ಬಜಪೆ: ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಕಟೀಲು ಶಾಖೆಯಲ್ಲಿ ವ್ಯವಸ್ಥಾಪಕನಾಗಿದ್ದ ಆರೋಪಿಯು ಅಧಿಕಾರವನ್ನು ದುರುಪಯೋಗಪಡಿಸಿ, ಬ್ಯಾಂಕಿನಲ್ಲಿ ನಕಲಿ ಚಿನ್ನಾಭರಣ ಇಟ್ಟು ನಕಲಿ ಸಹಿಗಳನ್ನು ಮಾಡಿ ಒಟ್ಟು ₹ 90.19 ಲಕ್ಷ ಸಾಲ ಪಡೆದು ಸ್ವಂತಕ್ಕೆ ಬಳಸಿಕೊಳ್ಳುವ ಮೂಲಕ ಬ್ಯಾಂಕಿಗೆ ಮತ್ತು ಗ್ರಾಹಕರಿಗೆ ವಂಚಿಸಿದ ಬಗ್ಗೆ ಬಜಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಬ್ಯಾಂಕಿನ ಕಟೀಲು ಶಾಖೆಯಲ್ಲಿ ವ್ಯವಸ್ಥಾಪಕನಾಗಿದ್ದ ದಿನೇಶ್ ಹೆಗಡೆ ಎಂಬಾತ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬ್ಯಾಂಕಿಗೆ ಮತ್ತು ಗ್ರಾಹಕರಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆ ಎಂಬುದಾಗಿ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾಗಿರುವ ವಿಜಯ್ ಅಶೋಕ್ ದೋಟಿಹಾಳ್ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
’ನಾನು 2021ರ ಮೇ 25ರಿಂದ 2024ರ ಮೇ 13ರವರೆಗೆ ಬ್ಯಾಂಕಿನ ಕಟೀಲು ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕನಾಗಿದ್ದೆ. ಈಗ ಬೇರೆ ಶಾಖೆಗೆ ವರ್ಗವಾಗಿದ್ದೇನೆ. ಬ್ಯಾಂಕಿನಲ್ಲಿ ಚಿನ್ನಾಭರಣಗಳನ್ನು ಅಡವಿಟ್ಟು 2024ರ ಜೂನ್ 18ರಂದು ಸಾಲ ಪಡೆದಿದ್ದ ಸುಮಾ ಸುವರ್ಣ ಅವರು ಈ ಹಿಂದೆ ಅಡ ಇಟ್ಟಿದ್ದ ಚಿನ್ನದ ಮೇಲೆ ಹೆಚ್ಚುವರಿ ಸಾಲ ನೀಡುವಂತೆ ಈಗಿನ ಶಾಖಾ ವ್ಯವಸ್ಥಾಪಕರಲ್ಲಿ ಕೋರಿದ್ದರು. ಅವರು ಬ್ಯಾಂಕಿನ ಲಾಕರ್‌ನಲ್ಲಿದ್ದ ಚಿನ್ನಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಅವು ನಕಲಿ ಎಂಬುದು ದೃಢಪಟ್ಟಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಇದರಿಂದ ಸಂಶಯಗೊಂಡು ಬ್ಯಾಂಕಿನ ಕಟೀಲು ಶಾಖೆಯಲ್ಲಿದ್ದ ಚಿನ್ನಾಭರಣಗಳನ್ನು ಪರೀಶಿಲನೆಗೆ ಒಳಪಡಿಸಿದಾಗ ಅಡಮಾನ ಸಾಲ ಪಡೆದಿದ್ದ 30 ಸಾಲ ಖಾತೆಗಳಿಗೆ ಸಂಬಂಧಿಸಿ ಅಡ ಇಟ್ಟ ಚಿನ್ನ ನಕಲಿ ಎಂಬುದು ಗೊತ್ತಾಗಿದೆ. ದಿನೇಶ್ ಹೆಗಡೆ ಎಂಬಾತ ಶಾಖಾ ವ್ಯವಸ್ಥಾಪಕರಾಗಿದ್ದ ಅವಧಿಯಲ್ಲಿ ಬ್ಯಾಂಕಿನ ಒಟ್ಟು 4 ಖಾತೆಗಳಿಗೆ ದಾಖಲಾತಿಗಳನ್ನು ಪರೀಶೀಲಿಸದೆಯೇ ಸಾಲ ಮಂಜೂರು ಮಾಡಿದ್ದ. ಗ್ರಾಹಕರಾದ ಗುರುದತ್ ರಾವ್, ತುಳಸಿನಿ, ಸುಕನ್ಯಾ, ಪ್ರಭಾವತಿ, ವಿಠ್ಠಲ ಮತ್ತು ಮಮತಾ ಎಂಬುವರು ಬ್ಯಾಂಕಿನಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ಆತ ಲಾಕರ್‌ನಿಂದ ತೆಗೆದು, ಬದಲಿಗೆ ನಕಲಿ ಚಿನ್ನಾಭರಣಗಳನ್ನು ಬ್ಯಾಂಕಿನ ಲಾಕರ್ ನಲ್ಲಿಟ್ಟಿದ್ದ. ಅಸಲಿ ಚಿನ್ನಾಭರಣಗಳನ್ನು ಮಣಪ್ಪುರಂ ಫೈನಾನ್ಸ್‌ನ ಮುಲ್ಕಿ ಶಾಖೆಯಲ್ಲಿ ಅಡವಿಟ್ಟಿದ್ದ. ಅವುಗಳನ್ನು 2024ರ ಜುಲೈ 18ರಂದು ಬಿಡಿಸಿ ನನ್ನ ಸುಪರ್ದಿಗೆ ನೀಡಿದ್ದ’ ಎಂದು ವಿಜಯ್ ಅಶೋಕ್ ಆರೋಪಿಸಿದ್ದಾರೆ.
