ADVERTISEMENT

ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ

ಜಾನುವಾರು ಸಾಗಾಟರರ ಮೇಲಿನ ಹಲ್ಲೆ ತಡೆ ಹೇಳಿಕೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 11:18 IST
Last Updated 28 ಜುಲೈ 2020, 11:18 IST
ಸಿಂಧೂ ಬಿ.ರೂಪೇಶ್‌
ಸಿಂಧೂ ಬಿ.ರೂಪೇಶ್‌   

ಮಂಗಳೂರು: ಜಾನುವಾರು ಸಾಗಾಟ ಮಾಡುವವರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರಿಗೆ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಕೊಲೆ ಬೆದರಿಕೆ ಹಾಕಿದ್ದಾರೆ.

ಬಕ್ರೀದ್‌ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿ ಜಾನುವಾರು ಸಾಗಾಣಿಕೆ ತಡೆಯುವ ಸಂಬಂಧ ಜಿಲ್ಲಾಧಿಕಾರಿ ಸೋಮವಾರ ಸಭೆ ನಡೆಸಿದ್ದರು. ಜಾನುವಾರು ಸಾಗಾಣಿಕೆ ಮಾಡುವವರನ್ನು ತಡೆದು ಯಾರಾದರೂ ಹಲ್ಲೆ ನಡೆಸಿದರೆ ಅವರ ವಿರುದ್ಧವೂ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರು.

ಈ ಕುರಿತು ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿಯ ತುಣುಕನ್ನು ‘ರಾಮ್‌ ಸೇನಾ ಅಭಿಮಾನಿಗಳು’ ಎಂಬ ವಾಟ್ಸ್ ಆ್ಯಪ್‌ ಗುಂಪಿನಲ್ಲಿ ಹಂಚಿಕೊಂಡಿದ್ದು, ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ‘ಇವಳನ್ನು ಮೊದಲು ಕಡಿದು ಕೊಲ್ಲಬೇಕು’ ಎಂದು ಒಬ್ಬಾತ ಬೆದರಿಕೆ ಹಾಕಿದ್ದಾನೆ.

ADVERTISEMENT

‘ನಮ್ಮ ಹಿಂದುತ್ವಕ್ಕೆ, ನಮ್ಮ ದೇವರಿಗೆ ಯಾರಾದರೂ ಧಕ್ಕೆ ತಂದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅದಕ್ಕಾಗಿ ನಾನು ಜೀವ ತೆಗೆಯುವುದಕ್ಕೂ ಸಿದ್ಧ, ಜೀವ ಕೊಡುವುದಕ್ಕೂ ಸಿದ್ಧ’ ಎಂದು ಮತ್ತೊಬ್ಬ ಪ್ರತಿಕ್ರಿಯಿಸಿದ್ದಾನೆ.

ಸ್ವಯಂಪ್ರೇರಿತ ಪ್ರಕರಣ: ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಷು ಗಿರಿ, ‘ಜಿಲ್ಲಾಧಿಕಾರಿಯವರೇ ದೂರು ನೀಡಿದರೆ ಪ್ರಕರಣ ದಾಖಲಿಸುತ್ತೇವೆ. ಅವರು ದೂರು ನೀಡದಿದ್ದರೆ ನಾವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸುತ್ತೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.