ADVERTISEMENT

ಕುದ್ರೋಳಿ ಗೋಕರ್ಣನಾಥ ಕ್ಷೇತ್ರ | ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಭಕ್ತರ ಮಹಾಪೂರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 12:24 IST
Last Updated 26 ಸೆಪ್ಟೆಂಬರ್ 2022, 12:24 IST
ಮಂಗಳೂರು ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ‘ಮಂಗಳೂರು ದಸರಾ’ ಸಂಭ್ರಮಕ್ಕೆ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು.
ಮಂಗಳೂರು ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ‘ಮಂಗಳೂರು ದಸರಾ’ ಸಂಭ್ರಮಕ್ಕೆ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು.   

ಮಂಗಳೂರು: ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ ಸೋಮವಾರ ಆರಂಭಗೊಂಡಿತು. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್‌ ಅವರ ಉಪಸ್ಥಿತಿಯಲ್ಲಿ ‘ಮಂಗಳೂರು ದಸರಾ’ ಸಂಭ್ರಮಕ್ಕೆ ಚಾಲನೆ ನೀಡಿದರು.

ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದ ದಸರಾ ದರ್ಬಾರ್‌ ಮಂಟಪದಲ್ಲಿ ನವದುರ್ಗೆಯರು ಹಾಗೂ ಗಣಪತಿ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಶಾರದಾ ಮೂರ್ತಿಯನ್ನು ಕ್ಷೇತ್ರದ ಅಂಗಣದಲ್ಲಿ ಪ್ರದಕ್ಷಿಣೆ ನಡೆಸಿ, ಚೆಂಡೆ, ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಹೊತ್ತು ತರಲಾಯಿತು. ದರ್ಬಾರು ಮಂಟಪದ ವೇದಿಕೆಯಲ್ಲಿ ಶಾರದೆಯ ಪ್ರತಿಷ್ಠಾಪನೆಯ ಬಳಿಕ ದೀಪ ಬೆಳಗಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಮಂಗಳೂರು ದಸರಾದ ವಿಶೇಷ ಆಕರ್ಷಣೆ ಹುಲಿವೇಷ ಕುಣಿತ. ಪುಟ್ಟ ಮಕ್ಕಳು ಸೇರಿದಂತೆ ಹುಲಿವೇಷಧಾರಿಗಳ ತಂಡ ಪ್ರತಿಷ್ಠಾಪನೆಗೊಂಡ ಶಾರದಾ ಮಾತೆಯ ವಿಗ್ರಹದ ಎದುರು ಕುಣಿಯುವ ಮೂಲಕ ದಸರಾ ಸಂಭ್ರಮಕ್ಕೆ ಮೆರುಗು ನೀಡಿದರು. ದಸರಾ ಮಹೋತ್ಸವದ ಪ್ರಥಮ ದಿನದಂದೇ ಕ್ಷೇತ್ರದ ತುಂಬಾ ಭಕ್ತರ ಮಹಾಪೂರವೇ ಹರಿದು ಬಂದಿತ್ತು.

ADVERTISEMENT

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಭಂಡಾರಿ, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಮೊಯ್ದಿದ್ದಿನ್ ಬಾವ, ಐವನ್ ಡಿಸೋಜ, ಮಾಜಿ ಮೇಯರ್‌ ಕವಿತಾ ಸನಿಲ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್, ಟ್ರಸ್ಟಿಗಳಾದ ಶೇಖರ್ ಪೂಜಾರಿ, ರವಿಶಂಕರ ಮಿಜಾರು, ಜಗದೀಪ್ ಡಿ. ಸುವರ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷೆ ಡಾ.ಅನಸೂಯ ಬಿ.ಟಿ. ಸಾಲ್ಯಾನ್, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಲೀಲಾಕ್ಷ ಕರ್ಕೇರಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್ ಕಾರಣದಿಂದ ಎರಡು ವರ್ಷಗಳಲ್ಲಿ ಸಾಕಷ್ಟು ನಿರ್ಬಂಧಗಳೊಂದಿಗೆ ಪಾಲನೆಯೊಂದಿಗೆ ಆಚರಿಸಿದ್ದ ‘ಮಂಗಳೂರು ದಸರಾ’ ಈ ಬಾರಿ ಮತ್ತೆ ಹಿಂದಿನ ಸಡಗರದೊಂದಿಗೆ ಆರಂಭಗೊಂಡಿದೆ.

ಮುಂದಿನ ವರ್ಷದ ದಸರಾಕ್ಕೆ ನಾನಿರುವೆನೋ ಗೊತ್ತಿಲ್ಲ. ಆದರೆ, ‘ಮಂಗಳೂರು ದಸರಾ’ ಎಂದೆಂದಿಗೂ ಅದ್ಧೂರಿಯಾಗಿ ನಡೆಯಲಿದೆ. ಇದು ಎಲ್ಲವೂ ದೇವರ ಕೃಪೆ. ಮಂಗಳೂರು ದಸರಾವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ.
ಬಿ. ಜನಾರ್ದನ ಪೂಜಾರಿ, ಕ್ಷೇತ್ರದ ನವೀಕರಣದ ರೂವಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.