ಮಂಗಳೂರು: ಕೆಂಪು ಕಲ್ಲು ಮತ್ತು ಮರಳಿನ ಅಭಾವ ನೀಗಿಸಲು ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮುಖಂಡರು ವಾಗ್ದಾಳಿ ಮಾಡಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ಕಾರ್ಮಿಕರ ಫೆಡರೇಷನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಯೋಜಿಸಿದ್ದ ಪ್ರತಿಭಟನೆ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಆರಂಭವಾಯಿತು.
ಜಡಿಮಳೆ ಲೆಕ್ಕಿಸದೆ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದ ವರೆಗೆ ಕಾರ್ಮಿಕರು ಘೋಷಣೆ ಕೂಗುತ್ತ ನಡೆದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖಂಡ ಯಾದವ ಶೆಟ್ಟಿ ಅವರು, ಕಾರ್ಮಿಕರು ಮೂರು ತಿಂಗಳಿಂದ ಹಸಿದು ಒದ್ದಾಡುತ್ತಿದ್ದರೆ ವಿಧಾನಸಭಾಧ್ಯಕ್ಷರಿಗೆ ಕಾಳಜಿಯೇ ಇಲ್ಲ ಎಂದು ದೂರಿದರು.
'ಖಾದರ್ ಸೇರಿದಂತೆ ಜಿಲ್ಲೆಯ ಶಾಸಕರೆಲ್ಲರೂ ಆ ಸ್ಥಾನ ಅಲಂಕರಿಸಲು ಅನರ್ಹರು' ಎಂದು ಅವರು ಆರೋಪಿಸಿದರು.
ಕಟ್ಟಡ ನಿರ್ಮಾಣಕಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಯು.ಶೇಖರ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವಾರಗಲಿ ಸರ್ಕಾರವಾಗಲಿ ಶಾಸಕರಾಗಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಮುಂದಾಗಲಿಲ್ಲ. ಪರಿಹಾರಕ್ಕೆ ಸಂಬಂಧಿಸಿ ನಿಲುವು ತಾಳಲು ಅವರಿಗೆ ಸಾಧ್ಯವಾಗಲಿಲ್ಲ ಎಂದರು.
ಶಾಸಕರಿಗೆ ಕಾರ್ಮಿಕರ ಸಮಸ್ಯೆ ಕ್ಷುಲ್ಲಕವಾಗಿ ಕಂಡಿರಬೇಕು ಎಂದು ಹೇಳಿದ ಅವರು 3.5 ಲಕ್ಷ ಕಾರ್ಮಿಕರು ಮೂರೂವರೆ ತಿಂಗಳಿಂದ ಉದ್ಯೋಗ ಮತ್ತು ಆದಾಯ ಇಲ್ಲದೆ ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದಾರೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ₹ ಸಾವಿರಾರು ಕೋಟಿ ಇದ್ದರೂ ಕಾರ್ಮಿಕರ ಕ್ಷೇಮಕ್ಕೆ ಬಳಕೆ ಆಗುತ್ತಿಲ್ಲ ಎಂದರು.
ಕೇರಳ ರಾಜ್ಯದಲ್ಲಿ ರಾಜಧನ ಪಾವತಿಗೆ ಒಳ್ಳೆಯ ಮಾದರಿ ಇದ್ದು ಅದನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಕಲ್ಲು ಮತ್ತು ಮರಳು ಅಲಭ್ಯತೆಯಿಂದ ನಿರ್ಮಾಣ ಕಾಮಗಾರಿಗೆ ಪೂರಕವಾದ ಅನೇಕ ವಲಯಗಳು ಸೊರಗಿವೆ. ಸಾರಾಯಿ ಅಂಗಡಿಯವರು ಕೂಡ ತೊಂದರೆಗೆ ಸಿಲುಕಿದ್ದಾರೆ. ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವವರಿಗೆ ಈ ಬಾರಿ ಸ್ವಾತಂತ್ರ್ಯೋತ್ಸವವೂ ಇಲ್ಲ, ಕೃಷ್ಣಾಷ್ಟಮಿಯೂ ಇಲ್ಲ. ದೇಶ ನಿರ್ಮಾಣ ಕಾರ್ಯ ಮಾಡಿದವರು ಉಪವಾಸ ಬೀಳಬೇಕಾಗಿದೆ ಎಂದು ವಸಂತ ಆಚಾರಿ ಹೇಳಿದರು.
ಕಲ್ಲು ಮತ್ತು ಮರಳಿನ ವಿಷಯದಲ್ಲಿ ವಿಧಾನಸಭಾಧ್ಯಕ್ಷರು ಸುಮ್ಮನಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಏನೇನೋ ಮಾತನಾಡುತ್ತಿದ್ದಾರೆ. ಇದು ರಾಜಕೀಯ ವಿಷಯವಾಗಿ ಮಾರ್ಪಟ್ಟರೆ ಮಾತ್ರ ಪರಿಹಾರ ಸಿಗಬಹುದೇನೋ ಎಂದ ಅವರು ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಾಣದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಬೇಕಾಗುತ್ತದೆ. ಅಲ್ಲಿಗೆ ಮನೆಮಂದಿಯನ್ನೂ ಕರೆತರುತ್ತೇವೆ. ಅಕ್ರಮವಾಗಿಯೇ ಕಲ್ಲು ಮತ್ತು ಮರಳು ಗಣಿಗಾರಿಕೆ ನಾಡಬೇಕು ಎಂದು ಯಾರಾದರೂ ಬಯಸಿದ್ದಾರೆಯೇ? ಅದಕ್ಕೆ ಕುಮ್ಮಕ್ಕು ನೀಡಲು ಸಮಯ ದೂಡುತ್ತಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.
ಯು.ಶೇಖರ್, ಬಿ.ಎಂ ಭಟ್, ದಯಾನಂದ ಕೋಟ್ಯಾನ್, ಯೋಗೀಶ್ ಜಪ್ಪಿನಮೊಗರು ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.