ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶೋತ್ಸವ ಆಚರಣೆ ಇದೇ ಬುಧವಾರ ಆರಂಭವಾಗಲಿದ್ದು, ಇದಕ್ಕಾಗಿ ಸಡಗರದ ಸಿದ್ಧತೆಗಳು ನಡೆದಿವೆ. ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಪ್ರದೇಶಗಳನ್ನು ಹೂವು ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಕೆಲವೆಡೆ ಬೀದಿಗಳ ಉದ್ದಕ್ಕೂ ಝಗಮಗಿಸುವ ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗಿದೆ.
ಸಾರ್ವಜನಿಕವಾಗಿ ಪೂಜೆಗೊಳ್ಳಲಿರುವ ವಿನಾಯಕನ ಮೂರ್ತಿಗಳನ್ನು ಸೋಮವಾರ ಅದ್ಧೂರಿ ಮೆರವಣಿಗೆಯೊಂದಿಗೆ ವಾಹನಗಳಲ್ಲಿ ಒಯ್ಯಲಾಯಿತು. ವಿಗ್ರಹ ಪ್ರತಿಷ್ಠಾಪಿಸುವ ಪೀಠಗಳನ್ನು ಹೂವುಗಳಿಂದ ಅಲಂಕರಿಸುವ ಹಾಗೂ ಉತ್ಸವದ ಸಂದರ್ಭದಲ್ಲಿ ನಡೆಯುವ ಹೋಮ, ವಿಶೇಷ ಪೂಜೆಗಳಿಗಾಗಿ ಸಾಮಗ್ರಿಗಳನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಸ್ವಯಂಸೇವಕರು ನಿರತರಾಗಿರುವುದು ಕಂಡು ಬಂತು.
ಚೌತಿ ಪ್ರಯುಕ್ತವಾಗಿ ಭಕ್ತಿ ರಸಮಂಜರಿ, ತಾಳಮದ್ದಲೆ, ನಾಟಕ, ನೃತ್ಯರೂಪಕ, ಹರಿಕತೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಗಣೇಶೋತ್ಸವ ಆಚರಣಾ ಸಮಿತಿಗಳು ಚಿತ್ರ ರಚನೆ, ಭಕ್ತಿಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳು ಆಯೋಜಿಸಿವೆ.
ಮಂಗಳೂರಿನ ಸಂಘನಿಕೇತನದ ಆವರಣದಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಯನ್ನು ಮಣ್ಣಗುಡ್ಡದಿಂದ ಮೆರವಣಿಗೆಯಲ್ಲಿ ಮಂಗಳವಾರ ಕೊಂಡೊಯ್ಯಲಾಯಿತು
ಶರವು ದೇವಸ್ಥಾನದಲ್ಲಿ ಪಲ್ಲಪೂಜೆ:
ನಗರದ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಚೌತಿ ಮಹಾಗಣಪತಿ ಹೋಮ ಏರ್ಪಡಿಸಿದ್ದು ಮಧ್ಯಾಹ್ನ 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಬಳಿಕ 5000 ತೆಂಗಿನ ಕಾಯಿಯ ಪಲ್ಲಪೂಜೆ ನಡೆಯಲಿದೆ. 12 ಗಂಟೆಗೆ ಮಹಾ ಪೂಜೆ ಹಾಗೂ ಮಧ್ಯಾಹ್ನ 12.30ಕ್ಕೆ ರಥೋತ್ಸವ ಜರುಗಲಿದೆ. ಸಂಜೆ 5ರಿಂದ ಚೌತಿ ಮಹಾಗಣಪತಿ ಹೋಮದ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5ರಿಂದ ಶರವು ಶರಭೇಶ್ವರ ಕೃಪಾಪೋಷಿತ ಯಕ್ಷಗಾನ ಸಂಘದವರು ತಾಳ ಮದ್ದಲೆ ನಡೆಸಿಕೊಡಲಿದ್ದಾರೆ.
