
ಮಂಗಳೂರು: ಮಂಗಳೂರು ಬೈಪಾಸ್ ಮೂಲಕ ಹಾದು ಹೋಗುವ ಸುರತ್ಕಲ್–ಬಿ.ಸಿ.ರೋಡ್ ಹೆದ್ದಾರಿ ವಿಸ್ತರಣೆ ಹಾಗೂ ತಲಪಾಡಿಯಿಂದ ಕುಂದಾಪುರದವರೆಗಿನ ಎನ್‌ಎಚ್– 66ರಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಬಿ.ಸಿ.ರೋಡ್- ಸುರತ್ಕಲ್ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಜತೆಗೆ ತಲಪಾಡಿಯಿಂದ ಕುಂದಾಪುರದವರೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕೆಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆ ಆಗಿತ್ತು. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿನಯ್ ಕುಮಾರ್ ಭೇಟಿಯಾಗಿ ವಿನಂತಿಸಲಾಗಿತ್ತು. ಡಿಪಿಆರ್ ಅನುಮೋದನೆಯಿಂದ ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ತಾಂತ್ರಿಕ ಮತ್ತು ಆಡಳಿತಾತ್ಮಕ ನೆಲೆ ಸಿದ್ಧವಾಗಲಿದೆ ಎಂದು ಅವರು ಹೇಳಿದ್ದಾರೆ.
ಬಿಸಿ ರೋಡ್‌ನಿಂದ ಪಡೀಲ್-ನಂತೂರು ವೃತ್ತದ ಮೂಲಕ ಹಾದು ಹೋಗುವ ಈ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವುದರಿಂದ ಮಂಗಳೂರು ನಗರಕ್ಕೆ ಬೈಪಾಸ್ ರಸ್ತೆಯ ಅನುಕೂಲ ದೊರೆಯಲಿದೆ. ಮಂಗಳೂರು ಬೈಪಾಸ್ ಅಭಿವೃದ್ಧಿಯಾಗುವುದರಿಂದ ನಂತೂರು ಭಾಗದ ವಾಹನ ದಟ್ಟಣೆ, ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಈ ಯೋಜನೆಯಡಿ ತಲಪಾಡಿಯಿಂದ ಕುಂದಾಪುರದವರೆಗೆ ಪ್ರತ್ಯೇಕ ಸರ್ವಿಸ್ ರಸ್ತೆ ನಿರ್ಮಾಣವಾಗಲಿದೆ. ಈ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಈಗಾಗಲೇ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯಿಂದ ಬೈಕಂಪಾಡಿವರೆಗೆ ಎಲಿವೇಟೆಡ್ ರಸ್ತೆ ಕೂಡ ನಿರ್ಮಾಣವಾಗಲಿದೆ. ಈ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರು ಆಗಿದ್ದು, ಟೆಂಡರ್ ಹಂತಕ್ಕೆ ಬಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.