು ಪ್ರತಿಪಾದಿಸಿದ್ದವು.
ಭಾಷಾ ಅಲ್ಪಸಂಖ್ಯಾತರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ಅವರ ಮಾತೃಭಾಷೆಯಲ್ಲಿ ಲಭ್ಯವಾಗುವಂತೆ ಆಯಾ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ನೋಡಿಕೊಳ್ಳಬೇಕು. ರಾಜ್ಯ ಸರ್ಕಾರ ರೂಪಿಸುವ ಭಾಷಾ ನೀತಿ ಪ್ರಾದೇಶಿಕ ಸಂಘರ್ಷಗಳಿಗೆ ಕಾರಣವಾಗಬಾರದು ಎಂಬುದು ಸಂವಿಧಾನದ ಮೂಲತತ್ವ ಎಂದು ಕಾನೂನು ತಜ್ಞರು ಅಭಿಪ್ರಾಯ ಪಡುತ್ತಾರೆ.
‘ಮಲಯಾಳ ಭಾಷಾ ಮಸೂದೆಯ ಪ್ರಕಾರ ಕೇರಳದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಮಲೆಯಾಳ ಭಾಷೆ ಕಡ್ಡಾಯ ಮತ್ತು ಮಲಯಾಳವೇ ಪ್ರಥಮ ಭಾಷೆಯಾಗಿರಬೇಕಿದೆ. ಬೇರೆ ಮಾತೃಭಾಷೆಯ ವಿದ್ಯಾರ್ಥಿಗಳೂ ತಮ್ಮ ಮಾತೃಭಾಷೆಯ ಜೊತೆಗೆ ಮಲಯಾಳವನ್ನು ಪ್ರಥಮ ಭಾಷೆಯಾಗಿ ಕಲಿಯಬೇಕಿದೆ. ಕನ್ನಡದ ವಿದ್ಯಾರ್ಥಿಗಳು ತಮ್ಮ ತಾಯಿನುಡಿಯನ್ನು ಪ್ರಥಮ ಭಾಷೆಯಾಗಿ ಕಲಿಯುವ ಅವಕಾಶವನ್ನು ಇದು ಕಸಿದುಕೊಳ್ಳುತ್ತದೆ. ಇದು ಸಂವಿಧಾನದ ಮೂಲತತ್ವಕ್ಕೆ ವಿರುದ್ಧ’ ಎಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಕೇಂದ್ರ ಸರ್ಕಾರದ ಸಹಾಯಕ ಭಾಷಾ ಅಲ್ಪ ಸಂಖ್ಯಾತರ ಆಯುಕ್ತರಿಗೆ ಈಚೆಗೆ ಪತ್ರ ಬರೆದಿದ್ದರು.
ಇದರ ಬೆನ್ನಲ್ಲೇ ಸಹಾಯಕ ಭಾಷಾ ಅಲ್ಪ ಸಂಖ್ಯಾತರ ಆಯುಕ್ತರು ಕೇರಳ ಸರ್ಕಾರದ ಭಾಷಾ ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ಮತ್ತು ನೋಡಲ್ ಅಧಿಕಾರಿಗೆ ಪತ್ರ ಬರೆದಿದ್ದಾರೆ. ಅದರ ಪ್ರತಿಯನ್ನು ಶಿವರಾಮ ಕಾಸರಗೋಡು ಅವರಿಗೂ ಕಳುಹಿಸಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.