ADVERTISEMENT

ಭಕ್ತಿಯ ಅಲೆಯಲ್ಲಿ ಕಡಲ ನಗರಿ

ಎಲ್ಲೆಲ್ಲೂ ನವರಾತ್ರಿ ಸಡಗರ, ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:37 IST
Last Updated 24 ಸೆಪ್ಟೆಂಬರ್ 2025, 6:37 IST
ನವರಾತ್ರಿಯ ಎರಡನೇ ದಿನ ಕಡುನೀಲಿ ಸೀರೆಯಲ್ಲಿ ಮಿನುಗಿದ ಕುದ್ರೋಳಿ ಶಾರದೆ
ನವರಾತ್ರಿಯ ಎರಡನೇ ದಿನ ಕಡುನೀಲಿ ಸೀರೆಯಲ್ಲಿ ಮಿನುಗಿದ ಕುದ್ರೋಳಿ ಶಾರದೆ    

ಮಂಗಳೂರು: ದೇವಿ ಆರಾಧನೆಯೇ ಪ್ರಧಾನವಾಗಿರುವ ನವರಾತ್ರಿ ಹಬ್ಬದ ಸಂಭ್ರಮ ಕಡಲ ನಗರಿಯಲ್ಲಿ ಕಳೆಗಟ್ಟಿದೆ. ದೇವಿ ದೇವಸ್ಥಾನಗಳು, ಶಾರದಾ ಮಾತೆ ಪ್ರತಿಷ್ಠಾಪಿಸಿರುವ ಮಂಟಪಗಳಲ್ಲಿ ಪೂಜೆ, ಹೋಮ, ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ.

ಮಂಗಳೂರು ದಸರಾ ಖ್ಯಾತಿಯ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಜಿಲ್ಲೆ– ಹೊರಜಿಲ್ಲೆ, ಹೊರ ರಾಜ್ಯಗಳು ಭಕ್ತರು ಭೇಟಿ ನೀಡಿದರು. ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಮಹಾಗಣಪತಿ, ಶಾರದೆ, ನವದುರ್ಗೆಯರನ್ನು ಕಣ್ತುಂಬಿಕೊಂಡರು.

ಈ ಬಾರಿ ಮಂಟಪವನ್ನು ಭಿನ್ನವಾಗಿ ನಿರ್ಮಿಸಲಾಗಿದ್ದು, ತುಳುನಾಡು ಸಂಸ್ಕೃತಿಯ ಛಾಯೆ ಮನಸೂರೆಗೊಳ್ಳುತ್ತಿದೆ. ತುಳುನಾಡಿನ ದೇವಾಲಯಗಳ ಹೊದಿಕೆಯ ಮಾದರಿಗಳು ಸೀಲಿಂಗ್‌ನಲ್ಲಿವೆ. ಉತ್ತರ ಭಾರತ, ದಕ್ಷಿಣ ಭಾರತದ ಕೆತ್ತನೆಗಳನ್ನೂ ಕಾಣಬಹುದಾಗಿದೆ. ಜಯ–ವಿಜಯ ಮಾದರಿಯ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತವೆ. ಮೂಲ್ಕಿಯ ಸುವರ್ಣ ಆರ್ಟ್ಸ್‌ನ ಚಂದ್ರಶೇಖರ ಸುವರ್ಣ ತಂಡದವರು ಇದನ್ನು ನಿರ್ಮಿಸಿದ್ದಾರೆ.

ADVERTISEMENT

ಮಂಗಳವಾರ ಕುದ್ರೋಳಿಯಲ್ಲಿ ದುರ್ಗಾಹೋಮ, ಪುಷ್ಪಾಲಂಕಾರ ಪೂಜೆ, ಭಜನೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ಬಹುಭಾಷಾ ಕವಿಗೋಷ್ಠಿ, ನೃತ್ಯ ವೈಭವ ನಡೆಯಿತು.