‘ಮೃತಪಟ್ಟಿರುವ ಲಕ್ಷ್ಮೀ ಮತ್ತು ನಿಶ್ಚಲ ಗ್ರಾಹಕರಾದ ಅನಸೂಯ ಮತ್ತು ಲೀಲಾ ಎಂಬುವರ ಹೆಸರಿನಲ್ಲೂ ಆರೋಪಿಯು ಇದೇ ರೀತಿ ವಂಚಿಸಿದ್ದ. ಆ ಗ್ರಾಹಕರಿಗೆ ತಿಳಿಯದಂತೆ ನಕಲಿ ಚಿನ್ನಾಭರಣಗಳನ್ನು ಬೇರೆ ಬ್ಯಾಂಕಿನಲ್ಲಿ ಅಡವಿಟ್ಟು, ಅವರ ಹೆಸರಿನಲ್ಲಿ ಸಾಲ ಪಡೆದು ಸ್ವಂತಕ್ಕೆ ಬಳಸಿಕೊಂಡಿದ್ದ. ಬ್ಯಾಂಕಿನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ ಹರಿಣಾಕ್ಷೀ , ಶಿಲ್ಪಾ ಮತ್ತು ಬ್ಯಾಂಕಿನ ಗ್ರಾಹಕರಾದ ಗೀತಾ, ಉಷಾ, ಸುಮಾ ಸುವರ್ಣ ಹಾಗೂ ಧೀರಜ್ ಎ.ಪಿ ಅವರಲ್ಲಿ, ‘ನನಗೆ ಹಣದ ಅವಶ್ಯಕತೆ ಇದೆ. ನಾನು ನಿಮ್ಮ ಹೆಸರಲ್ಲಿ ನನ್ನ ಚಿನ್ನಾಭರಣಗಳನ್ನು ಅಡವಿಟ್ಟು, ನಂತರ ಬಿಡಿಸಿಕೊಳ್ಳುತ್ತೇನೆ’ ಎಂದು ನಂಬಿಸಿ ಅವರ ಕೈಯಲ್ಲಿ ಅಸಲಿ ಚಿನ್ನಾಭರಣಗಳನ್ನು ನೀಡಿ ಅವರ ಹೆಸರಿನಲ್ಲಿ ಸಾಲ ಪಡೆದು ಸ್ವಂತಕ್ಕೆ ಬಳಸಿಕೊಂಡಿದ್ದ. ಬ್ಯಾಂಕಿನ ಅಸಲಿ ಚಿನ್ನಾಭರಣಗಳನ್ನು ತೆಗೆದು ನಕಲಿ ಚಿನ್ನಾಭರಣಗಳನ್ನು ಇಟ್ಟಿದ್ದ. ಇದೇ ರೀತಿ ತನ್ನ ಪತ್ನಿ ಶ್ರೇಯಾ ಹಾಗೂ ಸ್ನೇಹಿತ ರವೀಂದ್ರ ಅನಂತ ನಾಯಕ್ ಅವರ ಹೆಸರಲ್ಲಿ ಹಾಗೂ ತನ್ನ ಹೆಸರಿನಲ್ಲಿ ಬ್ಯಾಂಕಿನ ಮೌಲ್ಯಮಾಪಕರ ನಕಲಿ ಸಹಿ ಮಾಡಿ ನಕಲಿ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದು ಹಣವನ್ನು ಸ್ವಂತಕ್ಕೆ ಬಳಸಿದ್ದ. ಇದು ನಾನು ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿಗಳು ನೆಡೆಸಿದ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದು ವಿಜಯ್ ಅಶೋಕ್ ದೋಟಿಹಾಳ್ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.