ADVERTISEMENT

ಜುವೆಲ್ಲರಿ‌ ದರೋಡೆ ಪ್ರಕರಣ: ಅಫ್ಗಾನ್ ಪ್ರಜೆಗಳು ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 9:10 IST
Last Updated 26 ಸೆಪ್ಟೆಂಬರ್ 2019, 9:10 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಮಂಗಳೂರು:ನಗರದ ಭವಂತಿ ಸ್ಟ್ರೀಟ್‌ನಲ್ಲಿರುವ ಅರುಣ ಜುವೆಲ್ಲರ್ಸ್‌ ಚಿನ್ನದ ಮಳಿಗೆಯ ಗೋಡೆಗೆ ಕನ್ನ ಕೊರೆದು ₹ 90 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 2.8 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಅಫ್ಗಾನ್ ಮೂಲದ ಅಂತರರಾಷ್ಟ್ರೀಯ ತಂಡ ಬಳಸಿ ಕೃತ್ಯ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್‌. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಪ್ರಕರಣದ ಪ್ರಮುಖ ಆರೋಪಿ ಕೇರಳದ ಮುಹ್ತಸಿಮು ಅಲಿಯಾಸ್ ತಸ್ಲಿಮ್, ಅಫ್ಗಾನಿಸ್ಥಾನದ ವಾಲಿ ಮೊಹಮ್ಮದ್ ಶಾಫಿ, ಮಹಮ್ಮದ್ ಅಜೀಮ್ ಕುರಾಮ್ ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಕೇರಳದ ಕುಂಞಿ ಅಹ್ಮದ್ ಮತ್ತು ಅಫ್ಗಾನಿಸ್ಥಾನದ ಫರೀದ್ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದರು.

ADVERTISEMENT

ಘಟನೆ ವಿವರ: ಅರುಣ ಜುವೆಲ್ಲರ್ಸ್‌ ಮಾಲೀಕ ಅನಿಲ್‌ ಶೇಟ್‌ ಅವರು ತಮ್ಮ ಚಿನ್ನಾಭರಣ ಮಳಿಗೆಯನ್ನು ಇದೇ 1 ರಂದು ಭಾನುವಾರ ಮಧ್ಯಾಹ್ನ ಮುಚ್ಚಿ ಹೋಗಿದ್ದರು. ಇದೇ 2 ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಳಿಗೆ ತೆರೆದಿರಲಿಲ್ಲ. 3ರಂದು ಬೆಳಿಗ್ಗೆ ಮಳಿಗೆ ತೆರೆಯುವಾಗ ಕಳ್ಳತನ ನಡೆದಿರುವುದು ತಿಳಿದುಬಂದಿತ್ತು. ಜುವೆಲ್ಲರಿಯ ಹಿಂಭಾಗದಲ್ಲಿ ಸುಮಾರು ಎರಡು ಅಡಿ ಚೌಕದ ಅಳತೆಯಲ್ಲಿ ದುಷ್ಕರ್ಮಿಗಳು ಗೋಡೆ ಕೊರೆದಿದ್ದು, ಕಿಂಡಿಯಿಂದ ಒಳ ಪ್ರವೇಶಿಸಿ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಮಳಿಗೆಯಲ್ಲಿ ಸುಮಾರು ₹ 90 ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ವಿನ್ಯಾಸದ ಚಿನ್ನಾಭರಣಗಳು ಕಳವು ಮಾಡಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ, ಶ್ವಾನದಳ, ಬೆರಳಚ್ಚು ತಜ್ಞರ ಮೂಲಕ ತನಿಖೆ ಆರಂಭಿಸಿದ್ದರು.

ಮಳಿಗೆ ಹಾಗೂ ಪಕ್ಕದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪಡೆದುಕೊಂಡಿದ್ದರು. ದರೋಡೆಯ ಪ್ರಮುಖ ಆರೋಪಿ ಮುಹ್ತಸಿಮು ವಿರುದ್ಧ ಕಾಸರಗೋಡು ಹಾಗೂ ಬೇಕಲ ಠಾಣೆಯಲ್ಲಿ ಸುಮಾರು ಹನ್ನೆರಡು ಪ್ರಕರಣಗಳು ದಾಖಲಾಗಿವೆ. ಈತ ಭೂಗತ ಲೋಕದೊಂದಿಗೆ ಹಾಗೂ ದುಬೈನಲ್ಲಿ ತಲೆಮರೆಸಿಕೊಂಡಿರುವ ಪಾತಕಿ ಜತೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಇಬ್ಬರು ಅಫ್ಗಾನ್ ಪ್ರಜೆಗಳ ವಿರುದ್ದ ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಾಗಿದೆ ಎಂದು ತಿಳಿದುಬಂದಿದೆ. ಬಂಧಿತ ಎಲ್ಲ ಆರೋಪಿಗಳನ್ನು ಮಂಗಳವಾರ (ಇದೇ 25) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಂಧಿತರಲ್ಲಿ ಇಬ್ಬರು ಅಫ್ಗಾನ್ ಪ್ರಜೆಗಳಾಗಿರುವುದರಿಂದ, ಪ್ರೋಟೋಕಾಲ್ ಪ್ರಕಾರ ಅಫ್ಗಾನಿಸ್ಥಾನದ ರಾಯಭಾರ ಕಚೇರಿಗೆ ರವಾನೆ ಮಾಡಿದ್ದು, ಬಂಧನದ ಬಗ್ಗೆ ವರದಿಯನ್ನು ನವದೆಹಲಿಯ ವಿದೇಶಾಂಗ ವ್ಯವಹಾರಗಳ ಉಪ ಕಾರ್ಯದರ್ಶಿಗೆ ರವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.