ನವರಾತ್ರಿಯ ಎರಡನೇ ದಿನ ಮಂಗಳಾದೇವಿ ನೀಲಿ ಸೀರೆ ಧರಿಸಿ, ಆರ್ಯದೇವಿಯಾಗಿ ಕಂಗೊಳಿಸಿದಳು. ಸಹಸ್ರಾರು ಭಕ್ತರು ಮಂಗಳಾದೇವಿಗೆ ಭೇಟಿ ನೀಡಿ, ಸೇಸೆ, ಸೀರೆ, ಕುಂಕುಮಾರ್ಚನೆ ಸೇವೆ ಒಪ್ಪಿಸಿದರು. ಮಹಿಳೆಯರು ಲಲಿತಾ ಸಹಸ್ರನಾಮ ಪಠಿಸಿದರು. ನಿರಂತರ ಭಜನೆ ಕಾರ್ಯಕ್ರಮಗಳು ನಡೆದವು. ಹಳೆಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ ನಡೆಯಿತು.

ಉರ್ವ ಮಾರಿಯಮ್ಮ ದೇವಾಲಯದಲ್ಲಿ ಭಜನೆ, ಸರ್ವಾಲಂಕಾರ ಪೂಜೆ, ಮಹಾಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ಕೊಡಿಯಾಲ್‌ಬೈಲ್ ಗ್ರಾಮದವರು ಮಹಾಪೂಜೆಯ ಸೇವೆ ಸಲ್ಲಿಸಿದರು.

ನವರಂಗಿನ ಸಡಗರದಲ್ಲಿರುವ ಮಹಿಳೆಯರು, ಮಂಗಳವಾರ ಹಸಿರು ಸೀರೆಯುಟ್ಟು ದೇವಾಲಯಗಳಿಗೆ ಭೇಟಿ, ಕುಂಕುಮಾರ್ಚನೆ, ಹೂವಿನ ಪೂಜೆ ಸಲ್ಲಿಸಿದರು. ಗೆಳತಿಯರ ಜೊತೆಗೂಡಿ ಫೋಟೊ ಕ್ಲಿಕ್ಕಿಸಿಕೊಂಡರು.

ಆಯರ್ದೇವಿಯಾಗಿ ಕಂಗೊಳಿಸಿದ ಮಂಗಳಾದೇವಿ ಉರ್ವ ಮಾರಿಗುಡಿಯಲ್ಲಿ ವಿಶೇಷ ಪೂಜೆ, ಭಜನೆ ಸೇವೆ ಹಳೆಕೋಟೆ ಮಾರಿಯಮ್ಮ, ಭಗವತಿ ಕ್ಷೇತ್ರದಲ್ಲಿ ಮಹಾಪೂಜೆ

ಹಾದಿಯುದ್ದಕ್ಕೂ ಮಿನುಗುವ ದೀಪ ಇಡೀ ನಗರದಲ್ಲಿ ಮಾರ್ನೆಮಿ ಹಬ್ಬದ ಸಡಗರ ಹಬ್ಬಿದೆ. ನಾರಾಯಣಗುರು ವೃತ್ತದಿಂದ ಪಿವಿಎಸ್‌ ವೃತ್ತದವರೆಗೆ ಉರ್ವ ಮಾರಿಯಮ್ಮನ ಗುಡಿಗೆ ತೆರಳುವ ಮಾರ್ಗ ಕುದ್ರೋಳಿಗೆ ಸಾಗುವ ರಸ್ತೆ ಪಾಂಡೇಶ್ವರದಿಂದ ಮಂಗಳಾದೇವಿಗೆ ಹೋಗುವ ಮಾರ್ಗವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ರಸ್ತೆ ವಿಭಜಕಕ್ಕೆ ಮರು ಬಣ್ಣ ಬಳಿಯುವ ಕಾರ್ಯದಲ್ಲಿ ಕೆಲಸಗಾರರು ನಿರತರಾಗಿದ್ದಾರೆ. ಡೋಲು ತಾಸೆ ಅಬ್ಬರ ಹುಲಿಕುಣಿತದ ಸೊಬಗು ಹಬ್ಬದ ಅಲೆಯನ್ನು ಸೃಷ್ಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.