ಪುತ್ತೂರು: ಕಿಲ್ಲೆ ಗಣೇಶನಿಗೆ ಸ್ವರ್ಣಲೇಪಿತ ಆಭರಣ
ಇಲ್ಲಿನ ಕಿಲ್ಲೆ ಮೈದಾನದಲ್ಲಿ ಪುತ್ತೂರು ದೇವತಾ ಸಮಿತಿಯ ಆಶ್ರಯದಲ್ಲಿ 68ನೇ ವರ್ಷದ ಸಾರ್ವಜನಿಕ ಮಹಾ ಗಣೇಶೋತ್ಸವ ಇದೇ 27ರಿಂದ ಸೆ.2ರವರೆಗೆ ನಡೆಯಲಿದೆ. ಇಲ್ಲಿ ಆರಾಧನೆಗೊಳ್ಳುವ ಗಣೇಶನ ವಿಗ್ರಹ ಈ ಬಾರಿ ಮತ್ತಷ್ಟು ಸ್ವರ್ಣಾಭರಣಗಳೊಂದಿಗೆ ಕಂಗೊಳಿಸಲಿದೆ. ಕಾರಣಿಕ ಗಣಪತಿ ಎಂದೇ ಪ್ರಸಿದ್ಧಿಯಾಗಿರುವ ಇಲ್ಲಿನ ಗಣಪತಿಗೆ ಈ ಹಿಂದೆಯೇ ಸಮರ್ಪಣೆಗೊಂಡಿರುವ ಕಿರೀಟಕಿವಿ ಆಭರಣಗಳಲ್ಲದೇ ಈ ಬಾರಿ ಸ್ವರ್ಣ ಲೇಪಿತ ಸೊಂಡಿಲು ಮತ್ತು ಕರ್ಣಾದ್ಯಗಳು ಸಮರ್ಪಣೆಯಾಗಲಿದೆ. ಇದೇ 27ರಂದು ಬೆಳಿಗ್ಗೆ ಗಣೇಶ ಮೂರ್ತಿಯ ಪ್ರತಿಷ್ಠೆ ನಡೆಯಲಿದೆ. ಇದೇ 31ರಂದು ನಡೆಯುವ ಬಾಲಗಣಪತಿ ಹೋಮ ಈ ಸಲದ ಚೌತಿಯ ವಿಶೇಷ. ಸೆ.2ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹೋಮ ಸಂಜೆ ದೇವರ ಬಲಿ ಉತ್ಸವ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವದ ಕೋಲ ನಡೆಯಲಿದೆ.
ಬಂಟ್ವಾಳ: ಶತಮಾನಗಳ ಇತಿಹಾಸದ ಗಣಪತಿ ದೇಗುಲಗಳು
ಇಲ್ಲಿನ ಸಜಿಪ ಮುನ್ನೂರು ಗ್ರಾಮದ ಕಾರಣಿಕ ಪ್ರಸಿದ್ಧ ನಂದಾವರ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರಕ್ಕೆ ಸುಮಾರು 800ವರ್ಷಗಳ ಇತಿಹಾಸವಿದೆ. ಇಲ್ಲಿನ ಸಜಿಪ ಮೂಡ ಗ್ರಾಮದ ಅನ್ನಪ್ಪಾಡಿ ಬಾಲಗಣಪತಿ ದೇವಸ್ಥಾನವೂ ಸುಮಾರು 300 ವರ್ಷಗಳಷ್ಟು ಹಳೆಯದು. ಈ ಎರಡೂ ದೇವಸ್ಥಾನಗಳ ಗಣೇಶೋತ್ಸವ ಬಲು ವಿಶೇಷ.ಸಾಮೂಹಿಕ ಗಣಯಾಗ ಅಪ್ಪದಪೂಜೆ ಮತ್ತು ಭಕ್ತರಿಗೆ ತೆನೆ ವಿತರಣೆ ನಡೆಯಲಿದೆ ಎಂದು ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ತಿಳಿಸಿದರು. ಕೊಯಿಲ ಗ್ರಾಮದ ಮಾವಂತೂರು ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಸುಮಾರು 150ವರ್ಷಗಳ ಇತಿಹಾಸವಿದೆ. ಇಲ್ಲಿ ಗಣಯಾಗ ಮತ್ತು ಸಾಮೂಹಿಕ ಅಪ್ಪದಪೂಜೆ ಸಹಿತ ತೆನೆ ವಿತರಣೆ ನಡೆಯಲಿದೆ ಎಂದು ದೇವಳದ ಮೋಕ್ತೆಸರ ಎಂ. ಪದ್ಮರಾಜ ಬಳ್ಳಾಲ್ ತಿಳಿಸಿದರು. ಲಕ್ಷ್ಮೀ ಸಹಿತ ದಶಭುಜ ಗಣಪ: ವಗ್ಗ ರಾಷ್ಟೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀಗಾಯತ್ರೀ ದೇವಿ ದೇವಸ್ಥಾನ ದಲ್ಲಿ 3 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾದ ಗಣಪತಿ ಗುಡಿಯಲ್ಲಿ ಲಕ್ಷ್ಮೀ ಸಹಿತ ದಶ ಭುಜ ಗಣಪತಿ ವಿಗ್ರಹವಿದೆ. ಭಕ್ತರ ಅಭೀಷ್ಟೆಗಳನ್ನು ಈಡೇರಿಸುವುದಕ್ಕೆ ಹೆಸರಾದ ಈ ಕ್ಷೇತ್ರದಲ್ಲೂ ಗಣೇಶೋತ್ಸವ ಭಾರಿ ಭಕ್ತರನ್ನು ಸೆಳೆಯುತ್ತಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ. ಎಸ್. ಪಂಡಿತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.